ರಾಣಿಬೆನ್ನೂರು: ಮಹಿಳೆಯರಿಗಾಗಿ ಸಂಸತ್ತಿನಲ್ಲಿ ಹಾಗೂ ವಿಧಾನಸಭೆಯಲ್ಲಿ ಶೇ. 33ರಷ್ಟು ಮೀಸಲಾತಿ ನೀಡುವ ವಿಧೇಯಕಕ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷವಾದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ಬುಧವಾರ ನಗರದಲ್ಲಿ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ಪ್ರತಿಭಟಿಸಿ, ತಹಸೀಲ್ದಾರ್‌ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಲಾಯಿತು.

ಪಕ್ಷದ ರಾಜ್ಯ ಮಹಿಳಾ ಘಟಕದ ಸದಸ್ಯೆ ಲಕ್ಷ್ಮೀ ಕದರಮಂಡಲಗಿ ಮಾತನಾಡಿ, ಸಂಸತ್‌ನಲ್ಲಿ ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುವ ಮೂಲಕ ಮಹಿಳೆಯರಿಗೆ ಸಿಗಬೇಕಾದ ಹಕ್ಕುಗಳಿಗೆ ದ್ರೋಹ ಬಗೆದಿದೆ. ಈ ಮಸೂದೆಯನ್ನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು 1995–96ರಲ್ಲಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಂಡಿಸಿ ಮಹಿಳೆಯರಿಗೆ ಶೇ. 33 ಅವಕಾಶ ನೀಡಬೇಕು ಎಂದು ನಿರ್ಧರಿಸಿದ್ದರು. ಆದರೂ ಇಂದಿನವರೆಗೂ ಅದು ಜಾರಿಗೆ ಬಂದಿಲ್ಲ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದಲ್ಲಿ ಜಿಪಂ, ತಾಪಂ ಹಾಗೂ ನಗರಸಭೆಗಳಲ್ಲಿ ಶೇ. 33 ಮಹಿಳಾ ಮೀಸಲಾತಿ ನೀಡುವ ಮೂಲಕ ಮಹಿಳೆಯರಿಗೆ ಅಧಿಕಾರ ನೀಡಿದರು. ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೇ. 33ರಷ್ಟು ಮೀಸಲಾತಿಯನ್ನು ಲೋಕಸಭೆಯಲ್ಲಿ ಮಂಡಿಸಿದರೂ ಕಾಂಗ್ರೆಸ್ ಅದನ್ನು ವಿರೋಧಿಸಿ ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಹಿಂದಿನಿಂದಲೂ ಮಹಿಳೆಯರು, ದಲಿತರು, ಮುಸ್ಲಿಮರು ಹಾಗೂ ಹಿಂದುಳಿದವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ತನ್ನ ನಿಜಸ್ವರೂಪವನ್ನು ತೋರಿಸಿದ್ದು, ಮಹಿಳಾ ಪ್ರಾತಿನಿಧ್ಯಕ್ಕೆ ವಿರೋಧ ವ್ಯಕ್ತಪಡಿಸಿ ತನ್ನ ಮಹಿಳಾ ವಿರೋಧಿ ನೀತಿಯನ್ನು ಬಹಿರಂಗಪಡಿಸಿದೆ. ಹೀಗಾಗಿ ದೇಶದ ಮಹಿಳೆಯರು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ನಗರ ಘಟಕ ಅಧ್ಯಕ್ಷ ಲಿಂಗರಾಜ ಹೊನ್ನಾಳಿ, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಸಿದ್ದಪ್ಪ ಗುಡಿಮುಂದಲರ, ನಗರ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಜಾಡಮಲಿ, ಕಸ್ತೂರಿ ಅರ್ಕಸಾಲಿ, ದೀಪ ದಳವಾಯಿ, ಪೂಜಾ ದೈವಜ್ಞ, ಪಾರ್ವತವ್ವ ಆಡೂರು, ನಿರ್ಮಲಾ ಎಮ್ಮಿ, ಗಂಗಮ್ಮ ಇಚ್ಚಂಗಿ, ಕವಿತಾ ದಳವಾಯಿ, ಮಂಜುಳಾ ಹಾವನೂರ, ರೇಷ್ಮಾ ನಾರಂಗಿ, ಶೋಭಾ ಕಡ್ಡಿ, ಅಕ್ಕಮ್ಮ ಮಡಿವಾಳರ, ಚನ್ನವೀರಪ್ಪ ಬಡಿಗೇರ, ವಿಠ್ಠಲ ಸುಣಗಾರ, ನಾಗರಾಜ ಅಜ್ಜಪ್ಪನವರ, ಮಂಜುನಾಥ ಹಲಗೇರಿ ಮತ್ತಿತರರಿದ್ದರು.