ಬಿಜೆಪಿ-ಜೆಡಿಎಸ್‌ಗೆ ಮೈತ್ರಿ, ಕಾಂಗ್ರೆಸ್‌ಗೆ ಆಪರೇಷನ್ ಚಿಂತೆ: ವಿದ್ಯಾರ್ಥಿಗಳ ಕಿಡಿ
KannadaprabhaNewsNetwork | Published : Nov 04 2023, 12:30 AM IST
ಬಿಜೆಪಿ-ಜೆಡಿಎಸ್‌ಗೆ ಮೈತ್ರಿ, ಕಾಂಗ್ರೆಸ್‌ಗೆ ಆಪರೇಷನ್ ಚಿಂತೆ: ವಿದ್ಯಾರ್ಥಿಗಳ ಕಿಡಿ
ಸಾರಾಂಶ
ಬಿಜೆಪಿ-ಜೆಡಿಎಸ್‌ಗೆ ಮೈತ್ರಿ ಚಿಂತೆ, ಕಾಂಗ್ರೆಸ್‌ಗೆ ಆಪರೇಷನ್ ಚಿಂತೆ. ಈ ನಡುವೆ ಹೋರಾಟಗಾರರನ್ನು ಬಿಟ್ಟು ಕಾವೇರಿ ಚಿಂತೆ ಯಾರಿಗೂ ಇಲ್ಲ. ನೀರು ಸಂರಕ್ಷಣೆ ಆಳುವ ಸರ್ಕಾರಗಳ ಕರ್ತವ್ಯ ಎನ್ನುವುದನ್ನು ಅಧಿಕಾರದಲ್ಲಿರುವವರು ಮರೆತಿದ್ದಾರೆ ಎಂದು ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಳುವವರನ್ನು ಅಣಕಿಸಿದರು.
- ಕಾವೇರಿ ಹೋರಾಟಕ್ಕೆ ಯುವಜನರನ್ನು ಪ್ರೇರೇಪಿಸಲಿ - ನೀರು ಸಂರಕ್ಷಣೆ ಆಳುವ ಸರ್ಕಾರಗಳ ಕರ್ತವ್ಯ ಕನ್ನಡಪ್ರಭ ವಾರ್ತೆ ಮಂಡ್ಯ ಬಿಜೆಪಿ-ಜೆಡಿಎಸ್‌ಗೆ ಮೈತ್ರಿ ಚಿಂತೆ, ಕಾಂಗ್ರೆಸ್‌ಗೆ ಆಪರೇಷನ್ ಚಿಂತೆ. ಈ ನಡುವೆ ಹೋರಾಟಗಾರರನ್ನು ಬಿಟ್ಟು ಕಾವೇರಿ ಚಿಂತೆ ಯಾರಿಗೂ ಇಲ್ಲ. ನೀರು ಸಂರಕ್ಷಣೆ ಆಳುವ ಸರ್ಕಾರಗಳ ಕರ್ತವ್ಯ ಎನ್ನುವುದನ್ನು ಅಧಿಕಾರದಲ್ಲಿರುವವರು ಮರೆತಿದ್ದಾರೆ ಎಂದು ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಳುವವರನ್ನು ಅಣಕಿಸಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಿರಂತರ ಧರಣಿಯಲ್ಲಿ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗಿಯಾಗುತ್ತಿದ್ದು, ೬೦ನೇ ದಿನದ ಹೋರಾಟದಲ್ಲಿ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗಿಯಾಗಿ ಹೋರಾಟ ಬೆಂಬಲಿಸಿದರು. ವಿದ್ಯಾರ್ಥಿ ಮೋಹನ್ ಮಾತನಾಡಿ, ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದರೂ ರಾಜಕಾರಣಿಗಳು ತಲೆಕೆಡಿಸಿಕೊಂಡಿಲ್ಲ. ಜೆಡಿಎಸ್-ಬಿಜೆಪಿಗೆ ಮೈತ್ರಿ, ಕಾಂಗ್ರೆಸ್ ಪಕ್ಷಕ್ಕೆ ಆಪರೇಷನ್ ಚಿಂತೆ. ಇವರೆಲ್ಲಾ ರೈತರನ್ನು ಉದ್ದಾರ ಮಾಡುತ್ತಾರಾ. ಕುಡಿಯುವ ನೀರನ್ನು ಉಳಿಸುವ ಯೋಗ್ಯತೆಯನ್ನೂ ಆಳುವವರು ಪ್ರದರ್ಶಿಸದಿರುವುದು ನಾಚಿಕೆಗೇಡು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ತಮಿಳುನಾಡಿಗೆ ಅಡಮಾನ ಇಟ್ಟಿದ್ದಾರೆ ಎಂದು ಕಿಡಿಕಾರಿದರು. ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ತಮಿಳುನಾಡಿನ ಹಿತ ಕಾಯುತ್ತಿದೆ. ಆದರೂ ಸಹ ಕರ್ನಾಟಕದ ಶಾಸಕರು ಮತ್ತು ಸಂಸದರಿಗೆ ಪ್ರಶ್ನಿಸಲು ನರ ಇಲ್ಲ. ಮನೆ ಮಗಳು ಕಾವೇರಿಯನ್ನು ಬಿಟ್ಟುಕೊಡಲು ಸಾಧ್ಯವೇ. ಏಕೆ ಆಳುವ ಸರ್ಕಾರ ಮತ್ತು ರಾಜಕಾರಣಿಗಳು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಕೀರ್ತನಾ ಮಾತನಾಡಿ, ಕಾವೇರಿ ಹೋರಾಟಕ್ಕೆ ದೊಡ್ಡ ಮಟ್ಟದ ಪ್ರಚಾರ ಸಿಗುತ್ತಿಲ್ಲ. ಹುಲಿ ಉಗುರು ವಿಚಾರ ದೊಡ್ಡದಾಗಿದೆ. ಕಾವೇರಿ ಹೋರಾಟಕ್ಕೆ ಯುವ ಜನರನ್ನ ಪ್ರೇರಪಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ಕಾವೇರಿ ಹೋರಾಟದ ಬಗ್ಗೆ ಪ್ರಚುರ ಪಡಿಸಿ ಆಳುವ ಸರ್ಕಾರವನ್ನು ಪ್ರಶ್ನಿಸಿ ಕಾವೇರಿ ಉಳಿವಿಗಾಗಿ ಎಲ್ಲರನ್ನೂ ಒಗ್ಗೂಡಿಸಬೇಕು ಎಂದರು. ವಿದ್ಯಾರ್ಥಿ ಕೆ.ಎಂ ರೇವಣ್ಣ ಮಾತನಾಡಿ, ಕಾವೇರಿ ವಿಚಾರದಲ್ಲಿ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ, ಕುಡಿಯಲು ನೀರು ಇಲ್ಲದಂತೆ ನೆರೆ ರಾಜ್ಯಕ್ಕೆ ನೀರು ಬಿಡಲಾಗುತ್ತಿದೆ, ಬೆಂಗಳೂರಿನ ಜನತೆಗೆ ಕುಡಿಯಲು ಕಾವೇರಿ ಬೇಕು. ಆದರೆ ಅದನ್ನು ಉಳಿಸಿಕೊಳ್ಳಲು ಹೋರಾಟ ಮಾಡುವುದಿಲ್ಲ, ಕಾಂಗ್ರೆಸ್ ಗ್ಯಾರಂಟಿ ಮೂಲಕ ಕರ್ನಾಟಕದಲ್ಲಿ ಅಧಿಕಾರ ಹಿಡಿದಿದೆ, ಅದೇ ರೀತಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಕೂಟವನ್ನು ಗೆಲ್ಲಿಸಿಕೊಳ್ಳಲು ನಿರಂತರ ನೀರು ಹರಿಸುತ್ತಿದೆ ಎಂದು ಮೂದಲಿಸಿದರು.. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ರೈತ ಸಂಘದ ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಬಿಜೆಪಿ ಮುಖಂಡ ಸಿ.ಟಿ ಮಂಜುನಾಥ್, ನಾರಾಯಣ್, ವಿದ್ಯಾರ್ಥಿಗಳಾದ ತನು, ಪ್ರಶಾಂತ್ ಇತರರಿದ್ದರು.