ಕೇವಲ ಪರೀಕ್ಷೆಗಳಿಗಷ್ಟೇ ಅಲ್ಲ, ಬದುಕಿನ ಸವಾಲುಗಳನ್ನು ಎದುರಿಸಲು ಪೂರ್ವಸಿದ್ಧತೆ ಅತ್ಯಗತ್ಯ ಎಂದು ಅನಂತ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆರ್. ಅನಂತಕುಮಾರ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅರಸೀಕೆರೆ: ಕೇವಲ ಪರೀಕ್ಷೆಗಳಿಗಷ್ಟೇ ಅಲ್ಲ, ಬದುಕಿನ ಸವಾಲುಗಳನ್ನು ಎದುರಿಸಲು ಪೂರ್ವಸಿದ್ಧತೆ ಅತ್ಯಗತ್ಯ ಎಂದು ಅನಂತ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆರ್. ಅನಂತಕುಮಾರ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಗರದ ಅನಂತ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಡೆಲ್ ಎಕ್ಸಿಬಿಷನ್‌ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳ ಅರಿವು ಮತ್ತು ಅವುಗಳ ಸರಿಯಾದ ಬಳಕೆ ನರ್ಸಿಂಗ್ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರು. ರೋಗಿಗಳೊಂದಿಗೆ ನಡೆದುಕೊಳ್ಳುವ ಶೈಲಿ, ನೈತಿಕತೆ ಹಾಗೂ ಸೇವಾಭಾವನೆ ವೈದ್ಯಕೀಯ ವೃತ್ತಿಯಲ್ಲಿ ಮಹತ್ವದ್ದಾಗಿದೆ ಎಂದು ಸಲಹೆ ನೀಡಿದರು.
ವಿವಿಧ ಮಾದರಿಗಳನ್ನು ವೀಕ್ಷಿಸಿದ ಅನಂತಕುಮಾರ್
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಮಾದರಿಗಳನ್ನು ವೀಕ್ಷಿಸಿದ ಅನಂತಕುಮಾರ್, ಅವುಗಳ ಬಗ್ಗೆ ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದುಕೊಂಡರು. ವೈದ್ಯಕೀಯ ಉಪಕರಣಗಳ ಬಳಕೆ, ಆರೋಗ್ಯಪರ ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಕುರಿತು ವಿದ್ಯಾರ್ಥಿಗಳು ನೀಡಿದ ವಿವರಗಳು ಗಮನ ಸೆಳೆದವು.
ನರ್ಸಿಂಗ್ ವಿದ್ಯಾರ್ಥಿಗಳ ಪ್ರದರ್ಶನ
ಚಿಕಿತ್ಸೆಗೆ ಸಂಬಂಧಿಸಿದ ವಿಧಾನಗಳು, ಚುಚ್ಚುಮದ್ದು ನೀಡುವ ಕ್ರಮ, ಔಷಧ ಸೇವನೆಯ ವಿಧಾನ ಸೇರಿದಂತೆ ಹಲವು ವಿಷಯಗಳನ್ನು ಮಾದರಿಗಳ ಮೂಲಕ ವಿವರಿಸಿದ ನರ್ಸಿಂಗ್ ವಿದ್ಯಾರ್ಥಿಗಳ ಪ್ರದರ್ಶನ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಜೆಸಿ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಲೋಕೇಶ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಮಹತ್ವದ ಅವಕಾಶ. ನಿಸ್ವಾರ್ಥ ಸೇವೆಯಿಂದ ರೋಗಿಗಳ ಆರೈಕೆ ಮಾಡಿದರೆ ಅದು ಮಾನವೀಯತೆಗೂ ದೈವಾನುಗ್ರಹಕ್ಕೂ ಪಾತ್ರವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ಸಿಬ್ಬಂದಿ ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.