ಹಗರಿಬೊಮ್ಮನಹಳ್ಳಿ: ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯದ ಪ್ರಭಾವಿ ರೈತ ನಾಯಕ ಯಡಿಯೂರಪ್ಪ ಅವರ ಸುದೀರ್ಘ ೫ ದಶಕಗಳ ಹೋರಾಟದ ಬದುಕನ್ನು ಸಂಭ್ರಮಸುವ ನಿಟ್ಟಿನಲ್ಲಿ ಇದೇ ಮೇ ೯ರಂದು ಚಿತ್ರದುರ್ಗದಲ್ಲಿ ಯಡಿಯೂರಪ್ಪನವರ ಅಭಿಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ರೆಡ್ಡಿ ತಿಳಿಸಿದರು.

ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ಸಂಜೆ ಪಕ್ಷದ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಿಂದ ೫೦ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸುವ ಮೂಲಕ ಯಡಿಯೂರಪ್ಪನವರಿಗೆ ಅಭೂತಪೂರ್ವ ಗೌರವ ಸಲ್ಲಿಸಲಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಹೋರಾಟ ಮತ್ತು ಪರಿಶ್ರಮದ ಸಂಕೇತವಾಗಿದ್ದಾರೆ. ಮಹಿಳೆಯರು, ರೈತರು ಮತ್ತು ಬಡವರ ಪರವಾಗಿ ನಿರಂತರವಾಗಿ ಅವರು ನಡೆಸಿದ ಹೋರಾಟಕ್ಕೆ ಐದು ದಶಕಗಳ ಇತಿಹಾಸವಿದೆ. ಪ್ರತ್ಯೇಕ ಕೃಷಿ ಬಜೆಟ್, ಶೂನ್ಯ ಬಡ್ಡಿಯ ಕೃಷಿ ಸಾಲ, ಹೆಣ್ಣು ಮಗು ಎಂದು ಮೂಗು ಮುರಿಯುವವರಿಗೆ ಒದಗಿಸಿದ ಭಾಗ್ಯಲಕ್ಷ್ಮೀ ಯೋಜನೆ ಹಾಗೂ ಮತ್ತಿತರ ಜನಪರ ಯೋಜನೆಗಳು ಅವರನ್ನು ಮುತ್ಸದ್ದಿಯನ್ನಾಗಿಸಿದವು. ೫೦ ವರ್ಷಗಳ ಹೋರಾಟದ ಬದುಕನ್ನು ಸಂಭ್ರಮಿಸಲು ಆಯೋಜಿಸಿರುವ ಬಿ.ಎಸ್.ವೈ. ಅಭಿಮಾನೋತ್ಸವ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈಗಾಗಲೇ ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಭೆ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ೧೦೦ ಬಸ್ಸುಗಳ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಜೊತೆಗೆ ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಖಾಸಗಿ ವಾಹನಗಳಲ್ಲಿ ಯಡಿಯೂರಪ್ಪನವರ ಅಭಿಮಾನಿಗಳನ್ನು ಕರೆದೊಯ್ಯಲು ಕಟಿಬದ್ಧರಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯಿಂದ ೧೫ ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕನಕಪ್ಪ, ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್, ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ್, ಮಂಡಲ ಕಾರ್ಯದರ್ಶಿ ದಿವಾಕರಗೌಡ, ಪುರಸಭೆ ಸದಸ್ಯರಾದ ಸುರೇಶ್ ಬಣಕಾರ್, ನವೀನಕುಮಾರ, ನಾಗರಾಜ ಜನ್ನು ಮುಖಂಡರಾದ ಅಂಬಳಿ ರವೀಂದ್ರಗೌಡ್, ಸಂದೀಪ್ ಶಿವಮೊಗ್ಗ, ಜಿ.ಕಾಳೇಶ್ ಮತ್ತಿತರರಿದ್ದರು.