ನಮ್ಮ ಪಕ್ಷದಲ್ಲಿ ಅಧಿಕಾರಕ್ಕೋಸ್ಕರವಾಗಿ ಜಮೀರ್ ಅಂತಹ ಜನರನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ, ನಮಗೆ ಅದರ ಎಲ್ಲಾ ಅನುಭವಗಳಾಗಿದೆ. ಯಾವುದೇ ಕಾರಣಕ್ಕೂ ಆ ವಿಷಯವನ್ನು ಎತ್ತಲೇಬೇಡಿ
ಹೊಳೆನರಸೀಪುರ: ನಮ್ಮ ಪಕ್ಷದಲ್ಲಿ ಅಧಿಕಾರಕ್ಕೋಸ್ಕರವಾಗಿ ಜಮೀರ್ ಅಂತಹ ಜನರನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ, ನಮಗೆ ಅದರ ಎಲ್ಲಾ ಅನುಭವಗಳಾಗಿದೆ. ಯಾವುದೇ ಕಾರಣಕ್ಕೂ ಆ ವಿಷಯವನ್ನು ಎತ್ತಲೇಬೇಡಿ. ಅದರ ಅವಶ್ಯಕತೆನೂ ಇಲ್ಲ ನಮಗೆ, ನಾನು ಅನುಭವಿಸಿದ್ದೀನಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶದಿಂದ ನುಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಸಚಿವ ಜಮೀರ್ ಅಹಮದ್ ಜೆಡಿಎಸ್ ಸೇರ್ಪಡೆ ಕುರಿತಂತೆ ಕೇಳಿದ ಪಶ್ನೆಗೆ ಖಾರವಾಗಿ ಉತ್ತರಿಸಿದರು. ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಏನೋ ಶಕ್ತಿ ಬರುತ್ತೆ ಅಂಥ ಹೇಳಿ ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ ಎಂದರು. ಎಐಸಿಸಿ ಅಧ್ಯಕ್ಷರು ಪ್ರಧಾನಿಯನ್ನು ಟೆರೆರಿಸ್ಟ್ ಎಂದು ಕರೆಯುತ್ತಾರೆ ಎಂದರೆ ಎಷ್ಟು ಉದ್ಧಟತನ ಇರಬಹುದು ಎಂದು ಅರ್ಥೈಸಿಕೊಳ್ಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅನ್ನ ತಿನ್ನುತ್ತಿರುವುದೇ ಆ ಒಂದು ವರ್ಗದಿಂದ ಅಂಥ ಹೇಳುತ್ತಿದ್ದಾರೆ
ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವುದು, ಕಾಂಗ್ರೆಸ್ ನಾಯಕರು ಅನ್ನ ತಿನ್ನುತ್ತಿರುವುದು ಆ ವರ್ಗದ ಜನಗಳಿಂದಲೇ ಅಂಥ ಹೇಳುತ್ತಿದ್ದಾರೆ. ಇವತ್ತು ಆ ಪರಿಸ್ಥಿತಿ ರಾಜ್ಯಕ್ಕೆ ತಂದು ಇಟ್ಟಿದ್ದಾರೆ. ಪ್ರತಿನಿತ್ಯ ಅನ್ನ ತಿನ್ನುತ್ತಿರುವುದೇ ಆ ಒಂದು ವರ್ಗದಿಂದ ಅಂಥ ಹೇಳುತ್ತಿದ್ದಾರೆ. ಇವತ್ತು ಕಾಂಗ್ರೆಸ್‌ನವರು ಯಾರದರೂ ಅದನ್ನು ವಿರೋಧ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆಗಳು ಮುಗಿಯುವ ಹಂತಕ್ಕೆ
ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆಗಳು ಮುಗಿಯುವ ಹಂತಕ್ಕೆ ಬರುತ್ತಿದೆ. ಜತೆಗೆ ರಾಜಕೀಯದಲ್ಲಿ ಅನುಭವಸ್ಥರು, ಹಿರಿತನದಿಂದ ಬಂದವರು ಬಳಸಿರುವ ಪದಬಳಕೆ ನೋಡಿದಾಗ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಯುವ ಜನಾಂಗಕ್ಕೆ ಯಾವ ರೀತಿ ದಾರಿ ತೋರಿಸುತ್ತಾರೆ ಎಂದು ಯೋಚನೆ ಮಾಡಬೇಕು.
ಅಭಿವೃದ್ಧಿ ಹೆಸರಿನಲ್ಲಿ ಯಾರು ಚುನಾವಣೆಯಲ್ಲಿ ಮತ ಕೇಳಲಿಲ್ಲ. ದೇಶಕ್ಕೆ ಏನು ಕೊಡ್ತಿವಿ ಅನ್ನೋದನ್ನು ಬಿಟ್ಟು ಫ್ರೀ ಕೊಡಲು ಕಾಂಪಿಟೇಷನ್ ಮಾಡುತ್ತಾ, ನೀನು ಅದು ಕೊಟ್ಟರೆ ನಾನು ಇದು ಕೊಡ್ತಿನಿ ಅಂತಾರೆ. ಇದು ಸ್ವಲ್ಪ ಆಘಾತ ತರುವ ವಿಷಯ. ಹಿಮಾಚಲ ಪ್ರದೇಶದಲ್ಲಿ ಮುಖ್ಯ ಕಾರ್ಯದರ್ಶಿಗೆ ಸಂಬಳ ಕತ್ತರಿಸಿದ್ದಾರೆ. ಇವತ್ತಿನ ಸರ್ಕಾರ ಜನಸಾಮಾನ್ಯರ ಬದುಕು ಸರಿಪಡಿಸುವುದು ಇರಲಿ, ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟ ಆಡ್ತಿದ್ದಾರೆ ಎಂದು ತಿಳಿಸಿದರು.
