ಸಾರಾಂಶ
ಬೆಂಗಳೂರು :ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಸೂರಜ್ ವಿರುದ್ಧ ದಾಖಲಾದ 2 ಎಫ್‌ಐಆರ್ ಪೈಕಿ ಚೇತನ್ ಎಂಬುವರು ನೀಡಿದ ದೂರಿನಲ್ಲಿ ಷರತ್ತು ಬದ್ಧ ಜಾಮೀನು ಸಿಕ್ಕರೆ, ಎಂ.ಎಲ್. ಶಿವಕುಮಾರ್ ನೀಡಿದ ದೂರಿನಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಅನುಭವಿಸುತ್ತಿರುವ ಸೆರೆಮನೆ ವಾಸದಿಂದ ಮಂಗಳವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಸೋಮವಾರ ಮೊದಲು ಸಂತ್ರಸ್ತ ಚೇತನ್ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು, 2 ಲಕ್ಷ ರು. ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಸಾಕ್ಷಿಗಳಿಗೆ, ದೂರುದಾರರಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು ಎಂದು ಸೂಚನೆ ನೀಡಿದೆ.
ತನಿಖೆಗೆ ಸಹಕರಿಸಬೇಕು, ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಅಲ್ಲದೇ, ಸಂಬಂಧಿತ ನ್ಯಾಯಾಲಯದ ಅನುಮತಿ ಇಲ್ಲದೇ, ದೇಶ ತೊರೆಯುವಂತಿಲ್ಲ. ತಿಂಗಳ ಎರಡನೇ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5ರೊಳಗೆ ತನಿಖಾಧಿಕಾರಿ ಮುಂದೆ ಆರು ತಿಂಗಳು ಅಥವಾ ಆರೋಪ ಪಟ್ಟಿ ಸಲ್ಲಿಸುವವರೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಾಮೀನು ನೀಡಿದೆ.
ಬಳಿಕ ಎಂ.ಎಲ್. ಶಿವಕುಮಾರ್ ದೂರಿನ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಜಾಮೀನು ನೀಡಿರುವ ಪ್ರಕರಣಕ್ಕೆ ವಿಧಿಸಿದ ಷರತ್ತುಗಳೇ ನಿರೀಕ್ಷಣಾ ಜಾಮೀನಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ತಿಳಿಸಿದೆ.