ಕಾಯಕವೇ ಕೈಲಾಸ ಎಂದು ನಂಬಿದ ಯಡಿಯೂರಪ್ಪನವರ ಪಾಲಿಗೆ ಜನಸೇವೆಯೇ ಕಾಯಕ. 50 ವರ್ಷಗಳ ಕಾಲ ವಿಶ್ರಾಂತಿ ಎಂಬ ಪದವನ್ನೇ ಮರೆತು, ಜನರ ಸೇವೆಗಾಗಿ ಬದುಕನ್ನು ಸವೆಸಿದ್ದಾರೆ. ಅವರ ಮನದ ದೃಢತೆ ಎಂತಹದ್ದೆಂದರೆ, ಒಮ್ಮೆ ನಿಶ್ಚಯ ಮಾಡಿದರೆ ಅದು ಈಡೇರುವವರೆಗೂ ಅವರು ವಿರಮಿಸುತ್ತಲೇ ಇರಲಿಲ್ಲ.

-ಬಿ.ವೈ. ರಾಘವೇಂದ್ರ, ಸಂಸದರು

ಬಿ.ಎಸ್. ಯಡಿಯೂರಪ್ಪನವರು ನಮಗೆ ತಂದೆಯಷ್ಟೇ ಅಲ್ಲ, ಅವರೊಬ್ಬ ಆದರ್ಶ ಗುರು, ಮಾರ್ಗದರ್ಶಕರು, ಎಲ್ಲವೂ ಆಗಿದ್ದಾರೆ. ಜೀವನದಲ್ಲಿ ಸಮಸ್ಯೆ, ಸಂಕಷ್ಟಗಳು ಎದುರಾದಾಗ ಧೃತಿಗೆಡಬಾರದು, ಕುಗ್ಗಬಾರದು, ಅಂಜಬಾರದು. ಎದುರಾಗುವ ಯಾವುದೇ ಪರಿಸ್ಥಿತಿಯನ್ನೂ ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಬೇಕು. ಇದರ ಫಲಶೃತಿ ಒಳ್ಳೆಯದೇ ಆಗಿರುತ್ತದೆ ಎಂಬುದು ಅವರು ನಮಗೆ ಹೇಳಿಕೊಟ್ಟ ಜೀವನ ಪಾಠ. ಅವರು ನಡೆದು ಬಂದ ಹಾದಿ, ಎದುರಿಸಿದ ಕಷ್ಟಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ.

 ಜನರಿಗಾಗಿ ಜೀವನ ಅರ್ಪಣೆ 

ಸಾರ್ವಜನಿಕ ಬದುಕಿನಲ್ಲಿರುವಾಗ ರಾಜಕೀಯ ದ್ವೇಷಕ್ಕಾಗಿ ಶಿಕಾರಿಪುರದಲ್ಲಿ ನಡೆದ ಮಾರಣಾಂತಿಕ ಹಲ್ಲೆ ಎಂತಹ ಹೋರಾಟಗಾರನನ್ನೂ ಧೃತಿಗೆಡಿಸಿಬಿಡುತ್ತಿತ್ತು. ಆದರೆ ನನ್ನ ತಂದೆ ಇದನ್ನು ದೇವರು ಕರುಣಿಸಿದ ಮರುಜನ್ಮ ಎಂದು ಪರಿಗಣಿಸಿ, ‘ಜೀವನಪೂರ್ತಿ ಜನರಿಗಾಗಿ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ. ಸಂಘದ ಧ್ಯೇಯ ಸಿದ್ಧಾಂತದನುಸಾರ ರಾಜಕೀಯ ಸಂಘಟನೆ ಮಾಡುತ್ತೇನೆ. ಅಣ್ಣ ಬಸವಣ್ಣ ಅವರ ಕಾಯಕ ಶ್ರೇಷ್ಠತೆಯನ್ನು ಸಾರುವ ನಿಟ್ಟಿನಲ್ಲಿ ರೈತರೂ ಸೇರಿದಂತೆ ಸರ್ವ ಸಮುದಾಯಗಳ ಏಳಿಗಾಗಿ ಹೋರಾಡುತ್ತೇನೆ’ ಎಂಬ ಮಹಾಸಂಕಲ್ಪ ತೊಟ್ಟು ಇಲ್ಲಿಯವರೆಗೂ ನಡೆದು ಬಂದಿದ್ದಾರೆ. ಅವರು ನಡೆದು ಬಂದ ಈ 50 ವರ್ಷಗಳ ಸಾರ್ವಜನಿಕ ಬದುಕಿನ ಹಾದಿಯಲ್ಲಿ ಅವರು ಕುಟುಂಬ ಸೌಖ್ಯಕ್ಕೆ ಆದ್ಯತೆ ನೀಡಲಿಲ್ಲ. ಆದರೆ ನಮ್ಮ ತಾಯಿಯವರೂ ಸೇರಿದಂತೆ ಇಡೀ ಕುಟುಂಬ ಅವರ ರಾಜಕೀಯ ಬದುಕಿನ ಹೋರಾಟಗಳಿಗೆ ನೆರವಾಗುವುದು ನಮ್ಮ ಆದ್ಯ ಕರ್ತವ್ಯವೆಂದು ಭಾವಿಸಿ ಅವರ ನೆರಳು ಅನುಸರಿಸಿ ಸಾರ್ಥಕತೆಯನ್ನು ಪಡೆದುಕೊಂಡಿದ್ದೇವೆ.

 ರೈತರು, ಬಡವರಿಗಾಗಿ ಮಿಡಿಯುವವರು 

ಈ ಸಂದರ್ಭದಲ್ಲಿ ಘಟನೆಯೊಂದನ್ನು ಉಲ್ಲೇಖಿಸಬೇಕೆನಿಸುತ್ತದೆ. ನಾನಿನ್ನೂ ಆಗ ಚಿಕ್ಕ ಹುಡುಗ. ಒಮ್ಮೆ ತಂದೆಯವರು ನಮಗೆ ಜ್ಯೂಸ್ ಅಂಗಡಿಯಲ್ಲಿ ಹಣ್ಣಿನ ಜ್ಯೂಸ್ ಕೊಡಿಸಿದ್ದರು. ನಾನು ಅಭ್ಯಾಸದಂತೆ ಪೂರ್ತಿಯಾಗಿ ಕುಡಿಯದೆ ಸ್ವಲ್ಪ ಉಳಿಸಿ ಲೋಟ ವಾಪಸ್ ಇಟ್ಟೆ. ಅದನ್ನು ಗಮನಿಸಿದ ತಂದೆಯವರು, ‘ಹಾಗೆ ಯಾವುದನ್ನೂ ವ್ಯರ್ಥ ಮಾಡಬೇಡ. ಪ್ರತಿಯೊಂದು ತಿನ್ನುವ ಪದಾರ್ಥದ ಹಿಂದೆ ರೈತನ ಬೆವರ ಪರಿಶ್ರಮವಿರುತ್ತದೆ. ಅದನ್ನು ಅವಮಾನಿಸಬಾರದು. ತಿನ್ನುವ ಪದಾರ್ಥಗಳಿಗೆ ಗೌರವ ಕೊಟ್ಟರೆ ರೈತನಿಗೆ ಗೌರವ ಕೊಟ್ಟಂತೆ. ಆ ಮೂಲಕ ಭೂಮಿತಾಯಿಗೆ ತೃಪ್ತ ಭಾವದಿಂದ ಕೃತಜ್ಞತೆ ಹೇಳಿದಂತೆ’ ಎಂದು ಅವರು ತಿಳಿಸಿಕೊಟ್ಟರು.

ಬಡವರ ಸಮಸ್ಯೆಗಳನ್ನು ತಮ್ಮದೇ ಎನ್ನುವಂತೆ ಮನಸ್ಸಿಗೆ ಹಚ್ಚಿಕೊಂಡು ಹೆಗಲ ಮೇಲೆ ಹೊರುವ ಗುಣ ಅವರದು. ಶಿಕಾರಿಪುರದ ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಿದು. ಬಸ್ಸಿನ ಮೇಲೆ ಲಗೇಜುಗಳನ್ನು ಇರಿಸುವ, ಕೆಳಗಿಳಿಸುವ ಹಮಾಲಿಗಳು ಹಳ್ಳಿಗಾಡಿನಿಂದ ಬಂದ ಬಡವರಿಂದ ಹೆಚ್ಚಿನ ಹಣ ಕೇಳಿ ತಗಾದೆ ಮಾಡುತ್ತಿದ್ದರು. ಈ ದೃಶ್ಯ ಕಂಡ ನಮ್ಮ ತಂದೆಯವರು ಮಧ್ಯಪ್ರವೇಶಿಸಿ, ಬಡವರಿಗೆ ಹೊರೆಯಾಗದಂತೆ ಅವರಿಗೆ ಸಹಾಯ ಮಾಡಿ ಎಂದು ವಿನಂತಿಸಿದರು. ಆದರೆ ಅವರು ಸಹಕಾರ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ತಂದೆಯವರು ಸ್ವತಃ ಲಗೇಜ್ ಹೊತ್ತು, ಬಸ್ಸಿನ ಏಣಿಯ ಮೇಲೆ ಏರಲು ಶುರು ಮಾಡಿದರು. ಇದರಿಂದ ತಣ್ಣಗಾದ ಹಮಾಲಿಗಳು ತಂದೆಯವರನ್ನು ಕೆಳಗಿಳಿಯುವಂತೆ ವಿನಂತಿಸಿದರು. ಸಮಸ್ಯೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಅದಕ್ಕೊಂದು ಪರಿಹಾರ ಹುಡುಕುವುದು ಯಡಿಯೂರಪ್ಪನವರ ಹೋರಾಟದ ಗುರಿ ಮತ್ತು ಛಲ ಎಂಬುದಕ್ಕೆ ಈ ಘಟನೆಯನ್ನು ನಾನು ನೆನಪಿಸಬೇಕಾಯಿತು.

ಹೋರಾಟ, ಪಾದಯಾತ್ರೆಯ ಸಂದರ್ಭದಲ್ಲಿ ನನ್ನ ತಂದೆಯವರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಆಹ್ವಾನಿಸಿದರೆ ಅವರ ಮನೆಗಳಿಗೆ ಹೋಗಿ ತಂಗುತ್ತಿದ್ದರು. ಈಗಿನಂತೆ ಆಗ ಗೀಸರ್, ಬಾಯ್ಲರ್‌ಗಳು ಇರುತ್ತಿರಲಿಲ್ಲ. ಬೆಳಿಗ್ಗೆ 5 ಗಂಟೆಗೆ ಎದ್ದು ಅವರೇ ನೀರು ಕಾಯಿಸಿ, ಸ್ನಾನ ಇತ್ಯಾದಿಯನ್ನು ಮುಗಿಸಿ ಅತಿಥೇಯರಿಗೆ ಅನಗತ್ಯ ತೊಂದರೆಯಾಗಬಾರದೆಂದು ಕಾಳಜಿ ವಹಿಸುತ್ತಿದ್ದರು.

 ರಾಜಕೀಯ ಎಂದರೆ ಜನಸೇವೆ 

ಜನರ ಒತ್ತಾಯದಿಂದಾಗಿ ನಾನು ಮೊದಲ ಬಾರಿಗೆ ಚುನಾವಣೆಗೆ ನಿಲ್ಲಬೇಕಾಗಿ ಬಂದ ಸಂದರ್ಭದಲ್ಲಿ ನಮ್ಮ ತಂದೆ ಹೇಳಿದ್ದು ಇಷ್ಟೇ, ‘ಜನಸೇವೆಯಲ್ಲಿ ಆಸಕ್ತಿಯಿದ್ದರೆ ಮಾತ್ರ ರಾಜಕೀಯಕ್ಕೆ ಬಾ. ರಾಜಕೀಯ ಮತ್ತು ಅಧಿಕಾರವು ಜನಸೇವೆ ಹಾಗೂ ನಾಡನ್ನು ಕಟ್ಟುವ ಮಹತ್ವದ ಉದ್ದೇಶಕ್ಕೆ ಮೀಸಲಾಗಿರಬೇಕು. ಒಂದೊಂದು ದಿನವೂ ರಾಜಕೀಯ ಕ್ಷೇತ್ರದಲ್ಲಿ ಅಮೂಲ್ಯವಾದದ್ದು. ಅದರಲ್ಲೂ ಜನಪ್ರತಿನಿಧಿ ಆಗಿ ಕೆಲಸ ಮಾಡುವಾಗ ಪ್ರತಿ ನಿಮಿಷವನ್ನೂ ನಾವು ಯೋಜಿತವಾಗಿ ಉಪಯೋಗಿಸಬೇಕು. ಬಹುಪಾಲು ಸಮಯವನ್ನು ಜನರಿಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಮೀಸಲಿಡಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಉದ್ದೇಶ, ಸಂವಿಧಾನದ ಆಶಯ, ಜನರ ನಿರೀಕ್ಷೆ-ಅಪೇಕ್ಷೆಗಳನ್ನು ತಲುಪಲು ಸಾಧ್ಯ’ ಎಂಬ ಉಪದೇಶ ನೀಡಿದರು. ಅದನ್ನು ಜೀವನದ ವೇದವಾಕ್ಯ ಎಂದು ಪರಿಗಣಿಸಿರುವ ನಾನು ಹಾಗೂ ನನ್ನ ಸಹೋದರ ವಿಜಯೇಂದ್ರ ಇಂದಿಗೂ ಅವರ ನೆರಳನ್ನು ಅನುಸರಿಸಿ, ಅವರು ನಡೆದ ಹಾದಿಯಲ್ಲೇ ಸಾಗುತ್ತಿದ್ದೇವೆ.

ಇಡೀ ರಾಜ್ಯಕ್ಕೆ ಮಾದರಿ ಎನಿಸುವ ಸುಸಜ್ಜಿತ ವಿಮಾನ ನಿಲ್ದಾಣವೊಂದು ಶಿವಮೊಗ್ಗ ನಗರಕ್ಕೆಬರಬೇಕು ಎಂಬ ಜನರ ಅಪೇಕ್ಷೆಯನ್ನು ಈಡೇರಿಸಿದ ಸಂದರ್ಭ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಅದನ್ನು ಲೋಕಾರ್ಪಣೆಗೊಳಿಸಬೇಕೆಂಬ ನನ್ನ ಸಂಕಲ್ಪಕ್ಕೆ ಪ್ರೇರಣೆಯಾಗಿ ನಿಂತವರು ನನ್ನ ತಂದೆ ಬಿಎಸ್‌ವೈ ಅವರು.

ಬಹುವರ್ಷಗಳಿಂದ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ದರ್ಶನಕ್ಕೆ ಲಾಂಚ್‌ಅನ್ನು ಅವಲಂಬಿಸಿದ್ದ ಜನರ ಸೇತುವೆ ಹೊಂದುವ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ದೇಶದಲ್ಲೇ 2ನೇ ದೊಡ್ಡ ಸೇತುವೆ ಎಂಬ ಖ್ಯಾತಿ ಪಡೆದ ‘ಸಿಗಂದೂರು ಸೇತುವೆ’ ನಿರ್ಮಾಣದ ನನ್ನ ಭಗೀರಥ ಸಫಲ ಪ್ರಯತ್ನದ ಹಿಂದೆ ಪ್ರೇರಣೆಯಾಗಿದ್ದುದು ಕೂಡ ಅಪ್ಪಾಜಿಯವರ ‘ಹಿಡಿದ ಕಾರ್ಯ ಸಾಧಿಸುವರೆಗೂ ಬಿಡದ ಛಲದ ಸಂಕಲ್ಪ.

 ಬಿಎಸ್‌ವೈ ನಡೆದ ಹಾದಿ 

ಆರ್‌ಎಸ್‌ಎಸ್‌ ಆದರ್ಶದ ನೆರಳಿನಲ್ಲಿ ಬೆಳೆದ ಯಡಿಯೂರಪ್ಪ ಅವರು ಜನಸಂಘ, ಆ ನಂತರದ ಭಾರತೀಯ ಜನತಾ ಪಾರ್ಟಿಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಬೇಕೆಂಬ ಸಂಕಲ್ಪ ತೊಟ್ಟು ಮುನ್ನಡೆದವರು. ಖಾತೆಯೇ ತೆರೆಯಲಾಗದ ಸ್ಥಿತಿಯಲ್ಲಿದ್ದ ಪಕ್ಷವೊಂದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಂಬ ನಿರೀಕ್ಷೆಯಾಗಲೀ, ತಾನು ಮುಖ್ಯಮಂತ್ರಿಯಾಗುತ್ತೇನೆಂಬ ಕನಸು ಹೊತ್ತಾಗಲೀ ಅವರು ರಾಜಕಾರಣ ಮಾಡಲಿಲ್ಲ. ಅವರ ಮನಸಲ್ಲಿದ್ದುದು ಭಾರತೀಯ ಜನತಾ ಪಾರ್ಟಿಯನ್ನು(ಬಿಜೆಪಿ) ರಾಜ್ಯದಲ್ಲಿ ವಿಸ್ತರಿಸಬೇಕು. ಮುಗಿಲೆತ್ತರಕ್ಕೆ ಬೆಳೆಸಬೇಕು ಎಂಬುದು.

ಅವರ ಸಿದ್ಧಾಂತ ತತ್ವಗಳು ರಾಷ್ಟ್ರೀಯ ಕಾರ್ಯಕ್ರಮಗಳ ಜತೆಜತೆಗೇ ಕರುನಾಡಿನ ಸರ್ವತೋಮುಖ ಬೆಳವಣಿಗೆ ಹಾಗೂ ರೈತರು, ಮಹಿಳೆಯರು, ಶ್ರಮಜೀವಿಗಳ ಅಭಿವೃದ್ಧಿಯ ಕಡೆಗೆ ಎಂಬುದನ್ನು ನಿರೂಪಿಸುವ ನಿಟ್ಟಿನಲ್ಲಿ ಅವರ ಇಡೀ ಜೀವನವನ್ನು ಸಂಘಟನೆ ಹಾಗೂ ಹೋರಾಟಕ್ಕಾಗಿ ಸಮರ್ಪಿಸಿಕೊಂಡರು.

ವಿಶ್ರಾಂತಿ ಮರೆತು ಜನಸೇವೆ

ಕಾಯಕವೇ ಕೈಲಾಸ ಎಂದು ನಂಬಿದ ಯಡಿಯೂರಪ್ಪನವರ ಪಾಲಿಗೆ ಜನಸೇವೆಯೇ ಕಾಯಕ. 50 ವರ್ಷಗಳ ಕಾಲ ವಿಶ್ರಾಂತಿ ಎಂಬ ಪದವನ್ನೇ ಮರೆತು, ಜನರ ಸೇವೆಗಾಗಿ ಬದುಕನ್ನು ಸವೆಸಿದ್ದಾರೆ. ಅವರ ಮನದ ಧೃಡತೆ ಎಂತಹದ್ದೆಂದರೆ, ಒಮ್ಮೆ ನಿಶ್ಚಯ ಮಾಡಿದರೆ ಅದು ಈಡೇರುವವರೆಗೂ ಅವರು ವಿರಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ರಾಜ್ಯದಲ್ಲಿ 4 ಬಾರಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರೂ ಅವರ ಕನಸು, ಸಂಕಲ್ಪ ಹಾಗೂ ಜನಪರ ಯೋಜನೆಗಳನ್ನು ಪರಿಪೂರ್ಣಗೊಳಿಸಲು ಪರಿಪೂರ್ಣ ಅವಧಿ ಲಭಿಸಲಿಲ್ಲ ಎನ್ನುವುದು ಅವರ ಆಡಳಿತವನ್ನು ಹತ್ತಿರದಿಂದ ನೋಡಿದ ಅನೇಕ ಜನರ ಕೊರಗಾಯಿತು.

ಜನಪರ ಹೋರಾಟದ ವಿವಿ

ಯಡಿಯೂರಪ್ಪನವರು ಧರಿಸಿದ ‘ಹಸಿರು ಶಾಲು’ ಕೇವಲ ಬಟ್ಟೆಯಲ್ಲ. ಅದು ನಾಡಿನ ಅನ್ನದಾತರ ಭರವಸೆಯ ಸಂಕೇತ ಎಂದು ದೇಶಕ್ಕೆ ಸಾರುವ ನಿಟ್ಟಿನಲ್ಲಿ ಅವರು ಮಂಡಿಸಿದ ‘ಕೃಷಿ ಬಜೆಟ್ʼ ಹಸಿರು ಕ್ರಾಂತಿಯ ಇತಿಹಾಸದ ಮೈಲುಗಲ್ಲಾಗಿದೆ.

ರೈತನ ಶ್ರೇಷ್ಠತೆಯನ್ನು ಸಾರುವ ಈ ರೈತಗೀತೆಗೆ ಸರ್ಕಾರದ ಮಾನ್ಯತೆ ದೊರಕಿಸಿಕೊಟ್ಟು ಪ್ರತಿ ಕಾರ್ಯಕ್ರಮದಲ್ಲೂ ಅದು ರೈತಗೀತೆಯಾಗಿ ಹಾಡಬೇಕು ಎಂಬ ಆದೇಶ ಹೊರಡಿಸಿ, ಕುವೆಂಪು ಅವರ ಕಲ್ಪನೆಯ ‘ನೇಗಿಲ ಯೋಗಿʼಗೆ ಬಹುದೊಡ್ಡ ಗೌರವ ತಂದುಕೊಟ್ಟವರು ಅವರು.

ಭಾಗ್ಯಲಕ್ಷ್ಮೀ ಯೋಜನೆ, ಸಂಧ್ಯಾಸುರಕ್ಷಾ ಯೋಜನೆ ಎಲ್ಲವೂ ಯಡಿಯೂರಪ್ಪನವರ ಲಿಂಗ ಸಮಾನತೆ, ಕಾಳಜಿಯನ್ನು ಸಾರುವುದರ ಜೊತೆಗೆ ಮಾತೃ ಮಮತೆಯನ್ನು ಸಾಕ್ಷೀಕರಿಸುತ್ತದೆ. ದೀನ-ದಲಿತರ ಧ್ವನಿಯಾಗಿ, ಶೋಷಿತರ ಆಶಾಕಿರಣವಾಗಿ, ರೈತರ ರಕ್ಷಕನಾಗಿ, ಹೆಣ್ಣುಮಕ್ಕಳ ಹಿತೈಷಿಯಾಗಿ, ಜನರ ಪಾಲಿನ ನೆಚ್ಚಿನ ಜನನಾಯಕನಾಗಿ 50 ವರ್ಷಗಳ ಕಾಲ ಯಡಿಯೂರಪ್ಪನವರು ನಡೆದು ಬಂದ ಹೋರಾಟದ ಹಾದಿ, ಜನಪರ ಹೋರಾಟದ ಒಂದು ವಿಶ್ವವಿದ್ಯಾಲಯ ಎಂದು ಬಣ್ಣಿಸಿದರೆ ಉತ್ಪ್ರೇಕ್ಷೆಯಾಗಲಾರದು.

ದಕ್ಷಿಣದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆದುಕೊಡುವಲ್ಲಿ ತಮ್ಮ ಜೊತೆಗಿದ್ದ ದಿ. ಅನಂತ ಕುಮಾರ್ ಸೇರಿದಂತೆ ಅನೇಕ ಹಿರಿಯರನ್ನು ಕಟ್ಟಿಕೊಂಡು ಅವರು ಪಕ್ಷ ಸಂಘಟಿಸುವಲ್ಲಿ ತೋರಿದ ಧೀಮಂತಿಕೆ ತಪಸ್ವೀ ಸಂಘಟನಾಕಾರ ಎಂಬುದನ್ನು ಸಾಬೀತುಪಡಿಸಿದೆ. ಯಡಿಯೂರಪ್ಪನವರು ಈ ಕ್ಷಣಕ್ಕೂ, ಮುಂದೆಯೂ ಕಾರ್ಯಕರ್ತರಿಗೆ, ಸಂಘಟನೆಗೆ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಮಿಡಿಯುವ ಒಂದು ಪ್ರೇರಣಾ ಶಕ್ತಿಯಾಗಿ ನಮ್ಮ ಮುಂದೆ ಇರುತ್ತಾರೆ. ಹೋರಾಟ ಅವರ ಉಸಿರಿರುವವರೆಗೂ ಜೊತೆಯಲ್ಲಿಯೇ ಸಾಗಿ ಮುನ್ನಡೆಯಬೇಕೆಂಬುದು ಅವರ ಅಚಲ ಸಂಕಲ್ಪವಾಗಿದೆ. ಅದು ಜನರ ನಿರೀಕ್ಷೆಯೂ ಹೌದು. ಅವರು ನಮ್ಮ ಪೂಜ್ಯ ತಂದೆ ಎನ್ನುವುದಕ್ಕಿಂತ ಅವರು ಜನರ ಮಡಿಲಿನ ಪ್ರೀತಿಯಲ್ಲಿ ತೋಯ್ದ ‘ಜನನಾಯಕʼ ಎಂಬುದು ಮಕ್ಕಳಾದ ನಮಗೆ ಅತ್ಯಂತ ಹೆಮ್ಮೆ. ನಮ್ಮ ಸಾರ್ಥಕ ಬದುಕಿನ ಆದರ್ಶದ ಬೆಳಕಾಗಿ ಸದಾ ಅವರು ಪ್ರಜ್ವಲಿಸಲಿ ಎಂಬುದೇ ನಮ್ಮ ಹಾರೈಕೆ ಹಾಗೂ ದೇವರಲ್ಲಿ ಪ್ರಾರ್ಥನೆಯಾಗಿದೆ.