ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!

| N/A | Published : Sep 16 2025, 12:32 PM IST

Gold Silver

ಸಾರಾಂಶ

ಗೋಲ್ಡ್‌ ಇಟಿಎಫ್‌ ಮತ್ತು ಸಿಲ್ವರ್‌ ಇಟಿಎಫ್‌ ಬಂಪರ್‌ ಫಸಲು ಕೊಡುವ ಹೂಡಿಕೆಗಳೆಂದೇ ಜನಪ್ರಿಯ. ಆದರೆ ಚಿನ್ನ, ಬೆಳ್ಳಿ ಇವೆರಡರಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ.

ಗೋಲ್ಡ್‌ ಇಟಿಎಫ್‌ ಮತ್ತು ಸಿಲ್ವರ್‌ ಇಟಿಎಫ್‌ ಬಂಪರ್‌ ಫಸಲು ಕೊಡುವ ಹೂಡಿಕೆಗಳೆಂದೇ ಜನಪ್ರಿಯ. ಆದರೆ ಚಿನ್ನ, ಬೆಳ್ಳಿ ಇವೆರಡರಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ.

ಚಿನ್ನ ಇಟಿಎಫ್‌, ಬೆಳ್ಳಿ ಇಟಿಎಫ್‌ ಅನ್ನೋದು ಹೂಡಿಕೆಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಆ ಬಗ್ಗೆ ತಿಳಿಯೋದಕ್ಕಿಂತ ಮೊದಲು ಇಟಿಎಫ್‌ ಅಂದರೇನು ಅಂತ ಅರ್ಥ ಮಾಡಿಕೊಂಡರೆ ಉತ್ತಮ.

ಇಟಿಎಫ್‌ ಅಂದರೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌. ಇದರಲ್ಲಿ ನೀವು ನೇರವಾಗಿ ಚಿನ್ನ, ಬೆಳ್ಳಿ ಖರೀದಿ ಮಾಡಬೇಕಿಲ್ಲ. ಬದಲಿಗೆ ಏರಿಳಿಯುವ ಅದರ ಬೆಲೆಯ ಮೇಲೆ ಹೂಡಿಕೆ ಮಾಡಬಹುದು. ಇದನ್ನು ಷೇರುಗಳಂತೆ ಖರೀದಿಸಬಹುದು, ಮಾರಬಹುದು. ಸಂಗ್ರಹದ ತಲೆನೋವು ಇರುವುದಿಲ್ಲ.

ಲಾಭ ಯಾವುದರಲ್ಲಿ ಜಾಸ್ತಿ?

ಕಳೆದ ವರ್ಷ ಚಿನ್ನ ಮತ್ತು ಬೆಳ್ಳಿ ಇಟಿಎಫ್‌ಗಳೆರಡೂ ಹೂಡಿಕೆದಾರರ ಮುಖದಲ್ಲಿ ಮಂದಹಾಸ ಮೂಡಿಸಿದ್ದವು. ಈ ಎರಡೂ ಇಟಿಎಫ್‌ಗಳಲ್ಲಿ ಸುಮಾರು ಶೇ. 47ರಷ್ಟು ಲಾಭ ಇನ್‌ವೆಸ್ಟರ್ಸ್‌ ಜೇಬು ಸೇರಿದೆ. ಕಳೆದ ವರ್ಷ ಚಿನ್ನ ಹಾಗೂ ಬೆಳ್ಳಿ ಎರಡೂ ಅಲಂಕಾರಿಕ ಲೋಹಗಳ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಹಾಗೆ ನೋಡಿದರೆ ಚಿನ್ನಕ್ಕಿಂತಲೂ ಬೆಳ್ಳಿಯಲ್ಲಿ ಹೂಡಿಕೆ ಮಾಡಿದವರಿಗೆ ಕೊಂಚ ಹೆಚ್ಚೇ ಲಾಭ ಬಂದಿದೆ. ಬೆಳ್ಳಿ ಶೇ.54 ರಷ್ಟು ಏರಿಕೆ ಕಂಡರೆ, ಚಿನ್ನ ಶೇ.48ರಷ್ಟು ಏರಿಕೆ ಕಂಡಿದೆ.

ಯಾವುದು ಹೆಚ್ಚು ಸುರಕ್ಷಿತ?

ಹೂಡಿಕೆದಾರರು ಹೆಚ್ಚು ಲಾಭ ನೋಡಿದರೆ ಮಾತ್ರ ಸಾಕಾಗುವುದಿಲ್ಲ. ಯಾವುದರ ಮೇಲೆ ಹೂಡಿಕೆ ಮಾಡಿದರೆ ಹಣ ಸೇಫ್‌ ಅನ್ನೋದನ್ನೂ ಕೂಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಬೆಳ್ಳಿಯ ಏರಿಕೆ ಪ್ರಮಾಣ ಹೆಚ್ಚು. 1 ಕೆಜಿ ಬೆಳ್ಳಿಯ ಬೆಲೆ ಈಗ 1.34 ಲಕ್ಷ ರು.ಗೆ ಏರಿ ನಿಂತಿದೆ. 10 ಗ್ರಾಂ ಬಂಗಾರದ ಬೆಲೆ 1,12, 930 ರು. ಆಗಿದೆ. ಏರಿಕೆಯ ಪ್ರಮಾಣದಲ್ಲಿ ಬೆಳ್ಳಿಗೆ ಹೆಚ್ಚು ಮಾರ್ಕ್ಸ್‌. ಆದರೆ ಸುರಕ್ಷತೆಯ ವಿಚಾರಕ್ಕೆ ಬಂದರೆ ಹೆಚ್ಚಿನವರು ಚಿನ್ನದತ್ತಲೇ ಬೊಟ್ಟು ಮಾಡುತ್ತಾರೆ.

ಬೆಳ್ಳಿಗೆ ಹೆಚ್ಚುತ್ತಿರುವ ಡಿಮ್ಯಾಂಡ್‌

ಸದ್ಯ ಎಲೆಕ್ಟ್ರಿಕ್ ವಾಹನ, ಸೋಲಾರ್‌ ಪ್ಯಾನೆಲ್‌ಗಳು ಸೇರಿದಂತೆ ಹಲವೆಡೆ ಬೆಳ್ಳಿ ಬಳಕೆಯಾಗುತ್ತಿದ್ದು, ಉದ್ಯಮಗಳಲ್ಲಿ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಬೆಲೆ ಏರಿಕೆಯಲ್ಲಿ ಇದು ಚಿನ್ನವನ್ನೂ ಮೀರಿಸಿದೆ. ಆದರೆ ಆರ್ಥಿಕ ತಜ್ಞರ ಪ್ರಕಾರ ಬೆಳ್ಳಿ ಬೆಲೆಯಲ್ಲಿ ಏರಿಳಿತ ಹೆಚ್ಚು. ಕೆಲವೇ ಸಮಯಕ್ಕೆ ಹೂಡಿಕೆ ಮಾಡುತ್ತೇನೆ ಅಂತ ಹೊರಟರೆ ನಷ್ಟವಾಗುವ ಸಾಧ್ಯತೆ ಇದೆ.

ಚಿನ್ನದಲ್ಲಿ ಹೂಡಿಕೆ

ಚಿನ್ನ ಅಂದರೆ ಭಾರತೀಯರ ಪಾಲಿಗೆ ಕೇವಲ ಒಂದು ಲೋಹವಲ್ಲ, ಅದೊಂದು ಎಮೋಶನ್ನು. ಹೀಗಾಗಿ ಭಾರತದಲ್ಲಿ ಚಿನ್ನಕ್ಕೆ ಡಿಮ್ಯಾಂಡ್‌ ಕುಸಿಯುವ ಆತಂಕ ಕಡಿಮೆ. ಇದರಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತವೂ ಹೌದು, ಲಾಭದಾಯಕವೂ ಹೌದು. ಜೊತೆಗೆ ಚಿನ್ನ ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದರಿಂದ ಇದರ ನೇರ ಖರೀದಿ ಇರುವುದಿಲ್ಲ. ಮನೆಯಲ್ಲೋ, ಲಾಕರ್‌ನಲ್ಲೋ ಜತನವಾಗಿ ಕಾಪಾಡುವ ಗೋಜಿರುವುದಿಲ್ಲ.

ಯಾವುದರಲ್ಲಿ ಹೂಡಿಕೆ ಮಾಡುವುದು?

ಇದು ನೀವೆಷ್ಟು ರಿಸ್ಕ್‌ ತೆಗೆದುಕೊಳ್ಳಲು ಸಮರ್ಥರು ಅನ್ನುವುದರ ಮೇಲೆ ನಿರ್ಧರಿಸಲ್ಪಡುತ್ತದೆ. ನಿಮಗೆ ಅಪಾಯ ಎದುರು ಹಾಕಿಕೊಂಡೂ ಲಾಭ ಮಾಡುವ ಗುರಿ ಇದ್ದರೆ ಈಗ ಬೇಡಿಕೆ ಹೆಚ್ಚುತ್ತಿರುವ ಬೆಳ್ಳಿಯ ಮೇಲೆ ಹಣ ಹೂಡಿಕೆ ಮಾಡಬಹುದು. ಇಲ್ಲಾ, ಲಾಭ ಕೊಂಚ ಕಡಿಮೆ ಆದರೂ ಪರ್ವಾಗಿಲ್ಲ, ಸುರಕ್ಷತೆ ಬಹಳ ಮುಖ್ಯ ಎನ್ನುವವರು ಚಿನ್ನದಲ್ಲಿ ಇನ್‌ವೆಸ್ಟ್‌ ಮಾಡಬಹುದು. ಯಾವುದಕ್ಕೂ ತಜ್ಞ ಸಲಹಾಗಾರರು ನೆರವು ಪಡೆದುಕೊಂಡು ಮುಂದಡಿ ಇಡುವುದು ಒಳ್ಳೆಯದು.

 

Read more Articles on