ಸಾರಾಂಶ
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು. ಪರಿಹಾರ
ಅಧಿಕಾರದ ರುಚಿಗೆ ಬಂದಿಲ್ಲ: ಪ್ರಧಾನಿ ಸುಶೀಲಾಕಠ್ಮಂಡು: ತಮ್ಮನ್ನಾಳುತ್ತಿದ್ದ ಭ್ರಷ್ಟ ಸರ್ಕಾರವನ್ನು ಕಿತ್ತೆಸೆದು ಮಧ್ಯಂತರ ಸರ್ಕಾರ ರಚನೆಗೆ ಕಾರಣವಾದ ಜೆನ್-ಝಿ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ಯುವಕರನ್ನು ಮಧ್ಯಂತರ ಪ್ರಧಾನಿ ಸುಶೀಲಾ ಕಾರ್ಕಿ ಅವರು ‘ಹುತಾತ್ಮರು’ ಎಂದು ಘೋಷಿಸಿದ್ದಾರೆ. ಜತೆಗೆ ಅವರ ಪರಿವಾರಗಳಿಗೆ 10 ಲಕ್ಷ ರು. ಪರಿಹಾರವನ್ನೂ ಘೋಷಿಸಿದ್ದಾರೆ.
ಸೆ.8ರಂದು ಶುರುವಾದ ಪ್ರತಿಭಟನೆಯಲ್ಲಿ ಈವರೆಗೆ 72 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಯುವ ಜನತೆಯಿಂದಲೇ ಆಯ್ಕೆಯಾದ ಮಾಜಿ ಸಿಜೆಎನ್ ನ್ಯಾ।ಸುಶೀಲಾ ಕಾರ್ಕಿ, ಶುಕ್ರವಾರ ಪ್ರಮಾಣ ಸ್ವೀಕರಿಸಿದ್ದರು. ಇದೀಗ ಲೈಂಚೌರ್‌ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ, ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಪ್ರಧಾನಿಗಳ ಕಚೇರಿಯಾಗಿ ಪರಿವರ್ತಿಸಲಾಗಿರುವ ಗೃಹ ಸಚಿವಾಲಯದಲ್ಲಿ ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಿ, ‘ನಾನಿಲ್ಲಿ ಅಧಿಕಾರಿದ ರುಚಿ ನೋಡಲು ಬಂದಿಲ್ಲ. ಬದಲಿಗೆ ದೇಶದಲ್ಲಿ ಸ್ಥಿರತೆ ಮತ್ತು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವುದೇ ನಮ್ಮ ಉದ್ದೇಶ. ಆದ್ದರಿಂದ 6 ತಿಂಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಇರುವುದಿಲ್ಲ. ಆರ್ಥಿಕ ಸ್ಥಿರತೆ ತರಲು, ನ್ಯಾಯವನ್ನು ಖಚಿತಪಡಿಸುವ ಕೆಲಸ ಆಗಬೇಕಿದ್ದು, ನಿಮ್ಮ ಬೆಂಬಲವಿಲ್ಲದೆ ಇದ್ಯಾವುದೂ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.