ನವದೆಹಲಿ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ ವೇಳೆ ಅಪಾಯಕಾರಿ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬನ ದೂರು ಸಂಬಂಧ ಎಫ್‌ಐಆರ್ ದಾಖಲಿಸುವಂತೆ ದಿಲ್ಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಸ್ಟೇಷನ್ ಎದುರೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 7 ಗಂಟೆ ಕಾಲ ಧರಣಿ ಕುಳಿತ ಘಟನೆ ಶುಕ್ರವಾರ ನಡೆದಿದೆ.
ಮೊದಲಿಗೆ ಈ ಕುರಿತು ಯಾವುದೇ ಸ್ಪಷ್ಟ ಭರವಸೆ ನೀಡದ ಪೊಲೀಸರು, ಬಳಿಕ ಹೋರಾಟಕ್ಕೆ ಮಣಿದು ಎಫ್‌ಐಆರ್ ದಾಖಲಿಸಿದ್ದಾರೆ. ಹೀಗಾಗಿ 7 ತಾಸು ಕಾಲ ನಡೆದ ಈ ಹೈಡ್ರಾಮಾ ಬಳಿಕ ರಾಹುಲ್ ಧರಣಿ ಕೈಬಿಟ್ಟಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ‘ಇದು ನ್ಯಾಯದ ಹಾದಿಯಲ್ಲಿ ಮೊದಲ ಹೆಜ್ಜೆ. ಮೊದಲಿಗೆ ‘ಮೇಲಿನವರ’ ಒತ್ತಡದ ಕಾರಣ ಕೇಸು ದಾಖಲಿಸಿರಲಿಲ್ಲ. ಈಗಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅನುಮತಿಸಿದ ಬಳಿಕವೇ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.
ಪೆಲೆಟ್ ಗನ್ ಅನ್ನು ಎಲ್ಲೆಂದರಲ್ಲಿ ಬಳಸುವುದಕ್ಕೆ ಅನುಮತಿ ಇಲ್ಲ. ಹೀಗಾಗಿ ಅದರ ಬಳಕೆಗೆ ಅನುಮತಿ ನೀಡಿದ್ದು ಯಾರು ಎಂಬುದೇ ಈಗಿನ ಬಿಕ್ಕಟ್ಟಿನ ಮೂಲ. ಹೀಗಾಗಿ ಈ ಬಗ್ಗೆ ದಿಲ್ಲಿ ಪೊಲೀಸ್ ಉಸ್ತುವಾರಿ ಹೊತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು ಎಂದು ಇತ್ತೀಚೆಗೆ ಸಂಸತ್ ಅಧಿವೇಶನದಲ್ಲೂ ವಿಪಕ್ಷಗಳು ಪಟ್ಟು ಹಿಡಿದಿದ್ದವು.
ಭಾರೀ ಹೈಡ್ರಾಮಾ:
ಇತ್ತೀಚಿನ ದಿಲ್ಲಿ ಪ್ರತಿಭಟನೆ ವೇಳೆ ಪೆಲೆಟ್ ಗನ್‌ನಿಂದ ತೀವ್ರವಾಗಿ ಗಾಯಗೊಂಡಿದ್ದ ಸಾಹಿಲ್ ಲೋಚಬ್ ಎಂಬ ವಿದ್ಯಾರ್ಥಿ ಈ ಸಂಬಂಧ ಆ.14ರಂದು ಠಾಣೆಗೆ ತೆರಳಿ ದೂರು ನೀಡಿದ್ದರೂ, ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ.17ರಂದು ಮತ್ತೊಮ್ಮೆ ಠಾಣೆಗೆ ತೆರಳಿ ವಿಚಾರಿಸಿದರೂ ಪೊಲೀಸರು ಸ್ಪಂದಿಸಿರಲಿಲ್ಲ. ಬಳಿಕ ಅವರ ತಾಯಿ ದೂರು ನೀಡಲು ಹೋದಾಗಲೇ ಅವರನ್ನು ಅಲೆಸಲಾಗಿತ್ತು.
ರಾಹುಲ್ ಧರಣಿ:
ಈ ಹಿನ್ನೆಲೆಯಲ್ಲಿ ಶುಕ್ರವಾರ ರಾಹುಲ್ ಗಾಂಧಿ, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಸಾಹಿಲ್ ಲೋಚಬ್ ಮತ್ತು ಆತನ ತಾಯಿ ಜೊತೆ ತೆರಳಿದ್ದರು. ‘ಪೆಲೆಟ್ ಗನ್ ದಾಳಿಯಿಂದ ವಿದ್ಯಾರ್ಥಿ ಕಣ್ಣಿಗೆ ಎರಡು ಕಡೆ ಗಾಯ ಆಗಿದೆ. ದೇಹದ 200 ಕಡೆ ಗಾಯಗಳಾಗಿದೆ. ಆದರೂ ಯಾವ ಕಾರಣದಿಂದಾಗಿ ಎಫ್‌ಐಆರ್ ದಾಖಲಿಸಿಲ್ಲ ಎಂದು ಪೊಲೀಸರನ್ನು ರಾಹುಲ್ ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ, ನಾವು ಎಫ್‌ಐಆರ್ ದಾಖಲಿಸಿ ಎಂದಷ್ಟೇ ಕೇಳುತ್ತಿದ್ದೇವೆ. ಎಫ್‌ಐಆರ್ ದಾಖಲಾಗುವವರೆಗೆ ಸ್ಥಳಬಿಟ್ಟು ಕದಲಲ್ಲ. ನಾವು ಸಾಹಿಲ್ ಕುಟುಂಬಕ್ಕೆ ನ್ಯಾಯ ಕೇಳುತ್ತಿದ್ದೇವೆ ಅಷ್ಟೆ. ಅಮಿತ್ ಶಾ ನ್ಯಾಯಕ್ಕೆ ಹೆದರುತ್ತಿದ್ದಾರೆ’ ಎಂದು ಕಿಡಿಕಾರಿ ಠಾಣೆಯಲ್ಲೇ ಧರಣಿ ಕುಳಿತಿದ್ದರು.
ಎಫ್‌ಐಆರ್:
ರಾಹುಲ್ ಸುಮಾರು 6 ಗಂಟೆ ಧರಣಿ ಕುಳಿತ ಬಳಿಕ ಸಾಹಿಲ್ ತಾಯಿ ನೀಡಿದ್ದ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಯಾರದ್ದೂ ಹೆಸರಿಲ್ಲ. ಅನಾಮಿಕರ ವಿರುದ್ಧ ದೂರು ದಾಖಲಾಗಿದೆ.
ಆಕ್ರೋಶ:
ಎಫ್‌ಐಆರ್ ದಾಖಲು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ‘ವಿದ್ಯಾರ್ಥಿ ದೇಹಕ್ಕೆ ಪೆಲೆಟ್‌ಗಳು ಹೊಕ್ಕಿವೆ. ಕಣ್ಣಿಗೂ ಪೆಲೆಟ್ ಹೊಕ್ಕಿರುವ ಕಾರಣ ಆತ ನೋಡಲಾರದ ಸ್ಥಿತಿಯಲ್ಲಿದ್ದಾನೆ. ಇದು ಈ ವಿದ್ಯಾರ್ಥಿಗೆ ಆದ ಅನ್ಯಾಯ. ಈ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ಒಂದು ತಿಂಗಳಿನಿಂದ ಅಲೆದರೂ ಆತನಿಗೆ ನ್ಯಾಯ ಸಿಕ್ಕಿಲ್ಲ. ಆತನನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಸಲಾಗಿದೆ. ಇಂದು ಹಲವು ಗಂಟೆಗಳ ಧರಣಿ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನು ನೋಡಿದರೆ ದೇಶದ ಜನತೆ ನ್ಯಾಯ ಕೇಳಲು ಹೋದರೆ ಏನಾಗುತ್ತದೆ ಎಂಬುದನ್ನು ಊಹಿಸಬಹುದು. ಇದೇ ರೀತಿಯಲ್ಲಿ ಬೆದರಿಕೆಗೆ ತುತ್ತಾದ, ಅತ್ಯಾಚಾರಕ್ಕೆ ಒಳಗಾದವರು ನ್ಯಾಯಕ್ಕಾಗಿ ಹೋರಾಡುತ್ತಲೇ ಇದ್ದಾರೆ’ ಎಂದು ಹೇಳಿದರು.
ಜೊತೆಗೆ ಮೇಲಿನವರ ಒತ್ತಡ ಇದ್ದ ಕಾರಣ ಈ ಮೊದಲು ಎಫ್‌ಐಆರ್ ದಾಖಲಿಸಿರಲಿಲ್ಲ. ಈಗಲೂ ಕೂಡಾ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಗೃಹ ಸಚಿವ ಅಮಿತ್ ಶಾ ಅನುಮತಿಸಿದ ಬಳಿಕವಷ್ಟೇ ಎಫ್‌ಐಆರ್ ದಾಖಲಿಸಲಾಗಿದೆ ಎಂದಿದ್ದಾರೆ.
ಬಿಜೆಪಿ ಆಕ್ರೋಶ:
ರಾಹುಲ್ ಧರಣಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ‘ಕಾಂಗ್ರೆಸ್ ನಾಯಕ ಕೀಳು ಹಾಗೂ ಅರಾಜಕತೆಯ ರಾಜಕೀಯಕ್ಕಿಳಿದಿದೆ. ವಂದೇ ಮಾತರಂ ವಿವಾದದಿಂದ ಜನರ ಗಮನ ಬೇರೆಡೆ ಸೆಳೆಯಲು ರಾಹುಲ್ ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದೆ.
ರಾಹುಲ್ ಗಾಂಧಿ ಅವರದು ನ್ಯಾಯ ಅಥವಾ ವಿದ್ಯಾರ್ಥಿಗಾಗಿನ ಪ್ರತಿಭಟನೆ ಅಲ್ಲ, ಕಾಂಗ್ರೆಸ್ ಪಕ್ಷದ ರಾಜಕೀಯ ಹತಾಶೆಯ ಪ್ರತೀಕ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಕಿಡಿಕಾರಿದರೆ, ರಾಹುಲ್ ಅರಾಜಕತೆಯ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ದೂರಿದ್ದಾರೆ.
ಆಗಿದ್ದೇನು?
- ಇತ್ತೀಚಿನ ದಿಲ್ಲಿ ಜಿರಳೆ ಪ್ರತಿಭಟನೆ ವೇಳೆ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದ ಸಾಹಿಲ್ ಲೋಚಬ್
- ಆ14ಕ್ಕೆ ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಗೆ ತೆರಳಿ ದೂರು. ಆದರೆ ಎಫ್‌ಐಆರ್‌ಗೆ ಪೊಲೀಸರ ಹಿಂದೇಟು
- ಹೀಗಾಗಿ ಆತನ ಪರ ಖುದ್ದು ಪ್ರತಿಭಟನೆಗೆ ಇಳಿದ ರಾಹುಲ್. ಹೋರಾಟ ಯಶಸ್ವಿ. ಎಫ್‌ಐಆರ್ ದಾಖಲು
