ಸಾರಾಂಶ
ಭೂ ಕಬಳಿಕೆಯ ಕ್ಯಾನ್ಸರ್ ತಡೆಗಟ್ಟದಿದ್ದರೆ ರೈತರು, ದಲಿತರ ಜಮೀನು ಉಳಿಯುವುದಿಲ್ಲ. ಸ್ವಾತಂತ್ರ್ಯ ಚಳವಳಿ ಮಾಡಿದಂತೆಯೇ ಈಗ ನಾವು ಹೋರಾಟ ಮಾಡಿ ವಕ್ಫ್ ಬೋರ್ಡ್ ರದ್ದು ಮಾಡಬೇಕಿದೆ.
ಶ್ರೀರಂಗಪಟ್ಟಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪು ಮಾದರಿಯಾಗಿದ್ದು, ಮತಾಂಧ ಮುಸ್ಲಿಮರನ್ನು ಓಲೈಸಲು ವಕ್ಫ್ ಮಂಡಳಿ ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ನಡೆಸಲು ಮುಂದಾಗಿದೆ. ಆ ಮೂಲಕ ಸಿದ್ದರಾಮಯ್ಯ ಮುಸ್ಲಿಮರ ಸಾಮ್ರಾಟ್ ಆಗಲು ಯತ್ನಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಮತ್ತು ಚಂದಗಾಲು ಗ್ರಾಮಗಳಲ್ಲಿ ಮಾತನಾಡಿ, ಭೂ ಕಬಳಿಕೆಯ ಕ್ಯಾನ್ಸರ್ ತಡೆಗಟ್ಟದಿದ್ದರೆ ರೈತರು, ದಲಿತರ ಜಮೀನು ಉಳಿಯುವುದಿಲ್ಲ. ಸ್ವಾತಂತ್ರ್ಯ ಚಳವಳಿ ಮಾಡಿದಂತೆಯೇ ಈಗ ನಾವು ಹೋರಾಟ ಮಾಡಿ ವಕ್ಫ್ ಬೋರ್ಡ್ ರದ್ದು ಮಾಡಬೇಕಿದೆ. ಪಹಣಿಯಲ್ಲಿ ಬರೆದ ವಕ್ಫ್ ಬೋರ್ಡ್ ಎಂಬ ಹೆಸರು ತೆಗೆದುಹಾಕಿ ನಿಜವಾದ ಮಾಲೀಕರಿಗೆ ಆಸ್ತಿ ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯಾವುದೇ ಸರ್ಕಾರ ಇದ್ದಾಗಲೂ ಜಮೀನು ಕಬಳಿಕೆ ಮಾಡಿದ್ದರೆ ಆ ಅಧಿಕಾರಿಯನ್ನು ಮುಲಾಜಿಲ್ಲದೆ ಜೈಲಿಗೆ ಹಾಕಲಿ. ಸರ್ಕಾರವನ್ನು ವಂಚಿಸಿದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದ ಅಶೋಕ್, ಕೇವಲ ನೋಟಿಸ್ ರದ್ದಾಗುವುದರಿಂದ ಪ್ರಯೋಜನವಿಲ್ಲ. ಜಿಲ್ಲಾಧಿಕಾರಿ ಮಾಡಿದ ಆದೇಶ ರದ್ದಾಗಬೇಕು. ವಕ್ಫ್ ಮಂಡಳಿ ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಮಾಡಲು ಮುಂದಾಗಿದೆ. ರಾಜಕೀಯವಾಗಿ ಇದನ್ನು ನಾವು ಬಳಸಿಕೊಳ್ಳುವುದಿಲ್ಲ. ಕೂಡಲೇ ವಕ್ಫ್ ಬೋರ್ಡ್‌ನ ಆಸ್ತಿ ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡಿ. ಆಗ ಯಾವುದೇ ಸಮಸ್ಯೆ ಇರುವುದಿಲ್ಲ. ಇದು ಭಾರತಮಾತೆಯ ಜಮೀನು, ಯಾವುದೇ ಸಮುದಾಯದ ಆಸ್ತಿಯಲ್ಲ. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುವುದನ್ನು ಈ ಸರ್ಕಾರ ನಿಲ್ಲಿಸಬೇಕು ಎಂದು ಕುಟುಕಿದರು.