‘ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ಅನ್ನು ತೃಪ್ತಿಪಡಿಸುತ್ತಿದ್ದಾರೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಕಿಡಿಕಾರಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

ಬೆಳಗಾವಿ : ‘ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ಅನ್ನು ತೃಪ್ತಿಪಡಿಸುತ್ತಿದ್ದಾರೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಕಿಡಿಕಾರಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ವಿಜಯೇಂದ್ರ ಒಬ್ಬ ಕಲೆಕ್ಷನ್ ಕಿಂಗ್. ಅವರ ತಂದೆಯ ಖ್ಯಾತಿ ಕಡಿಮೆಯಾಗಲು ವಿಜಯೇಂದ್ರನೇ ಕಾರಣ. ಇದನ್ನು ವಿಜಯೇಂದ್ರ ಮರೆಯಬಾರದು’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ವಿಜಯೇಂದ್ರ ಅವರ ‘ಟ್ರಾನ್ಸ್‌ಫರ್‌ ಕಲೆಕ್ಷನ್‌’ ಎಷ್ಟು ಎಂಬುದನ್ನು ಬಿಚ್ಚಿಡಬೇಕಾ? ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ, ಸಿದ್ದರಾಮಯ್ಯ ಅವರನ್ನು ಔಟ್‌ ಗೋಯಿಂಗ್‌ ಸಿಎಂ ಎಂದು ಹೇಳಿರುವ ವಿಜಯೇಂದ್ರ ಅವರೇ ಔಟ್‌ ಗೋಯಿಂಗ್‌ ಅಧ್ಯಕ್ಷ ಎಂದು ಸಚಿವರಾದ ಎಂ.ಬಿ.ಪಾಟೀಲ್‌, ಮಾಜಿ ಸಚಿವ ರಾಜಣ್ಣ ಮತ್ತಿತರರು ಕಿಡಿಕಾರಿದ್ದಾರೆ.

ಬಿಚ್ಚಿಡಲಾ- ಡಿಕೆಶಿ?:

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಡಿಕೆಶಿ ಅವರು ಮಾತನಾಡಿದರು. ರಾಜ್ಯದ ಖಜಾನೆ ಖಾಲಿ ಮಾಡಿ ಹೈಕಮಾಂಡ್ ತೃಪ್ತಿಪಡಿಸಲಾಗುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ವಿಜಯೇಂದ್ರ ಆರೋಪ ಮಾಡುತ್ತಾರೆ. ವಿಜಯೇಂದ್ರರ ಕಲೆಕ್ಷನ್, ಅವರ ಅಕೌಂಟ್‌ಗಳು, ವಹಿವಾಟುಗಳನ್ನು ನಾನು ಬಿಚ್ಚಿಡಲಾ? ಎಂದು ಪ್ರಶ್ನಿಸಿದರು.

ಯಾವ ಖಜಾನೆ ಖಾಲಿಯಾಗಿದೆ? ವಿಜಯೇಂದ್ರ ಅವರು ವಿಧಾನಸಭೆಯಲ್ಲಿ ಮಾತನಾಡಿದರೆ ಅದಕ್ಕೆ ಏನು ಉತ್ತರ ಕೊಡಬೇಕು ಎಂಬುದು ನನಗೂ ಗೊತ್ತಿದೆ. ಒಂದು ಪಕ್ಷದ ಅಧ್ಯಕ್ಷರಾಗಿ ಅವರು ಇತಿಮಿತಿಯಿಂದ ಮಾತನಾಡಲಿ. ಅವರಿಗೆ ಸದನ ಅನುಭವವೂ ಇಲ್ಲ, ಜೀವನಾನುಭವವೂ ಇಲ್ಲ. ಮೊದಲು ಅವರು ವಿಧಾನಸಭೆಗೆ ಬಂದು, ಇದನ್ನು ಪ್ರಶ್ನೆ ಮಾಡಲಿ. ತಪ್ಪಿಸಿಕೊಂಡು ಹೋಗಿ ಎಲ್ಲೆಲ್ಲೋ ಮಾತನಾಡುವುದಲ್ಲ ಎಂದು ಕುಟುಕಿದರು.

‘ವಿಜಯೇಂದ್ರ ಒಬ್ಬ ದೊಡ್ಡ ಕಲೆಕ್ಷನ್ ಮಾಸ್ಟರ್‌. ಅವರ ತಂದೆಯ ಹೆಸರು ಕೆಡಿಸಿದ್ದು ಇವರೇ. ಅವರ ಟ್ರಾನ್ಸ್‌ಫರ್‌ ಕಲೆಕ್ಷನ್‌ ಎಷ್ಟು ಎಂಬುದನ್ನು ಬಿಚ್ಚಿಡಬೇಕಾ?’ ಎಂದು ಮರು ಪ್ರಶ್ನಿಸಿದರು.

ಲಕ್ಷ್ಮೀ ಹೆಬ್ಬಾಳಕರ ತಪ್ಪು ಮಾಹಿತಿ ನೀಡಿಲ್ಲ:

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಗೃಹಲಕ್ಷ್ಮಿ ವಿಚಾರವಾಗಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕಳೆದ 24 ತಿಂಗಳಿನಿಂದ ಗೃಹಲಕ್ಷ್ಮಿ ಹಣವನ್ನು ಮಹಿಳೆಯರಿಗೆ ನೀಡಿದ್ದೇವೆ. ಅವರು ಯಾವ ತಪ್ಪು ಮಾಹಿತಿ ನೀಡಿದ್ದಾರೆ?. ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಿದೆ. ಅದನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಇದರಲ್ಲಿ ಯಾವುದೇ ತಪ್ಪು ಮಾಹಿತಿಯಿಲ್ಲ. ನಾವು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುತ್ತೇವೆ ಎಂದು ಹೆದರಿ ಪ್ರತಿಪಕ್ಷಗಳು ದಾರಿ ತಪ್ಪಿಸಲು ಈ ವಿಚಾರ ಎತ್ತುಕೊಂಡಿದ್ದಾರೆ ಎಂದರು.

ಬಿಜೆಪಿಯವರಿಗೆ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳಲು ಆಗಿಲ್ಲ. ಆದರೆ, ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದರು.