ಸಾರಾಂಶ
ವಿಧಾನಸಭೆ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಬುಧವಾರ ತಡರಾತ್ರಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಸಂಡೂರು ಕ್ಷೇತ್ರಕ್ಕೆ ಸಂಸದ ಇ.ತುಕಾರಾಂ ಪತ್ನಿ ಇ.ಅನ್ನಪೂರ್ಣ ಅವರಿಗೆ ಹಾಗೂ ಸಿ.ಪಿ.ಯೋಗೇಶ್ವರ್‌ಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಘೋಷಿಸಿದೆ.
ಬೆಂಗಳೂರು : ವಿಧಾನಸಭೆ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಬುಧವಾರ ತಡರಾತ್ರಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ನಿರೀಕ್ಷೆಯಂತೆ ಸಂಡೂರು ಕ್ಷೇತ್ರಕ್ಕೆ ಸಂಸದ ಇ.ತುಕಾರಾಂ ಪತ್ನಿ ಇ.ಅನ್ನಪೂರ್ಣ ಅವರಿಗೆ ಹಾಗೂ ಬುಧವಾರವಷ್ಟೇ ಕಾಂಗ್ರೆಸ್ ಸೇರಿದ್ದ ಸಿ.ಪಿ.ಯೋಗೇಶ್ವರ್‌ಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಘೋಷಿಸಿದೆ.
ಆದರೆ, ಪಂಚಮಸಾಲಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ನಡುವೆ ತೀವ್ರ ಹಗ್ಗ-ಜಗ್ಗಾಟವಿರುವ ಶಿಗ್ಗಾಂವಿ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ.
ಮಂಗಳವಾರವಷ್ಟೇ ನಗರಕ್ಕೆ ಆಗಮಿಸಿದ್ದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಪ್ಯಾನೆಲ್ ಅಖೈರು ಮಾಡಿಕೊಂಡಿದ್ದ ರಾಜ್ಯ ನಾಯಕರು, ಅಷ್ಟೇನೂ ಭಿನ್ನಾಭಿಪ್ರಾಯವಿಲ್ಲದ ಸಂಡೂರು ಕ್ಷೇತ್ರಕ್ಕೆ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡುವುದನ್ನು ನಿರ್ಧರಿಸಿಕೊಂಡಿದ್ದರು.
ಇದೇ ವೇಳೆ ಯೋಗೇಶ್ವರ್ ಪಕ್ಷಕ್ಕೆ ಬಂದರೆ ಟಿಕೆಟ್ ನೀಡುವುದು ಎಂದು ತೀರ್ಮಾನವಾಗಿತ್ತು. ಅದರಂತೆ ಯೋಗೇಶ್ವರ್ ಬುಧವಾರ ಪಕ್ಷ ಸೇರುತ್ತಿದ್ದಂತೆಯೇ ಈ ಎರಡು ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಘೋಷಿಸಿದೆ.
ಇನ್ನು ಶಿಗ್ಗಾಂವಿ ಕ್ಷೇತ್ರಕ್ಕೆ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಿದರೆ ಉತ್ತಮ ಎಂದು ತಾನು ನಡೆಸಿದ ಸಮೀಕ್ಷಾ ವರದಿಗಳು ತಿಳಿಸಿರುವ ಕಾರಣ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಮಗಳಾದ ವೈಶಾಲಿಗೆ ಟಿಕೆಟ್ ನೀಡುವ ಮನಸ್ಸು ಹೈಕಮಾಂಡ್‌ಗೆ ಇದೆ.
ಆದರೆ, ಅಲ್ಪಸಂಖ್ಯಾತ ನಾಯಕರು ಮಾತ್ರ ಸಾಂಪ್ರದಾಯಿಕವಾಗಿ ಮುಸ್ಲಿಂ ಕ್ಷೇತ್ರವಾಗಿರುವ ಸಂಡೂರಿನ ಟಿಕೆಟ್ ಮುಸ್ಲಿಮರಿಗೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರನ್ನು ಇನ್ನೂ ಪಕ್ಷ ಘೋಷಿಸಿಲ್ಲ.