ಸಾರಾಂಶ
ಅಧಿಕಾರ ಎಲ್ಲಿ ಸಿಗುತ್ತದೆಯೋ ಯೋಗೇಶ್ವರ್ ಅಲ್ಲಿಗೆ ಜಂಪ್ ಆಗುತ್ತಾರೆ. ಯಾವಾಗ ತರಾತುರಿಯಲ್ಲಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರೋ ಆಗಲೇ ಅವರು ಕಾಂಗ್ರೆಸ್ ಸೇರುವುದು ನಿಶ್ಚಿತವಾಗಿತ್ತು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು : ಅಧಿಕಾರ ಎಲ್ಲಿ ಸಿಗುತ್ತದೆಯೋ ಯೋಗೇಶ್ವರ್ ಅಲ್ಲಿಗೆ ಜಂಪ್ ಆಗುತ್ತಾರೆ. ಯಾವಾಗ ತರಾತುರಿಯಲ್ಲಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರೋ ಆಗಲೇ ಅವರು ಕಾಂಗ್ರೆಸ್ ಸೇರುವುದು ನಿಶ್ಚಿತವಾಗಿತ್ತು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರಿಗೆ 25 ವರ್ಷ ರಾಜಕೀಯ ಅನುಭವವಿದೆ. ಅವರು ಒಂದು ಬದ್ಧತೆ ಇಟ್ಟುಕೊಂಡು ರಾಜಕೀಯ ಮಾಡಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.
ನಮ್ಮಿಂದ ಯಾವುದೇ ತಪ್ಪು ಆಗಿಲ್ಲ. ಜೆಡಿಎಸ್ ಪಕ್ಷದಿಂದಲೇ ಅವರು ಸ್ಪರ್ಧೆ ಮಾಡಬಹುದಿತ್ತು. ದೇವೇಗೌಡರು ಮತ್ತು ಕುಮಾರಸ್ವಾಮಿ ಜತೆ ಚರ್ಚೆ ಮಾಡಬಹುದಿತ್ತು. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ. ಕಳೆದ ಎರಡು ತಿಂಗಳಿಂದ ಯೋಗೇಶ್ವರ್ ಕಾಂಗ್ರೆಸ್ ಅವರ ಜತೆ ಸಂಪರ್ಕದಲ್ಲಿದ್ದರು. ರಾಜಕಾರಣವನ್ನು ಅಳೆದು ತೂಗಿ ಮಾಡುವ ಬುದ್ಧಿವಿಗಳಿಗೆ ಅವರ ಮುಂದಿನ ಜೀವನ ಹೇಗಿರುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.
ಬಿಜೆಪಿಯ ರಾಜ್ಯಮಟ್ಟದ ಒಕ್ಕಲಿಗರನ್ನು ಕುಮಾರಸ್ವಾಮಿ ಅವರು ತುಳಿಯುತ್ತಾರೆ ಎನ್ನುವ ಅವರ ಮಾತಿಗೆ ಹಿಂದೆ ಕುಮ್ಮಕ್ಕು ಕೊಟ್ಟವರು ಯಾರು ಎಂಬುದನ್ನು ಪ್ರಸ್ತುತ ಬೆಳವಣಿಗೆ ನೋಡಿದರೆ ರಾಜ್ಯದ ಜನಕ್ಕೆ ಗೊತ್ತಾಗುತ್ತಿದೆ ಎಂದು ತೀಕ್ಷ್ಣವಾಗಿ ಹೇಳಿದರು.
ಡಿಕೆಸು ಯಾಕೆ ಧೈರ್ಯ ಮಾಡಲಿಲ್ಲ:
ಕಳೆದ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಸಚಿವರೂ ಸೇರಿದಂತೆ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಯಾಕೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಧೈರ್ಯ ಮಾಡಲಿಲ್ಲ? ಡಿ.ಕೆ.ಸುರೇಶ್ ನಿಲ್ಲುವ ಧೈರ್ಯ ಪ್ರದರ್ಶನ ಮಾಡಲಿಲ್ಲ ಯಾಕೆ? ಹೊರಗಿನಿಂದ ಯಾಕೆ ಹೈಜಾಕ್ ಮಾಡಿ ಅಭ್ಯರ್ಥಿ ಆಗಿಸುತ್ತಿದ್ದಾರೆ ಎಂದು ನಿಖಿಲ್ ಇದೇ ವೇಳೆ ಪ್ರಶ್ನೆಗಳ ಸುರಿಮಳೆಗೈದರು.