ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ಶುಕ್ರವಾರ ನಡೆಯಿತು.
- ವಿಧಾನಮಂಡಲದಲ್ಲಿ ಮದ್ಯ ಲಂಚ ಹಗರಣದ ಭಾರಿ ಸದ್ದು
- ಗಲಾಟೆ ಮಿತಿಮೀರಿದ ಕಾರಣ ಜ.27ಕ್ಕೆ ಸದನ ಮುಂದಕ್ಕೆ====ಸದನದಲ್ಲಿ ಆಗಿದ್ದೇನು?- ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಆಕ್ರೋಶ
- ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಲು ಆಗ್ರಹ- ಸದನದ ಬಾವಿಗಿಳಿದು ಧರಣಿ ನಡೆಸಿದ ವಿಪಕ್ಷಗಳು
- ಸಚಿವ ತಿಮ್ಮಾಪುರ ರಾಜೀನಾಮೆಗೂ ಒತ್ತಾಯ- ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಕ್ಸಮರ- ಮನವೊಲಿಕೆಗೂ ಬಗ್ಗದ ಬಿಜೆಪಿ-ಜೆಡಿಎಸ್ ಸದಸ್ಯರು- 27ಕ್ಕೆ ಸದನದ ಕಲಾಪ ಮುಂದೂಡಿದ ಸ್ಪೀಕರ್ ಖಾದರ್
-=---ಕನ್ನಡಪ್ರಭ ವಾರ್ತೆ ವಿಧಾನಸಭೆ
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ಶುಕ್ರವಾರ ನಡೆಯಿತು.
ಅಬಕಾರಿ ಸಚಿವರ ರಾಜೀನಾಮೆ ಆಗ್ರಹದಿಂದ ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು ಗದ್ದಲ ಏರ್ಪಟ್ಟಿತು. ಮನವೊಲಿಕೆಗೂ ಬಿಜೆಪಿ-ಜೆಡಿಎಸ್ ಸದಸ್ಯರು ಬಗ್ಗದೆ ಧರಣಿ ಮುಂದುವರೆಸಿದ ಪರಿಣಾಮ ಸ್ಪೀಕರ್ ಯು.ಟಿ.ಖಾದರ್ ಅವರು ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.ಶುಕ್ರವಾರ ಭೋಜನ ವಿರಾಮಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಅಬಕಾರಿ ಸಚಿವರ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್, ಅಬಕಾರಿ ಇಲಾಖೆಯಲ್ಲಿ ಹಗರಣ ಮಾಡಿ ಆ ಹಣವನ್ನು ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆಗೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು. ಈ ಮಾತಿನಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು, ವಿ.ಸುನೀಲ್ ಕುಮಾರ್ ವಿರುದ್ಧ ಮುಗಿಬಿದ್ದರು. ಸಚಿವ ದಿನೇಶ್ ಗುಂಡೂರಾವ್, ಇಡೀ ದೇಶವನ್ನು ಲೂಟಿ ಮಾಡುತ್ತಿರುವುದು ನೀವು ಎಂದು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು. ಈ ವೇಳೆ ವಿಪಕ್ಷ ಸದಸ್ಯರು ಮತ್ತು ಆಡಳಿತ ಸದಸ್ಯರ ನಡುವೆ ವಾಗ್ವಾದ ನಡೆಯಿತು.ಪೆನ್‌ಡ್ರೈವ್ ಪ್ರದರ್ಶನ:
ಈ ಗದ್ದಲದ ನಡುವೆಯೇ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕೇರಳಕ್ಕೆ ಹಣ ಕೊಡುತ್ತಿರುವುದು ನಿಜ. ಈ ಸರ್ಕಾರಕ್ಕೆ ಧೈರ್ಯವಿದ್ದರೆ ಉತ್ತರ ಕೊಡಲಿ. ಅಬಕಾರಿ ಸಚಿವರ ಭ್ರಷ್ಟಾಚಾರ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ವಿಡಿಯೋ ಹಾಗೂ ಪೆನ್‌ಡ್ರೈವ್ ಇದೆ ಎಂದು ಜೇಬಿನಿಂದ ಪೆನ್‌ಡ್ರೈವ್ ಎತ್ತಿ ತೋರಿಸಿದರು. ಅಬಕಾರಿ ಸಚಿವರ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನ ಆರಂಭಕ್ಕೂ ಮುನ್ನವೇ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.ಹಿಂದೆ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗ ಅವರ ರಾಜೀನಾಮೆ ಆಗ್ರಹಿಸಿ ಗುದ್ದಾಟಕ್ಕೂ ಬಂದಿದ್ರಿ. ರಾಜೀನಾಮೆಯನ್ನೂ ಪಡೆದಿರಿ. ಈಗ ಅಬಕಾರಿ ಸಚಿವರ ರಾಜೀನಾಮೆ ಪಡೆಯಲು ಹಿಂದೇಟು ಏಕೆ? ಇದು ಮಾನ, ಮರ್ಯಾದೆ ಇಲ್ಲದ ಸರ್ಕಾರ ಎಂದು ಅಬ್ಬರಿಸಿದರು.
ತಪ್ಪೇ ಮಾಡದೇ ಈಶ್ವರಪ್ಪ ರಾಜೀನಾಮೆ:ಇದರಿಂದ ರೊಚ್ಚಿಗೆದ್ದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ನನ್ನ ಮೇಲಿನ ಆರೋಪ ಬೋಗಸ್, ಸುಳ್ಳು ಎಂದು ಆಕ್ರೋಶದಿಂದ ಹೇಳಿದರು. ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ‘ನಮ್ಮ ಬಳಿ ಪೆನ್‌ಡ್ರೈವ್ ಇದೆ. ನಾನು ಹೇಳುತ್ತಿರುವುದು ಸುಳ್ಳಾದರೆ, ನನಗೆ ಶಿಕ್ಷೆ ಕೊಡಿ. ಲೋಕಾಯುಕ್ತದಲ್ಲಿ ಕೇಸ್ ಆಗಿದೆ. ಕೆ.ಎಸ್.ಈಶ್ವರಪ್ಪ ತಪ್ಪು ಮಾಡದಿದ್ದರೂ ರಾಜೀನಾಮೆ ಕೊಟ್ಟಿದ್ದರು. ಅಬಕಾರಿ ಇಲಾಖೆಯಲ್ಲಿ ಸುಮಾರು 2 ಸಾವಿರ ಕೋಟಿ ರು. ಹಗರಣ ನಡೆದಿದೆ. ಈ ಬಗ್ಗೆ ಈಗಲೇ ಚರ್ಚೆ ಮಾಡಬೇಕು’ ಎಂದು ಆಗ್ರಹಿಸಿದರು.
ವಿಡಿಯೋ ನೋಡಿದ್ದಕ್ಕೆ ರಾಜೀನಾಮೆ:‘ಈ ಹಿಂದೆ ಸಿ.ಸಿ.ಪಾಟೀಲ್ ವಿಡಿಯೋ ನೋಡಿದಾಗ ರಾಜೀನಾಮೆ ಪಡೆದು ನಂತರ ತನಿಖೆ ಮಾಡಿಸಲಾಗಿತ್ತು. ಲೋಕಾಯುಕ್ತ ವರದಿಯಲ್ಲಿ ಬಿ.ಎಸ್.ಯಡಿಯೂರಪ್ಪ ಹೆಸರು ಬಂದಿದ್ದಕ್ಕೆ ರಾಜೀನಾಮೆ ಪಡೆಯಲಾಗಿತ್ತು. ಹೀಗಾಗಿ ಅಬಕಾರಿ ಸಚಿವ ಮೊದಲು ರಾಜೀನಾಮೆ ಕೊಡಲಿ. ಬಳಿಕ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚಿಸೋಣ’ ಎಂದು ಆರ್.ಅಶೋಕ್ ಹೇಳಿದರು. ಇದಕ್ಕೆ ವಿಪಕ್ಷ ಸದಸ್ಯರು ದನಿಗೂಡಿಸಿದರು.
ಸದನದ ಬಾವಿಗಿಳಿದು ಧರಣಿ:ಇದರ ನಡುವೆ ಸ್ಪೀಕರ್ ಯು.ಟಿ.ಖಾದರ್ ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಗೆ ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣಗೆ ಅವಕಾಶ ನೀಡಿದರು. ಇದರಿಂದ ವಿಪಕ್ಷ ಸದಸ್ಯರು ರೊಚ್ಚಿಗೆದ್ದು ಸದನದ ಬಾವಿಗಿಳಿದು ಧರಣಿ ಮಾಡಿದರು. ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಇದರಿಂದ ಗದ್ದಲ ಏರ್ಪಟ್ಟ ಪರಿಣಾಮ ಸ್ಪೀಕರ್ ಸದನವನ್ನು 15 ನಿಮಿಷ ಮುಂದೂಡಿದರು.
ಒಂದು ತಾಸು ಬಳಿಕ ಮತ್ತೆ ಕಲಾಪ ಆರಂಭವಾದಾಗಲೂ ವಿಪಕ್ಷ ಸದಸ್ಯರು ಧರಣಿ ಮುಂದುವರೆಸಿದರು. ಈ ಗದ್ದಲದ ನಡುವೆ ಎ.ಎಸ್.ಪೊನ್ನಣ್ಣಗೆ ಮಾತನಾಡಲು ಸ್ಪೀಕರ್ ಸೂಚಿಸಿದರು. ಅದರಂತೆ ಪೊನ್ನಣ್ಣ ಅವರು ಸಂವಿಧಾನ, ರಾಜ್ಯಪಾಲರ ಹುದ್ದೆ, ಅಧಿಕಾರ, ನಡವಳಿಕೆ ಬಗ್ಗೆ ಮಾತನಾಡಲು ಆರಂಭಿಸಿದರು. ವಿಪಕ್ಷಗಳ ಗದ್ದಲ ಮತ್ತಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.--ಹಿಂದೆ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗ ಅವರ ರಾಜೀನಾಮೆಗೆ ಆಗ್ರಹಿಸಿ ಗುದ್ದಾಟಕ್ಕೆ ಬಂದಿದ್ರಿ. ರಾಜೀನಾಮೆಯನ್ನೂ ಪಡೆದಿರಿ. ಈಗ ಅಬಕಾರಿ ಸಚಿವರ ರಾಜೀನಾಮೆ ಪಡೆಯಲು ಹಿಂದೇಟು ಏಕೆ?
-ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷದ ನಾಯಕ