ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಸಿದ್ಧತೆ

| Published : Nov 28 2024, 12:30 AM IST / Updated: Nov 28 2024, 06:10 AM IST

indira canteen

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಮುಂದಾಗಿರುವ ಬಿಬಿಎಂಪಿಯು ಈ ವರೆಗೆ 42 ಕ್ಯಾಂಟಿನ್‌ ನಿರ್ಮಾಣಕ್ಕೆ ಸ್ಥಳ ಗುರುತಿಸಿದೆ.

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಮುಂದಾಗಿರುವ ಬಿಬಿಎಂಪಿಯು ಈ ವರೆಗೆ 42 ಕ್ಯಾಂಟಿನ್‌ ನಿರ್ಮಾಣಕ್ಕೆ ಸ್ಥಳ ಗುರುತಿಸಿದೆ.

ಬಿಬಿಎಂಪಿಯ ವಾರ್ಡ್‌ ಸಂಖ್ಯೆ 198 ರಿಂದ 225ಕ್ಕೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಹೆಚ್ಚುವರಿ ವಾರ್ಡ್‌ನಲ್ಲಿ ಹಾಗೂ ಮೊಬೈಲ್‌ ಕ್ಯಾಂಟೀನ್‌ ಇರುವ ವಾರ್ಡ್‌ಗಳಲ್ಲಿ ಸ್ಥಿರ ಕ್ಯಾಂಟೀನ್‌ ನಿರ್ಮಾಣಕ್ಕೆ ಸೂಚಿಸಿದೆ.

ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಎರಡು ಸ್ಥಿರ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗಿದೆ. ಉಳಿದ 50 ವಾರ್ಡ್‌ಗಳ ಪೈಕಿ 42 ವಾರ್ಡ್‌ನಲ್ಲಿ ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಉಳಿದ 8 ವಾರ್ಡ್‌ನಲ್ಲಿ ಸ್ಥಳ ಹುಡುಕಾಟ ನಡೆಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.

₹48 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್‌: ರಾಜ್ಯ ಸರ್ಕಾರ ಪ್ರತಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ತಲಾ ₹48 ಲಕ್ಷ ನೀಡಲಿದೆ. ಇಂದಿರಾ ಕ್ಯಾಂಟೀನ್‌ ಹಾಗೂ ಅಡುಗೆ ಮನೆ ಇದ್ದರೆ ₹87 ಲಕ್ಷ ನೀಡಲಿದೆ. ಇವುಗಳ ನಿರ್ಮಾಣಕ್ಕೆ ಶೀಘ್ರದಲ್ಲಿ ಟೆಂಡರ್‌ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಕಾರ್ಯನಿರ್ವಹಿಸದ 10 ಕ್ಯಾಂಟೀನ್‌: ನಗರದಲ್ಲಿ 175 ಸ್ಥಿರ ಕ್ಯಾಂಟೀನ್‌ ಪೈಕಿ 10 ಇಂದಿರಾ ಕ್ಯಾಂಟೀನ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. 165 ಕ್ಯಾಂಟೀನ್‌ ಚನ್ನಾಗಿ ನಡೆಯುತ್ತಿವೆ. 23 ಮೊಬೈಲ್‌ ಕ್ಯಾಂಟೀನ್‌ ವಾಹನ ಹಾಳಾಗಿವೆ. ಆ ವಾಹನಗಳ ರಿಪೇರಿ ಕಾರ್ಯವನ್ನು ವಲಯ ಮಟ್ಟದ ಅನುದಾನದಲ್ಲಿ ಮಾಡಬೇಕೆಂದು ಸೂಚಿಸಲಾಗಿದೆ.

2 ವಲಯದಲ್ಲಿ ಶೀಘ್ರ ಹೊಸ ಮೆನು ಜಾರಿ: ಈಗಾಗಲೇ ನಗರದ 6 ವಲಯದಲ್ಲಿ ಹೊಸ ಮೆನು ಜಾರಿಗೊಳಿಸಿ ರಾಗಿ ಮುದ್ದೆ, ಸೊಪ್ಪಿನ ಸಾರು ಸೇರಿ ಮೊದಲಾದ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ. ಪಶ್ಚಿಮ ಮತ್ತು ದಾಸರಹಳ್ಳಿ ವಲಯ ಆಹಾರ ವಿತರಣೆ ಟೆಂಡರ್ ಕುರಿತು ನ್ಯಾಯಲಯದಲ್ಲಿ ಪ್ರಕರಣ ಇದೀಗ ಪ್ರಕರಣ ಮುಕ್ತಾಯವಾಗಿದೆ. ಈ ಎರಡು ವಲಯದಲ್ಲಿ ರಾಗಿ ಮುದ್ದೆ, ಸೊಪ್ಪಿನ ಸಾರು ವಿತರಣೆ ಆರಂಭಿಸಲು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶೀಘ್ರದಲ್ಲಿ ಈ ಎರಡು ವಲಯದ ಇಂದಿರಾ ಕ್ಯಾಂಟೀನ್‌ ನಲ್ಲಿ ರಾಗಿ ಮುದ್ದೆ ವಿತರಣೆ ಆರಂಭಗೊಳ್ಳಲಿದೆ ಎಂದು ಅವರು ವಿವರಿಸಿದರು.