ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವದ ಬಳಿಕ ನೂತನವಾಗಿ ರಚನೆಯಾಗಿರುವ ಐದು ನಗರ ಪಾಲಿಕೆಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಇರುವ ಎಂಟು ತಿಂಗಳ ಅವಧಿಗೆ ಪ್ರತ್ಯೇಕ ಬಜೆಟ್ ರಚನೆಗೆ ಸಿದ್ಧತೆ ಶುರುವಾಗಿದೆ.
ಸೆ.2 ರಿಂದ ಬಿಬಿಎಂಪಿಯು ಅಸ್ತಿತ್ವ ಕಳೆದುಕೊಂಡು ಐದು ನಗರ ಪಾಲಿಕೆಗಳು ಜಾರಿಗೆ ಬಂದಿವೆ. ಈ ಐದು ನಗರ ಪಾಲಿಕೆಯ ಪ್ರತ್ಯೇಕ ಆಡಳಿತ ನಡೆಸುವುದಕ್ಕೆ ಬಜೆಟ್ ಪುನರ್ ಮಂಡನೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಐದು ನಗರ ಪಾಲಿಕೆ ಅಧಿಕಾರಿಗಳು ಆಯಾ ಪಾಲಿಕೆ ಬಜೆಟ್ ರಚನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಐದು ಪಾಲಿಕೆಯ ಪಾಲಿಕೆಗಳ ಅಧಿಕಾರಿ ಸಿಬ್ಬಂದಿ ವೇತನ, ಆಡಳಿತಾತ್ಮಕ ವೆಚ್ಚ, ಸಭೆ ಸಮಾರಂಭ ವೆಚ್ಚ, ಕಲ್ಯಾಣ ಕಾರ್ಯಕ್ರಮ, ಸಾರ್ವಜನಿಕ ಕಾಮಗಾರಿ, ಉದ್ಯಾನವನ, ಮೈದಾನ, ಶಾಲಾ ಕಾಲೇಜು, ಆಸ್ಪತ್ರೆ, ರಸ್ತೆ ನಿರ್ವಹಣೆ, ಇಂದಿರಾ ಕ್ಯಾಂಟೀನ್ ನಿರ್ವಹಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಬಜೆಟ್ ರೂಪಿಸಿಕೊಳ್ಳಬೇಕು. ಆ ಬಜೆಟ್ ಮಂಡಿಸಿ ಆಡಳಿತಾಧಿಕಾರಿ ಮತ್ತು ಸರ್ಕಾರದಿಂದ ಅನುಮೋದನೆ ಪಡೆದು ಅನುಷ್ಠಾನ ಮಾಡಬೇಕಾಗಿದೆ. ತಿಂಗಳ ಅಂತ್ಯದೊಳಗೆ ಎಲ್ಲಾ ಪಾಲಿಕೆ ಆಯುಕ್ತರು ಬಜೆಟ್ ಸಿದ್ಧಪಡಿಸಿ ಮಂಡಿಸುವ ಸಾಧ್ಯತೆ ಇದೆ.
5 ಪಾಲಿಕೆಗೆ ಪ್ರತ್ಯೇಕ ವೆಚ್ಚ- ಆದಾಯಬಿಬಿಎಂಪಿಯು ಕಳೆದ ಮಾ.29ಕ್ಕೆ ಬರೋಬ್ಬರಿ 20 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಬಜೆಟ್ ಮಂಡಿಸಲಾಗಿತ್ತು. ಆಗಸ್ಟ್ ಅಂತ್ಯದವರೆಗೆ ಬಿಬಿಎಂಪಿಯ ಆಡಳಿತಾವಧಿಯಲ್ಲಿ ಸಾಕಷ್ಟು ಮೊತ್ತ ವೆಚ್ಚ ಮಾಡಲಾಗಿದೆ. ಆ ಯೋಜನೆಗಳ ವಿವರವನ್ನು ಆಯಾ ಪಾಲಿಕೆಗಳಿಗೆ ಮಾಹಿತಿ ನೀಡಲಾಗುತ್ತಿದೆ. ಅವನ್ನು ಮುಂದುವರಿಸುವುದು ಅಥವಾ ಕೈಬಿಡುವ ಅಧಿಕಾರ ಆಯಾ ಪಾಲಿಕೆ ಆಯುಕ್ತರಿಗೆ ಇರಲಿದೆ. ಜತೆಗೆ, ಪಾಲಿಕೆ ಆದಾಯಕ್ಕೆ ಅನುಗುಣವಾಗಿ ಹೊಸ ಕಾಮಗಾರಿ ಕೈಗೊಳ್ಳುವ ಸ್ವಾತಂತ್ರ್ಯ ಸಹ ಪಾಲಿಕೆಗಳ ಆಯುಕ್ತರಿಗೆ ಇರಲಿದೆ.
ಈ ವಿವರಗಳೊಂದಿಗೆ, ಬಿಬಿಎಂಪಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 6,500 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದು, ಆಗಸ್ಟ್ ಅಂತ್ಯಕ್ಕೆ ಸುಮಾರು 3500 ಕೋಟಿ ರು. ಸಂಗ್ರಹಿಸಿದೆ. ಇನ್ನುಳಿದ ಅವಧಿಯಲ್ಲಿ ಬಾಕಿ ಇರುವ ಸುಮಾರು 3 ಸಾವಿರ ಕೋಟಿ ರು.ನಲ್ಲಿ ಯಾವ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಆಸ್ತಿ ತೆರಿಗೆ ಬರಬೇಕಿದೆ ಎಂಬುದರ ವಿವರವನ್ನು ಆಯಾ ಪಾಲಿಕೆಗಳಿಗೆ ನೀಡಲಾಗುತ್ತಿದೆ. ಈ ವಿವರ ಆಧಾರಿಸಿ ಆಯಾ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ಪ್ರತ್ಯೇಕ ಬಜೆಟ್ ರೂಪಿಸುವ ಕಾರ್ಯ ಮಾಡಲಿದ್ದಾರೆ.ಬಾಕಿ ಬಿಲ್ ಹೊರೆ ಸಹ ಹಂಚಿಕೆ:
ಬಿಬಿಎಂಪಿಯ ಅವಧಿಯಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಕೋಟ್ಯಂತರ ರು, ಬಾಕಿ ಬಿಲ್ ಪಾವತಿಸಬೇಕಿದೆ. ಕಾಮಗಾರಿ ನಡೆದಿರುವ ಪ್ರದೇಶ ಯಾವ ಪಾಲಿಕೆ ವ್ಯಾಪ್ತಿಗೆ ಬರಲಿದೆ. ಸಂಬಂಧಪಟ್ಟ ಕಾಮಗಾರಿಯ ಹಣ ನೀಡುವ ಜವಾಬ್ದಾರಿಯ ಹೊರೆ ಆ ಪಾಲಿಕೆಗೆ ನೀಡಲಾಗುತ್ತಿದೆ. ಬಜೆಟ್ ರೂಪಿಸುವ ವೇಳೆ ಬಾಕಿ ಬಿಲ್ ಪಾವತಿಗೂ ಅನುದಾನ ಮೀಸಲಿಡಬೇಕಾಗಲಿದೆ.ಇನ್ನೂ ಸರ್ಕಾರಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಯ ಹಣವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದಲೇ ಪಾವತಿ ಮಾಡಲಾಗುತ್ತದೆ. ಪಾಲಿಕೆ ಅನುದಾನದಲ್ಲಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿ ಹೊಣೆಯನ್ನು ಮಾತ್ರ ಪಾಲಿಕೆ ಹೆಗಲಿಗೆ ವಹಿಸಲಾಗುತ್ತಿದೆ.
ಸರ್ಕಾರಿ ಅನುದಾನದ ಕಾಮಗಾರಿ ಪಾಲಿಕೆಗಿಲ್ಲ:ಡಬ್ಬಲ್ ಡೆಕ್ಕರ್, ಸುರಂಗ ರಸ್ತೆ, ವೈಟ್‌ಟಾಪಿಂಗ್ ಸೇರಿದಂತೆ ಒಟ್ಟು 12 ರಿಂದ 13 ಸಾವಿರ ಕೋಟಿ ರು. ವೆಚ್ಚದ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಬಿಬಿಎಂಪಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಈ ನಡುವೆ ಸರ್ಕಾರದ ಅನುದಾನ ಭರವಸೆ ನೀಡಿರುವ ಬೃಹತ್ ಕಾಮಗಾರಿ ಅನುಷ್ಠಾನಕ್ಕೆ ಬಿಸ್ಮೈಲ್ ಕಂಪನಿ ಸ್ಥಾಪಿಸಲಾಗಿದೆ. ಹಾಗಾಗಿ, ಐದು ಪಾಲಿಕೆಯ ಬಜೆಟ್‌ನಲ್ಲಿ ಬೃಹತ್ ಕಾಮಗಾರಿಯ ಬಗ್ಗೆ ಪ್ರಸ್ತಾಪ ಇರುವುದಿಲ್ಲ. ಅದೇ ರೀತಿ 1,400 ಕೋಟಿ ರು. ಘನತ್ಯಾಜ್ಯ ನಿರ್ವಹಣೆ ಕಂಪನಿಗೆ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆ ಕಾಮಗಾರಿಯನ್ನು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ ಕೈಗೊಳ್ಳಲಿದೆ. ಬಾಕಿ ಇರುವ ಮೊತ್ತಕ್ಕೆ ಮಾತ್ರ ಆಯಾ ಪಾಲಿಕೆಗಳು ಬಜೆಟ್ ರೂಪಿಸಿಕೊಳ್ಳಬೇಕಿದೆ.
ಜಿಬಿಎನಿಂದಲೂ ಕೆಲ ಯೋಜನೆ ಜಾರಿ:ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಬಿಬಿಎಂಪಿಯು ವಿಶ್ವ ಬ್ಯಾಂಕ್‌ನಿಂದ ಸುಮಾರು 2 ಸಾವಿರ ಕೋಟಿ ರು. ಸಾಲ ಪಡೆದುಕೊಂಡಿದೆ. ಈ ಹಣದಲ್ಲಿ ಕೈಗೊಳ್ಳುವ ಕಾಮಗಾರಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವೇ ನೇರವಾಗಿ ಕೈಗೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ. ಅದರೊಂದಿಗೆ 250 ಕೋಟಿ ರು. ವೆಚ್ಚದ ವಿಪತ್ತು ನಿರ್ವಹಣೆ ಕಾಮಗಾರಿ ಸಹ ಜಿಬಿಎ ಕೈಗೊಳ್ಳಲಿದೆ. ಸುಮಾರು 1,432.76 ಕೋಟಿ ರು. ವೆಚ್ಚದ ಕಾಮಗಾರಿಯನ್ನು ಜಿಬಿಎ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
---ಬಾಕ್ಸ್---ಐದು ಪಾಲಿಕೆಗಳ ನಿರೀಕ್ಷಿತ ಬಜೆಟ್ ಮೊತ್ತ (ಕೋಟಿ ರು.)ನಗರ ಪಾಲಿಕೆನಿರೀಕ್ಷಿತ ಮೊತ್ತ
ಬೆಂಗಳೂರು ಪಶ್ಚಿಮ555.37ಬೆಂಗಳೂರು ದಕ್ಷಿಣ316.28
ಬೆಂಗಳೂರು ಉತ್ತರ364.58ಬೆಂಗಳೂರು ಪೂರ್ವ155.50
ಬೆಂಗಳೂರು ಕೇಂದ್ರ313.25ಒಟ್ಟು1707.98