ಕೆಂಪೇಗೌಡ ಲೇಔಟ್‌ನಲ್ಲಿ ವಿದ್ಯುತ್‌ ಉಪಕರಣಗಳನ್ನೇ ಎಗರಿಸಿದ ಕಳ್ಳರು

| Published : Mar 20 2024, 01:18 AM IST / Updated: Mar 20 2024, 12:25 PM IST

ಕೆಂಪೇಗೌಡ ಲೇಔಟ್‌ನಲ್ಲಿ ವಿದ್ಯುತ್‌ ಉಪಕರಣಗಳನ್ನೇ ಎಗರಿಸಿದ ಕಳ್ಳರು
Share this Article
  • FB
  • TW
  • Linkdin
  • Email

ಸಾರಾಂಶ

ನಾಡಪ್ರಭು ಕೆಂಪೇಗೌಡ ಬಡಾವಣೆಯ ಬವಣೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ನಡುವೆ ಬಡಾವಣೆಗೆ ವಿದ್ಯುತ್‌ ಸಂಪರ್ಕಕ್ಕೆಂದು ಅಳವಡಿಸಲಾಗುತ್ತಿರುವ ವಿದ್ಯುತ್‌ ಉಪಕರಣಗಳು ಕಳ್ಳತನ ಆಗುತ್ತಿರುವ ಹೊಸ ಸಮಸ್ಯೆಯೊಂದು ಉದ್ಭವಿಸಿದ್ದು, ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತಲೆನೋವಾಗಿ ಪರಿಣಮಿಸಿದೆ.

ಸಂಪತ್‌ ತರೀಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಪಿಕೆಎಲ್‌) ಬವಣೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈ ನಡುವೆ ಬಡಾವಣೆಗೆ ವಿದ್ಯುತ್‌ ಸಂಪರ್ಕಕ್ಕೆಂದು ಅಳವಡಿಸಲಾಗುತ್ತಿರುವ ವಿದ್ಯುತ್‌ ಉಪಕರಣಗಳು ಕಳ್ಳತನ ಆಗುತ್ತಿರುವ ಹೊಸ ಸಮಸ್ಯೆಯೊಂದು ಉದ್ಭವಿಸಿದ್ದು, ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತಲೆನೋವಾಗಿ ಪರಿಣಮಿಸಿದೆ.

ಎನ್‌ಪಿಕೆಎಲ್‌ನ 1ರಿಂದ 9 ಬ್ಲಾಕ್‌ಗಳಿಗೆ ಕೊಮ್ಮಘಟ್ಟದಲ್ಲಿ ನಿರ್ಮಿಸುತ್ತಿರುವ ವಿದ್ಯುತ್‌ ಉಪಕೇಂದ್ರದಿಂದ ವಿದ್ಯುತ್‌ ಸಂಪರ್ಕ ಕೊಡಲು ಬಡಾವಣೆಯ ಹಲವೆಡೆ ವಿದ್ಯುತ್‌ ಕಂಬಗಳು, ಲಿಂಕಿಂಗ್‌ ಬಾಕ್ಸ್‌, ಎಲೆಕ್ಟ್ರಿಕ್‌ ವೈರ್‌ಗಳನ್ನು 2022 ಮಾರ್ಚ್‌ನಿಂದಲೂ ಅಳವಡಿಸಲಾಗುತ್ತಿತ್ತು.

ಆದರೆ, ವಿದ್ಯುತ್‌ ಸಂಪರ್ಕವನ್ನು ಈವರೆಗೂ ಕೊಟ್ಟಿಲ್ಲ. ಹೀಗಾಗಿ ಖದೀಮರು ರಿಂಗ್‌ಮೈನ್‌ ಯೂನಿಟ್‌ಗೆ ಬೆಂಕಿ ಹಚ್ಚಿದ್ದು, ಅದರಲ್ಲಿದ್ದ ಕಾಪರ್‌ಪಟ್ಟಿಯನ್ನು ಕದ್ದಿದ್ದಾರೆ.

ಎಸ್‌ಟಿಪಿ 5ನಲ್ಲಿ ಕಾಪರ್‌ ಪ್ಲೇಟ್‌ ಅಳವಡಿಸುತ್ತಿದ್ದ ಸಿಬ್ಬಂದಿಗೆ ರಾತ್ರಿ ಹೊತ್ತಿನಲ್ಲಿ ಕದೀಮರು ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಅರ್ಥಿಂಗ್‌ಗೆಂದು ಅಳವಡಿಸಿದ್ದ ತಂತಿಯನ್ನು ಕತ್ತರಿಸಿಕೊಂಡು ಹೋಗಿದ್ದಾರೆ. 

ಬೀದಿ ದೀಪದ ಕಂಬಗಳಿಗೆ ಅಳವಡಿಸಲಾಗಿದ್ದ ಲಿಂಕ್‌ ಬಾಕ್ಸ್‌ಗೆ ಹಾರೆಯಲ್ಲಿ ಒಡೆದು ಹಾಳು ಮಾಡಿದ್ದಾರೆ. ಕೆಲವೆಡೆ ಖದೀಮರು ವಿದ್ಯುತ್‌ ಉಪಕರಣಗಳು, ಪರಿಕರಗಳನ್ನು ಕಳ್ಳತನ ಮಾಡಿದ್ದರೆ, ಇನ್ನು ಹಲವೆಡೆ ಈ ವಸ್ತುಗಳನ್ನು ಹಾಳು ಮಾಡಿ ವಿಕೃತಿ ಮೆರೆದಿದ್ದಾರೆ. 

ಈ ಸಂಬಂಧ ಪೊಲೀಸ್‌ ಠಾಣೆಯಲ್ಲೂ ದೂರು ನೀಡಲಾಗಿದೆ ಎಂದು ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್‌ (ಇಇ) ವಸಂತಕುಮಾರ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.ವಿದ್ಯುತ್‌ ಉಪಕರಣ ತೆರವು

ಬಡಾವಣೆಯಲ್ಲಿ ವಿದ್ಯುತ್‌ ಉಪಕರಣಗಳ ಕಳ್ಳತನ ಹೆಚ್ಚಾದ ಹಿನ್ನೆಲೆಯಲ್ಲಿ ಗುತ್ತಿಗೆ ಪಡೆದಿರುವ ಎಲ್‌ ಆ್ಯಂಡ್‌ ಟಿ ಮತ್ತು ಎಸ್‌ಎಂ ಎಂಜಿನಿಯರ್ಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯವರು ವಿವಿಧ ಬ್ಲಾಕ್‌ಗಳಲ್ಲಿ ಅಳವಡಿಸಲಾಗಿರುವ ವಿದ್ಯುತ್‌ ಉಪಕರಣಗಳು ಮತ್ತು ಪರಿಕರಣಗಳನ್ನು ತೆರವುಗೊಳಿಸುತ್ತಿದ್ದಾರೆ. 

ಬಡಾವಣೆಯಲ್ಲಿ ವಿದ್ಯುತ್‌ ಉಪಕೇಂದ್ರ ನಿರ್ಮಾಣಗೊಂಡು ವಿದ್ಯುತ್‌ ಪೂರೈಕೆ ಆರಂಭಿಸಿದ ನಂತರ ಪುನಃ ಈ ಉಪಕರಣಗಳನ್ನು ಅಳವಡಿಸಲು ಯೋಜಿಸಿದ್ದಾರೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.

ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣ: ಕೊಮ್ಮಘಟ್ಟದಲ್ಲಿ ನಿರ್ಮಾಣವಾಗುತ್ತಿರುವ 3/31.5 ಎಂವಿಎ, 66/11 ಕೆವಿ ವಿದ್ಯುತ್‌ ಉಪ ಕೇಂದ್ರದ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ. ಕೇವಲ ಶೇ.10ರಷ್ಟು ಮಾತ್ರ ಕಾಮಗಾರಿ ಬಾಕಿಯಿದೆ. ಡಿಸೆಂಬರ್‌ನಲ್ಲಿಯೇ 66 ಕೆವಿ ಎಚ್‌ವಿ(ಹೈವೋಲ್ಟೇಜ್‌) ಕೇಬಲ್‌ ಅಳವಡಿಸಬೇಕಿತ್ತು. 

ಆದರೆ ಕೇಬಲ್‌ ತಯಾರಾದ ಬಳಿಕ ನಡೆದ ಟೆಸ್ಟ್‌ನಲ್ಲಿ ಫೇಲ್‌ ಆಗಿತ್ತು. ಇದರಿಂದಾಗಿ ಹೊಸ ಕೇಬಲ್‌ ತಯಾರಿಸಲಾಗುತ್ತಿದ್ದು, ಈ ತಿಂಗಳ ಅಂತ್ಯದಲ್ಲಿ ಕೇಬಲ್‌ ಬರಲಿದೆ. ನಂತರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವಸಂತ ಕುಮಾರ್‌ ತಿಳಿಸಿದರು.

ಕೊಮ್ಮಘಟ್ಟದ ವಿದ್ಯುತ್‌ ಉಪಕೇಂದ್ರದ ಕಾಮಗಾರಿ ಪೂರ್ಣಗೊಳಿಸಿ ಎಲ್ಲ ಬಡಾವಣೆಗೆ ವಿದ್ಯುತ್‌ ಹರಿಸಿದ್ದರೆ, ಇಂತಹ ಕಳ್ಳತನ ತಡೆಯಬಹುದಿತ್ತು. ಶೀಘ್ರವೇ ವಿದ್ಯುತ್‌ ಹರಿಸಿ ಕಳ್ಳತನ ತಪ್ಪಿಸಬೇಕು. ಸೂಕ್ತ ಭದ್ರತೆ ಒದಗಿಸಬೇಕು. -ಸೂರ್ಯಕಿರಣ್‌, ಎನ್‌ಪಿಕೆಎಲ್‌ ಮುಕ್ತ ವೇದಿಕೆ.