ಸಾರಾಂಶ
ಬೆಂಗಳೂರು : ಬಾಹ್ಯಾಕಾಶ (ಸ್ಪೇಸ್) ಪಾರ್ಕ್, ವಿದ್ಯುನ್ಮಾನ ಬಿಡಿಭಾಗಗಳ ತಯಾರಿಕಾ ಪಾರ್ಕ್ ಸೇರಿ ಮತ್ತಿತರ ಯೋಜನೆಗಳಲ್ಲಿ ಹೂಡಿಕೆ ಮಾಡುವವರನ್ನು ಉತ್ತೇಜಿಸಲು ಸರ್ಕಾರದಿಂದ ನೀಡಲಾಗುವ ರಿಯಾಯಿತಿಗಳ ಕುರಿತು ಹೂಡಿಕೆ-ಪ್ರೋತ್ಸಾಹನಾ ನೀತಿ ಸಿದ್ಧಪಡಿಸಲು ಕೈಗಾರಿಕಾ ಇಲಾಖೆ ಮತ್ತು ಐಟಿ-ಬಿಟಿ ಇಲಾಖೆ ನಿರ್ಧರಿಸಿವೆ.
ಸಂಬಂಧ ಬುಧವಾರ ಖನಿಜ ಭವನದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರ ಬಾಹ್ಯಾಕಾಶ ಪಾರ್ಕ್, ವಿದ್ಯುನ್ಮಾನ ಬಿಡಿಭಾಗ ಉತ್ಪಾದನಾ ಪಾರ್ಕ್‌ಗಳ ಸ್ಥಾಪನೆಗೆ ನಿರ್ಧರಿಸಿದೆ. ಈ ಪಾರ್ಕ್‌ಗಳಲ್ಲಿ ಹೂಡಿಕೆ ಮಾಡುವವರನ್ನು ಉತ್ತೇಜಿಸಲು ಸರ್ಕಾರ ನೀಡುವ ರಿಯಾಯಿತಿಗಳ ಕುರಿತು ನೀತಿ ರೂಪಿಸಬೇಕಿದೆ.
ಅಲ್ಲದೆ, ಕೆಲವೆಡೆ ಒಂದೇ ಯೋಜನೆಗೆ ಕೈಗಾರಿಕೆ ಮತ್ತು ಐಟಿ-ಬಿಟಿ ಇಲಾಖೆಗಳು ರಿಯಾಯಿತಿ ನೀಡುತ್ತಿವೆ. ಅದನ್ನು ಸರಿಪಡಿಸಬೇಕಿದ್ದು,ಅದಕ್ಕಾಗಿ ಕೈಗಾರಿಕಾ ಇಲಾಖೆ ಮತ್ತು ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಚರ್ಚಿಸಿ ವಿಸ್ತೃತ ಹೂಡಿಕೆ-ಪ್ರೋತ್ಸಾಹನಾ ನೀತಿಗಾಗಿ ವರದಿ ಸಿದ್ಧಪಡಿಸುವಂತೆ ಸೂಚಿಸಲಾಯಿತು. ಆ ವರದಿಯನ್ನಾಧರಿಸಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಿ ನೀತಿ ಅಂತಿಮಗೊಳಿಸಲು ನಿರ್ಧರಿಸಲಾಯಿತು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಐಟಿ-ಬಿಟಿ ಇಲಾಖೆಯು ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸೊಹಳ್ಳಿ ಅಥವಾ ಐಟಿಐಆರ್ ಪ್ರದೇಶದಲ್ಲಿ 100 ಎಕರೆಯಲ್ಲಿ ಸ್ಪೇಸ್ ಪಾರ್ಕ್, ಮೈಸೂರಿನ ಕೋಚನಹಳ್ಳಿ ಹಂತ 2ರಲ್ಲಿ 150 ಎಕರೆಯಲ್ಲಿ ಪ್ರಿಂಟೆಡ್ ಸಕ್ರ್ಯೂಟ್ ಬೋರ್ಡ್ ಪಾರ್ಕ್, ಅಡಕನಹಳ್ಳಿ ಮತ್ತು ಕೋಚನಹಳ್ಳಿಯಲ್ಲಿ ಗ್ಲೋಬಲ್ ಇನ್ನೋವೇಶನ್ ಸಿಟಿ ನಿರ್ಮಾಣಕ್ಕೆ 100 ಎಕರೆ ಹೀಗೆ ಹಲವು ಯೋಜನೆಗಳಿಗೆ ಭೂಮಿ ಅವಶ್ಯಕತೆಯಿದೆ. ಅದಕ್ಕೆ ಸಂಬಂಧಿಸಿ ಕೆಐಎಡಿಬಿ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಕೈಗಾರಿಕೆಗಳಿಗೆ ನೀರು ಪೂರೈಕೆಗೆ ಕ್ರಮ:
ಕೈಗಾರಿಕೆಗಳು ಬೆಳೆಯಬೇಕೆಂದರೆ ವಿದ್ಯುತ್ ಮತ್ತು ನೀರು ಪೂರೈಕೆ ಸಮರ್ಪಕವಾಗಿರಬೇಕು. ಹೀಗಾಗಿ ರಾಜ್ಯದಲ್ಲಿ ಕೈಗಾರಿಕಾ ನೀರು ಭದ್ರತಾ ಕಾಯ್ದೆ ರೂಪಿಸುವ ಮತ್ತು ಕೈಗಾರಿಕಾ ಮರುಬಳಕೆ ವಿದ್ಯುತ್ ಉತ್ಪಾದನಾ ಪಾರ್ಕ್ ಸ್ಥಾಪಿಸುವ ಅಗತ್ಯವಿದೆ. ನೈಸರ್ಗಿಕ ಅನಿಲದಿಂದ ವಿದ್ಯುತ್ ತಯಾರಿಸುವ ನಿಟ್ಟಿನಲ್ಲಿ ಗಂಭೀರವಾದ ಚರ್ಚೆ ಮಾಡಬೇಕಿದ್ದು, ಅದಕ್ಕೆ ಸಂಬಂಧಿಸಿ ಯೋಜನೆ ರೂಪಿಸಬೇಕು ಎಂದು ಸಚಿವರಿಬ್ಬರೂ ಅಧಿಕಾರಿಗಳಿಗೆ ಸೂಚಿಸಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಹೇಶ್ ಇತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))