ಸಾರಾಂಶ
ಜಿಲ್ಲೆಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಕಡತಗಳನ್ನು ರಾತ್ರೋರಾತ್ರಿ ಸುಟ್ಟುಹಾಕಲಾಗಿದ್ದು, ನಿಗಮದಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆಯಾಗಿದೆ.
ಹಾಸನ : ಜಿಲ್ಲೆಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಕಡತಗಳನ್ನು ರಾತ್ರೋರಾತ್ರಿ ಸುಟ್ಟುಹಾಕಲಾಗಿದ್ದು, ನಿಗಮದಲ್ಲಿ ಅವ್ಯವಹಾರದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆಯಾಗಿದೆ.
ಅರಸೀಕೆರೆ ತಾಲೂಕಿನ ಕುರುವಂಕ ಗ್ರಾಮ ಪಂಚಾಯಿತಿ ಸದಸ್ಯ ಬೈರಗೊಂಡನಹಳ್ಳಿಯ ಉಮೇಶ್ ಹಾಸನದಲ್ಲಿ ಕಡತಗಳನ್ನು ಸುಡುತ್ತಿರುವ ವೀಡಿಯೋ ಸಮೇತ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ವಿರುದ್ಧ ಆರೋಪ ಕೇಳಿಬಂದಿದೆ.
ಜು.7 ರಿಂದ 10ರ ಅವಧಿಯಲ್ಲಿ ಅರಸೀಕೆರೆ ತಾಲೂಕಿನ ಅಬ್ಬನಘಟ್ಟ ಗ್ರಾಮದ ಖಾಸಗಿ ಜಾಗದಲ್ಲಿ ರಾತ್ರೋರಾತ್ರಿ ದೇವರಾಜ ಅರಸು ನಿಗಮಕ್ಕೆ ಸೇರಿದ ಕಡತಗಳನ್ನು ಸುಟ್ಟುಹಾಕಲಾಗಿದ್ದು, ಕೆಲ ಮಧ್ಯವರ್ತಿಗಳ ಜತೆ ಸೇರಿಕೊಂಡು ಸರ್ಕಾರಿ ಯೋಜನೆಗಳನ್ನು ದುರುಪಯೋಗ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.