ಸಾರಾಂಶ
ನವದೆಹಲಿ: ‘ನಾನು ಎಂದೂ ಹಿಂದೂ-ಮುಸ್ಲಿಂ ರಾಜಕೀಯ ಮಾಡಿಲ್ಲ. ಯಾವತ್ತು ಹಾಗೆ ಮಾಡುತ್ತೇನೋ ಅದೇ ದಿನ ನಾನು ಸಾರ್ವಜನಿಕ ಜೀವದಲ್ಲಿ ಇರಲು ಅರ್ಹನಲ್ಲ. ಇದು ನನ್ನ ಸಂಕಲ್ಪ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ವಿಪಕ್ಷಗಳು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿವೆ. ‘ಹಿಂದೂ-ಮುಸ್ಲಿಂ ಬಿಟ್ಟರೆ ಮೋದಿಗೆ ಬೇರೆ ಅಜೆಂಡಾ ಇಲ್ಲವೇ ಇಲ್ಲ, ಅವರ ಹೇಳಿಕೆ ಕೇವಲ ಕಣ್ಣೊರೆಸುವ ತಂತ್ರ’ ಎಂದು ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಟೀಕಿಸಿವೆ.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನರ ಸಂಪತ್ತನ್ನು ನುಸುಳುಕೋರರು, ಹೆಚ್ಚು ಮಕ್ಕಳ ಹೊಂದಿರುವವರಿಗೆ ಹಂಚಲಾಗುತ್ತದೆ. ಏಕೆಂದರೆ 2006ರಲ್ಲಿ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕುದಾರರು ಮುಸ್ಲಿಮರು ಎಂದು ಅಂದಿನ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದರು’ ಎಂದು ಕಳೆದ ತಿಂಗಳು ಮೋದಿ ರಾಜಸ್ಥಾನದ ಬನ್ಸ್‌ವಾರಾದಲ್ಲಿ ಹೇಳಿದ್ದರು. ಇದಕ್ಕೆ ಸೋಮವಾರ ವಾರಾಣಸಿಯಲ್ಲಿ ಸ್ಪಷ್ಟನೆ ನೀಡಿದ್ದ ಅವರು, ‘ಆಸ್ತಿಯನ್ನು ಮುಸ್ಲಿಮರಿಗೆ ಹಂಚುತ್ತಾರೆ ಎಂದು ನಾನು ಎಲ್ಲೂ ಹೇಳಿಲ್ಲ. ಹೆಚ್ಚು ಮಕ್ಕಳ ಹೊಂದಿರುವವರು ಮುಸ್ಲಿಮರು ಮಾತ್ರವಲ್ಲ. ಎಲ್ಲ ಜಾತಿ-ಧರ್ಮಗಳಲ್ಲೂ ಇರುತ್ತಾರೆ’ ಎಂದಿದ್ದರು.
ಇದಕ್ಕೆ ಕಿಡಿಕಾರರುವ ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್, ‘ಮೋದಿ ರೋಗಶಾಸ್ತ್ರೀಯ ಸುಳ್ಳುಗಾರ. ತಾನೆಂದೂ ಹಿಂದೂ-ಮುಸ್ಲಿಂ ರಾಜಕೀಯ ಮಾಡಲ್ಲ ಎಂಬ ಅವರ ಹೇಳಿಕೆ ಅವರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂಬದನ್ನು ತೋರಿಸುತ್ತದೆ. ಸಾರ್ವಜನಿಕವಾಗೇ ಅನೇಕ ಬಾರಿ ಅವರು ಮತೀಯವಾದಿ ಹೇಳಿಕೆ, ಸಂಜ್ಞೆಗಳನ್ನು ಪ್ರದರ್ಶಿಸಿದ್ದಾರೆ. ಚುನಾವಣಾ ಆಯೋಗಕ್ಕೂ ನಾವು ದೂರಿದ್ದೇವೆ. ಹಿಂದೂ-ಮುಸ್ಲಿಂ ಬಿಟ್ಟರೆ ಅವರಿಗೆ ಬೇರೆ ಅಜೆಂಡಾ ಇಲ್ಲ’ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ‘ಪ್ರಧಾನಿ ಅವರು ಹಿಂದೂ-ಮುಸ್ಲಿಂ, ಕುರಿ ಮಾಂಸ, ಕೋಳಿ ಮಾಂಸ, ಮೀನು, ಮಂಗಳಸೂತ್ರ ಎಂದು ಹೇಳೇ ಇಲ್ಲವೇ? ಆ ಮಾತನ್ನು ನಾವು ಹೇಳಿದ್ದೆವೇ? ಇಂಥ ಹೇಳಿಕೆಗಳನ್ನು ಬಿಟ್ಟು 10 ವರ್ಷದಲ್ಲಿ ತಾವು ಮಾಡಿದ್ದ ಅಭಿವೃದ್ಧಿ ಬಗ್ಗೆ ಮಾತನಾಡಲಿ’ ಎಂದಿದ್ದಾರೆ.
ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹೆಂಡತಿಯನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಿದ್ದಾಗ ಮಕ್ಕಳ ಮೌಲ್ಯವನ್ನು ಹೇಗೆ ತಿಳಿಯುತ್ತಾರೆ. ಮಕ್ಕಳ ಮೇಲಿನ ಪ್ರೀತಿಯನ್ನು ಹೇಗೆ ತಿಳಿಯುತ್ತಾರೆ’ ಎಂದು ಪ್ರಶ್ನಿಸಿದ್ದಾರೆ,
ಎಐಎಂಐಎಂ ನೇತಾರ ಅಸಾದುದ್ದೀನ್ ಒವೈಸಿ ಮೋದಿ ಮಾತನಾಡಿ, ‘ಮೋದಿ ತಮ್ಮ ಭಾಷಣದಲ್ಲಿ ಮುಸ್ಲಿಮರನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದಿದ್ದರು. ಈಗ ಅವರು ಮುಸ್ಲಿಮರ ಬಗ್ಗೆ ಮಾತನಾಡಿಲ್ಲ ಎಂದಿದ್ದಾರೆ. ಈ ಸುಳ್ಳು ಸ್ಪಷ್ಟನೆ ನೀಡಲು ಇಷ್ಟು ಸಮಯ ತೆಗೆದುಕೊಂಡರು? ಅವರ ಪ್ರಚಾರ ಕೇವಲ ಮುಸ್ಲಿಂ ವಿರೋಧಿ ರಾಜಕೀಯ ಆಧರಿಸಿದೆ. ಅನೇಕ ಅಸಂಖ್ಯಾತ ಸುಳ್ಳುಗಳನ್ನು ಅವರು ಮುಸ್ಲಿಮರ ವಿರುದ್ಧ ಹರಿಬಿಟ್ಟಿದ್ದಾರೆ’ ಎಂದಿದ್ದಾರೆ.