ಮಿಲೇನಿಯಲ್ ಅಪ್ಪ ಅಮ್ಮನಿಗೆ ಭಯ ತರಿಸುವ ಜೆನ್ ಜಿ ಮಕ್ಕಳು : ಎಲ್ಲಾ ಗೊತ್ತು ಎನ್ನುವ ಗತ್ತು

| N/A | Published : Oct 05 2025, 12:58 PM IST

Gen Z
ಮಿಲೇನಿಯಲ್ ಅಪ್ಪ ಅಮ್ಮನಿಗೆ ಭಯ ತರಿಸುವ ಜೆನ್ ಜಿ ಮಕ್ಕಳು : ಎಲ್ಲಾ ಗೊತ್ತು ಎನ್ನುವ ಗತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಮಿಲೇನಿಯಲ್ ಅಪ್ಪ ಅಮ್ಮನಿಗೆ ಭಯ ತರಿಸುವ ಜೆನ್ ಜಿ ಮಕ್ಕಳಿಗೆ, ಆ ಮೌನ ನಿಮ್ಮಲ್ಲಿ ಅದಾರು ತಂದು ಹೇರಿದ್ದಾರೋ ಏನೋ, ಲಾನಾ ಹಾಡುಗಳ ಉನ್ಮತ್ತ ಹೈ ನೋಟ್ ಥರ ಚುರುಕು, ನಿರ್ಭಿಡೆ ನಿಮ್ಮ ಯೋಚನೆಗಳು.

-ವಿಕಾಸ್ ನೇಗಿಲೋಣಿ

ಮಿಲೇನಿಯಲ್ ಅಪ್ಪ ಅಮ್ಮನಿಗೆ ಭಯ ತರಿಸುವ ಜೆನ್ ಜಿ ಮಕ್ಕಳಿಗೆ, ಆ ಮೌನ ನಿಮ್ಮಲ್ಲಿ ಅದಾರು ತಂದು ಹೇರಿದ್ದಾರೋ ಏನೋ, ಲಾನಾ ಹಾಡುಗಳ ಉನ್ಮತ್ತ ಹೈ ನೋಟ್ ಥರ ಚುರುಕು, ನಿರ್ಭಿಡೆ ನಿಮ್ಮ ಯೋಚನೆಗಳು. ಬಹುಬೇಗ ಬದುಕನ್ನು ಅರ್ಥ ಮಾಡಿಕೊಂಡವರ ಥರ ಏನಾದರೂ ಹೇಳಿದರೆ ಹ್ಮ್ ಅನ್ನುತ್ತೀರಾ, ಟಿವಿಯಲ್ಲೋ, ಸ್ಕ್ರೀನ್ ಮೇಲೋ ಸಿನಿಮಾ ಬರುತ್ತಿದ್ದರೆ ಯಾವುದೇ ಭಾವವಿಲ್ಲ, ಪಕ್ಕದಲ್ಲಿ ಅಮ್ಮ ಭಾವುಕವಾಗಿ ಅಳಲಿ, ಖುಷಿಯಿಂದ ನಗಲಿ, ನೀವು ಮಾತ್ರಾ ಹೂಂ, ಏನಿವಾಗ ಅನ್ನುವಂತೆ ಕೂತಿರುತ್ತೀರಾ, ಅಷ್ಟರ ಮಟ್ಟಿಗಿನ ನಿರ್ಭಾವುಕತೆಯನ್ನು ನಿಮ್ಮಲ್ಲಿ ಇಟ್ಟವರಾರು, ಗೊತ್ತಿಲ್ಲ. ತೊಟ್ಟ ಬಟ್ಟೆಯ ಬ್ರಾಂಡ್ ಗೊತ್ತು, ಹೊಸದಾಗಿ ಮಾರುಕಟ್ಟೆಗೆ ಬಂದ ಕಾರುಗಳ ಬೆಲೆ ಗೊತ್ತು, ಕೊರಿಯನ್ ಡ್ರಾಮಾಗಳ ಹೀರೋ, ಹೀರೋಯಿನ್ ಗೊತ್ತು, ಹೊಸ ಪಾಪ್ ಹಾಡುಗಾರರು ಗೊತ್ತು, ಸ್ಕಿನ್ ಕೇರ್ ಪ್ರಾಡಕ್ಟ್ ಗೊತ್ತು, ಅದಕ್ಕೆಲ್ಲಾ ತುಂಬಾ ಖರ್ಚಾಗುತ್ತದೆ ಅನ್ನುವ ಪ್ರಜ್ಞೆಯೂ ಉಂಟು.

ಎಲ್ಲಾ ಗೊತ್ತು ಎನ್ನುವ ಗತ್ತು, ಏನಿವಾಗ ಎನ್ನುವ ಅಹಂ, ಇಟ್ಸ್ ಓಕೆ ಅನ್ನುವ ತಾಳ್ಮೆ- ಎಲ್ಲವೂ ಮಿಲೇನಿಯಲ್ ಅಪ್ಪಾಮ್ಮನಿಗೆ ಏಕಕಾಲಕ್ಕೆ ಮುಂದೇನೋ ಅನ್ನುವ ಭಯವೂ ಹೌದು, ಅವರ ಮುಂದಿನ ಬದುಕು ಬೇರೆಯಾಗೇ ಇರುತ್ತದೆ ಅನ್ನುವ ಭರವಸೆಯೂ ಹೌದು.

ಇನ್ನೂ ಟೀನೇಜಿನಲ್ಲಿರುವಾಗಲೇ ನಿಮಗಿರುವ ಸ್ಪಷ್ಟತೆ ನಿಮ್ಮ ಅಪ್ಪಾಮ್ಮನಿಗೆ ಕಾಲೇಜು ಮುಗಿಸಿ ಕೆಲಸ ಹಿಡಿಯುವಾಗಲೂ ಇರಲಿಲ್ಲ, ದಿಕ್ಕೆಟ್ಟು ನಿಂತು, ಹೆದರಿ, ಬೈಸಿಕೊಂಡು, ಹೊಡೆಯಿಕೊಂಡು ಏಕಾಂತದಲ್ಲಿ ಅತ್ತು, ಲೋಕಾಂತದಲ್ಲಿ ನಾಟಕವಾಡಿ ಬದುಕು ಹೇಗೋ ಬದುಕುತ್ತಾ ಬದುಕುತ್ತಾ ಕಲಿಸುತ್ತಿತ್ತು. ಆದರೆ ನಿಮಗೆ ಹಣ, ಜನ, ಕೆಲಸ, ಮದುವೆ ಅಂತ ಎಲ್ಲದರ ಬಗ್ಗೆಯೂ ಒಂದು ಕ್ಲಾರಿಟಿ ಇದೆ, ಧೈರ್ಯ ಇದೆ, ಜೊತೆಗೆ ಹುಂಬ ಆತ್ಮವಿಶ್ವಾಸ. ಈ ಜ್ಞಾನವೆಲ್ಲಾ ನಿಮಗೆ ಬಂದಿದ್ದು ತಂತ್ರಜ್ಞಾನದಿಂದಲೋ, ಈ ಕಾಲದ ವೇಗದಿಂದಲೋ- ಗೊತ್ತಿಲ್ಲ. ಮೊನ್ನೆ ಮೊನ್ನೆ ಎಂಟರ ಹುಡುಗನೊಬ್ಬ ತುಂಬಿದ ಸಭೆಯಲ್ಲಿ ಪಿಪಿಟಿ ಪ್ರಸೆಂಟೇಶನ್ ಕೊಡುತ್ತಾ ಬದುಕಿನ ಬಗ್ಗೆ, ಯಶಸ್ಸಿನ ಬಗ್ಗೆ ಟೆಡ್ ಟಾಕ್ ಕೊಡುತ್ತಿದ್ದ, ಪುಟ್ಟ ಹುಡುಗ ಕೈ ಕಣ್ಣು ತಿರುಗಿಸಿ ಯಾವ ಅಂಜಿಕೆಯಿಲ್ಲದೇ ಹಾಡುತ್ತಿದ್ದ, ಬೀದಿಯಲ್ಲಿ ಮೈಕ್ ಹಿಡಿದರೆ ಮತ್ತೊಬ್ಬ ಟೀನೇಜ್ ಪೋರ ಮೈಕ್ ಹಿಡಿದವರನ್ನೇ ಪ್ರಶ್ನೆ ಮಾಡುತ್ತಿದ್ದ. ಇದನ್ನೆಲ್ಲಾ ನೋಡಿದಾಗ ಅವರ ಈ ಪರಿ ಬೆಳವಣಿಗೆ ಅಂಜಿಕೆ ತರಿಸುತ್ತದೆ.

ಅವರು ಜಗತ್ತಲ್ಲಿ ತಮ್ಮ ಮೂವತ್ತು, ನಲವತ್ತು, ಐವತ್ತು ತಲುಪುವಾಗ ಇದನ್ನೆಲ್ಲಾ ಉಳಿಸಿಕೊಂಡಿರುತ್ತಾರೋ ಇಲ್ಲವೋ, ಬಹುಬೇಗ ಬದುಕು ಬೆರಗು ಕಳೆದುಕೊಂಡು ಡಿಪ್ರೆಶನ್ನು, ಒತ್ತಡ, ಸಿನಿಕತನ, ಕೀಳರಿಮೆ, ಫ್ರಸ್ಟ್ರೇಷನ್ನುಗಳು ಆವರಿಸಿಕೊಳ್ಳದಿರಲಿ ಅಂತ ಹಾರೈಸುತ್ತವೆ ಮಿಲೇನಿಯಲ್ ಮನಸ್ಸುಗಳು. ಯಾಕೆಂದರೆ ಹತ್ತುಹಲವು ಸಕಾರಾತ್ಮಕ ಗುಣಗಳೇ ಜೆನ್ ಜಿಯಲ್ಲಿ ಕಾಣಿಸಿದರೂ ಮಿಲೇನಿಯಲ್ ಜೆನರೇಶನ್ ಗೆ ಇದ್ದ ಮುಗ್ಧತೆ, ಬೆರಗು, ಸಹಜತೆ, ತಾಳ್ಮೆ, ಸಾವಕಾಶ ಅವರಲ್ಲಿಲ್ಲ.

ಕಡಿಮೆ ಆಯಸ್ಸಿನ ಒಂದು ಚಿಟ್ಟೆಗೂ ಸಾವಧಾನದ ಅವಸ್ಥಾಂತರಗಳಿವೆ, ಎಲ್ಲಾ ಭಾವನೆಗಳನ್ನೂ ಆಯಾ ಅವಸ್ಥೆಯಲ್ಲಿ ಹಾಗ್ಹಾಗೇ ಅನುಭವಿಸಿ ಬೆಳೆಯಬೇಕೇ ಹೊರತೂ ಅವಸರದಲ್ಲಿ ಬದುಕಿಲ್ಲ.

ಹಾಗಾಗಿ ಭಯವಾಗುತ್ತದೆ, ಜೆನ್ ಜಿ ಮಕ್ಕಳೇ!

ಒಂದು ಘಟನೆ:

ಸ್ಕೂಲಿಗೆ ಹೋಗುವ ಬಸ್ಸಿನಲ್ಲಿ ದಿನಾ ಹುಡುಗಿಯರಿಗೆ ಒಂದಷ್ಟು ಹುಡುಗರು ಕಾಟ ಕೊಡುತ್ತಿದ್ದರು, ಹೆಣ್ಮಕ್ಕಳಿಗೆ ಮುಜುಗರ, ಕೋಪ, ತಾಪ ಎಲ್ಲವೂ ಇತ್ತು. ಕಂಪ್ಲೇಂಟು ಮಾಡಬೇಕು, ಆದರೆ ಹೇಗೋ ಹೇಳಿಬಿಟ್ಟರೆ ಪರಿಣಾಮಕಾರಿಯಾಗಿರುವುದಿಲ್ಲ ಅಂತ ಗೊತ್ತಾಯಿತು. ಒಂದು ದಿನ ಆ ಇಬ್ಬರು ಹುಡುಗಿಯರು ಹಣೆಗೆ ಕುಂಕುಮ ಬೊಟ್ಟು ತೊಟ್ಟು ಟೀಚರ್ ಹತ್ತಿರ ಹೋದರು, ನೋಡಿ ಮೇಡಂ, ಹೆಣ್ಮಕ್ಕಳನ್ನು ಅಗೌರವದಿಂದ ನೋಡ್ತಿದ್ದಾರೆ, ಇದು ಸರಿಯಲ್ಲ. ನೀವೂ ಒಬ್ಬ ಹೆಣ್ಣು, ಸಂಸ್ಕಾರ ಇರುವವರು, ಹುಡುಗರು ಹೀಗೆಲ್ಲಾ ಪುಂಡುತನ ಮಾಡೋದು ನಿಮಗೇ ಸರಿ ಅನ್ನಿಸತ್ತಾ ಅಂತ ಕೇಳಿದರು. ಅವಳ ಬೊಟ್ಟು, ಸಂಸ್ಕಾರದ ಮಾತುಗಳು ಟೀಚರ್ ಮೇಲೆ ಬಹಳ ಬೇಗ ಭಾವನಾತ್ಮಕ ಪರಿಣಾಮ ಬೀರಿದವು. ಆ ಟೀಚರ್ ಗೆ ಅದು ಬರೀ ಕಂಪ್ಲೇಂಟ್ ಆಗಿರಲಿಲ್ಲ, ನೈತಿಕ ಜವಾಬ್ದಾರಿ ಆಗಿತ್ತು, ಪುಂಡು ಮಕ್ಕಳಿಗೆ ಸರಿಯಾಗಿ ಪಾಠ ಕಲಿಸಿದರು, ಹೆಣ್ಮಕ್ಕಳ ಆ ಜಾಣ್ಮೆ ಫಲ ಕೊಟ್ಟಿತು!

ಇನ್ನೊಂದು ಘಟನೆ:

ಇನ್ನೂ ಏಳನೇ ಕ್ಲಾಸು. ಆನ್ ಲೈನ್ ಗೇಮ್‌ನಲ್ಲಿ ತೊಡಗಿಕೊಂಡಿದ್ದರು ಕ್ಲಾಸ್ ಮೇಟ್‌ಗಳು. ಕ್ಲಾಸಿನ ಹುಡುಗನೊಬ್ಬ ಹುಡುಗಿಗೆ ಗೇಮ್‌ನಲ್ಲಿ ಪಾಯಿಂಟ್ಸ್ ಕೊಡುತ್ತೇನೆ ಅಂತ ಮಾತು ಕೊಟ್ಟಿದ್ದಾನೆ, ಅವಳಿಗೆ ಆ ಪಾಯಿಂಟ್ಸ್ ಬೇಕಾಗಿತ್ತು, ಕೊಡು ಅಂತ ಕೇಳಿದ್ದಾಳೆ. ಅವನು ಕೊಡೋದಿಲ್ಲ, ಮುಂದೆ ಬಗ್ಗಿ ನಿಂತಿಕೋ ಅಂತ ಕೇಳಿದ್ದಾನೆ, ಅವಳಿಗೆ ಆಘಾತವಾಗಿದೆ, ವಯಸ್ಸಿಗೆ ಬರುತ್ತಿರುವ ಹುಡುಗಿಗೆ ಅವನ ಮಾತಿನ ಒಳಾರ್ಥ ಗೊತ್ತಾಗಿದೆ, ನಾಲ್ಕಾರು ದಿನ ಮಂಕಾಗಿದ್ದವಳು ಒಂದು ದಿನ ಅಮ್ಮನ ಮುಂದೆ ಬೋರೆಂದು ಅತ್ತಿದ್ದಾಳೆ, ವಿಷಯ ತಿಳಿಸಿದ್ದಾಳೆ, ಟೀಚರ್‌ಗೆ ಕಂಪ್ಲೇಂಟ್ ಹೋಗಿ, ಆ ಹುಡುಗನನ್ನು ಕರೆಸಿದರೆ ಅವನಿಗೆ ಕೊಂಚವೂ ಪಾಪಪ್ರಜ್ಞೆ ಇಲ್ಲ. ತಲೆ ತಗ್ಗಿಸಬೇಕಾದ ಹುಡುಗ ಧೈರ್ಯವಾಗಿ ಸಮರ್ಥನೆಗೆ ನಿಂತಿದ್ದಾನೆ!

-ಈ ಎರಡು ಘಟನೆಗಳಲ್ಲಿ ಭವಿಷ್ಯದ ಬಗ್ಗೆ ವಿಚಿತ್ರ ಭಯವೂ ಇದೆ, ಭರವಸೆಯೂ ಇದೆ. ಹಿಂದಿನ ಜನರೇಶನ್ನಿಗಿಂತ ಹೆಚ್ಚು ಜಾಣರು ಈ ಜೆನ್ ಜಿಯವರು, ಬದುಕುವ ಎಷ್ಟೋ ದಾರಿಗಳನ್ನ ಆಗಲೇ ಹ್ಯಾಕ್ ಮಾಡಿಕೊಂಡಿದ್ದಾರೆ, ಹಳೆ ಜನಾಂಗದ ಹಳೆ ದಾರಿಯಲ್ಲಿ ಅವರಿಗಷ್ಟಾಗಿ ಆಸಕ್ತಿ ಇಲ್ಲ, ಹೊಸ ದಾರಿ ತಮಗೆ ಗೊತ್ತು ಅನ್ನುತ್ತಾ ಎದೆಯುಬ್ಬಿಸಿ ನಡೆದಿದ್ದಾರೆ. ಹಾಗಂತ ದಾರಿ ತಪ್ಪುವ ಹೊಸ ಹೊಸ ಹಾದಿಗಳು ಅವರ ಮುಂದೆ ತೆರೆದುಕೊಳ್ಳುತ್ತಿವೆ, ಅದರ ಎಚ್ಚರ ಇಲ್ಲ. ತಾವಾಗಿಯೇ ಎಡವಿ, ತಾವಾಗಿಯೇ ಎದ್ದು ದಾಟಬೇಕು, ಹಾಗೆ ದಾಟುವುದಕ್ಕೆ ಅವರಿಗೆ ಗೊತ್ತಿದೆ ಕೂಡ; ಚಿಲ್, ಕೂಲ್, ಮೂವ್ ಆನ್ ಅಂತ ಅವರೀಗಾಗಲೇ ಹೇಳುತ್ತಿದ್ದಾರಲ್ಲ!

ಒಂದಂತೂ ನಿಜ, ಈ ಜೆನ್ ಜಿ ಭವಿಷ್ಯದಲ್ಲಿ ಹೆಚ್ಚು ಸೆನ್ಸಿಬಲ್ ಆಗಿಯಂತೂ ಇರುತ್ತಾರೆ. ಅವರಪ್ಪಾಮ್ ಮಾಡುವ ಬಾಡಿ ಶೇಮಿಂಗ್ ಜೋಕುಗಳಿಗೆ ಅವರು ನಗುವುದಿಲ್ಲ, ಅಕ್ಕಪಕ್ಕದವರು ಅನ್ಯಜಾತಿ/ ಕೋಮನ್ನು ಕೆಣಕಿದರೆ ಕಣ್ಣು ಕೆಂಪು ಮಾಡುತ್ತಾರೆ, ಲಿಂಗತಾರತಮ್ಯ ಕಂಡರೆ ಕೆಂಡದಂಥ ಕೋಪ ಬರುತ್ತದೆ. ಅವರ ಕೈಲಿರೋ ತಂತ್ರಜ್ಞಾನ ಹಿಂದೆಂದಿಗಿಂತ ತೀಕ್ಷ್ಣ, ಅವರ ಆತ್ಮವಿಶ್ವಾಸ ಹಿಂದಿನವರಿಗಿಂತ ಪ್ರಕರ. ಅವರ ಗುರಿ ನಮ್ಮೆಲ್ಲರಿಗಿಂತ ನೇರ.

ಆದರೂ ಮಿಲೇನಿಯಲ್ ಅಪ್ಪ ಅಮ್ಮನಿಗೆ ಭಯವಿದ್ದೇ ಇರುತ್ತದೆ ಜೆನ್ ಜಿ ಮಕ್ಕಳ ಬಗ್ಗೆ; ಯಾಕೆಂದರೆ ಇವರಿಗೆ ಎಲ್ಲಾ ರೆಸಿಪಿ ಮೊದಲೇ ಗೊತ್ತು, ಅಡುಗೆ ಗೊತ್ತಿಲ್ಲ, ಸ್ಕಿನ್ ಕೇರ್ ಗೊತ್ತು, ಸ್ಕಿನ್ ಗೊತ್ತಿಲ್ಲ, ಬ್ರಾಂಡು ಗೊತ್ತು, ಬೆಲೆ ಗೊತ್ತಿಲ್ಲ, ಬಾಳು ಗೊತ್ತು, ಏಳುಬೀಳುಗಳು ಅಭ್ಯಾಸವಾಗಿಲ್ಲ.

Read more Articles on