ಯುರೋಪ್‌ ದೇಶಗಳಲ್ಲೀಗ ಇತಿಹಾಸದಲ್ಲೇ ಕಂಡುಕೇಳರಿಯದ ಉಷ್ಣ ಅಲೆ ಬೀಸುತ್ತಿದೆ. ಇದಕ್ಕೆ ದಶಕಗಳ ಹಿಂದೆ ಇದೇ ದೇಶಗಳು ನಡೆಸಿದ ಪರಿಸರದ ಮೇಲಿನ ದಾಳಿ ಕೂಡಾ ಕಾರಣ. ಸದಾ ಅಭಿವೃದ್ಧಿಶೀಲಗಳತ್ತ ಬೊಟ್ಟುವ ದೇಶಗಳಿಗೆ ಈ ಬೆಳವಣಿಗೆ ಒಂದು ಕನ್ನಡಿ.

 ಯುರೋಪ್‌ ಸೇರಿದಂತೆ ಜಗತ್ತಿನ ಶ್ರೀಮಂತ ದೇಶಗಳದ್ದು ದಶಕಗಳಿಂದಲೂ ಒಂದೇ ದೂರು. ಜಗತ್ತಿನ ಪರಿಸರ, ಹವಾಮಾನ ಸಂಬಂಧಿ ಸಮಸ್ಯೆಗಳಿಗೂ ಭಾರತ, ಚೀನಾದಂಥ ಅಭಿವೃದ್ಧಿಶೀಲ ದೇಶಗಳು, ಅವುಗಳ ಕೈಗಾರಿಕೆ, ಕೃಷಿ ಚಟುವಟಿಕೆ, ಪಶು ಸಂಗೋಪನೆಯೇ ಕಾರಣ. ಬರುವ ಸಮಯಕ್ಕೆ ಬಾರದ ಮಳೆ, ಬಂದರೆ ಧೋ ಎಂದು ಸುರಿದು ವಿನಾಶ ಸೃಷ್ಟಿಸುವ ಮಳೆ, ಭೂಕುಸಿತ, ಭಾರೀ ಉಷ್ಣಗಾಳಿ ಎಲ್ಲದಕ್ಕೂ ಅಭಿವೃದ್ಧಿಶೀಲ ಮತ್ತು ಬಡ ದೇಶಗಳನ್ನು ದೂಷಿಸುವುದು ಮೊದಲಿನಿಂದಲೂ ಯುರೋಪ್‌ ದೇಶಗಳ ಪಾಲಿಗೆ ಸಂಪ್ರದಾಯವೆಂಬಂತೆ ನಡೆದುಬಂದಿತ್ತು.

 ಜಗತ್ತಿನಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾದ ಬಳಿಕ ತಾವು ಪರಿಸರ ಮೇಲೆ ನಡೆಸಿದ ದಾಳಿಯನ್ನು ಮಗ್ಗುಲಲ್ಲಿ ಇಟ್ಟುಕೊಂಡಿದ್ದನ್ನು ಮರೆತಿದ್ದ ದೇಶಗಳು ಹಲವು ದಶಕಗಳಿಂದ ಜಾಗತಿಕ ಹವಾಮಾನ ಬದಲಾವಣೆ ಪರಿಣಾಮ ತಡೆಯಲು ಏನೇನು ಮಾಡಬೇಕು ಎಂದು ಅಭಿವೃದ್ಧಿಶೀಲ ದೇಶಗಳಿಗೆ ಪಾಠ ಮಾಡುತ್ತಲೇ ಬಂದವು. ವಕಾಲತ್ತು ಗುಂಪುಗಳನ್ನು ರಚಿಸಿಕೊಂಡು ಅಭಿವೃದ್ಧಿಶೀಲ ದೇಶಗಳ ಅಭಿವೃದ್ಧಿ ಚಟುವಟಿಕೆಗೆ ನಾನಾ ಹೆಸರಲ್ಲಿ ತಡೆಯೊಡ್ಡತ್ತಲೇ ಬಂದವು. 

ಆದರೆ ಮತ್ತೊಂದೆಡೆ ಇದಕ್ಕೂ ತಮಗೂ ಏನೂ ಸಂಬಂಧ ಇಲ್ಲ ಎಂದು ಬೆಚ್ಚಗೆ ಕುಳಿತುಕೊಂಡವು. ಆದರೆ ಹಿಂದೆ ಮಾಡಿದ ಅನಾಹುತ ಅವುಗಳನ್ನು ಇತ್ತೀಚಿನ ವರ್ಷಗಳಲ್ಲಿ ಬಿಡದೇ ಕಾಡುತ್ತಿದೆ. ಕೈಗಾರಿಕಾ ಕ್ರಾಂತಿಗಾಗಿ ಹಿಂದೆ ಪರಿಸರದ ಮೇಲಿನ ದಾಳಿ ಮತ್ತು ನಾವು ಸುರಕ್ಷಿತ ಎಂಬಂತೆ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೇ ಕುಳಿತ ಪರಿಣಾಮ ಇದೀಗ ಯುರೋಪ್‌ ದೇಶಗಳ ಮೇಲೆ ಉಷ್ಣ ಮಾರುತಗಳು ದಾಳಿ ನಡೆಸಿವೆ.

ಕಳೆದೊಂದು ವಾರದಿಂದ ಯುರೋಪ್‌ನ ಬಹುತೇಕ ದೇಶಗಳು ಬಿಸಿಗಾಳಿಯ ಪ್ರಭಾವಕ್ಕೆ ಸಿಕ್ಕಿ ನರಳುತ್ತಿವೆ. ಯುರೋಪ್‌ನ 850ಕ್ಕೂ ಹೆಚ್ಚು ಪ್ರಮುಖ ನಗರಗಳು ಇತಿಹಾಸದಲ್ಲೇ ಕಂಡುಕೇಳರಿಯದ ಉಷ್ಣಮಾರುತಕ್ಕೆ ಸಿಕ್ಕಿಬಿದ್ದಿವೆ. ಪರಿಣಾಮ ಸಾವಿರಾರು ಶಾಲೆ ಮುಚ್ಚಲಾಗಿದೆ. ಒಂದೇ ವಾರದಲ್ಲಿ 1300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನದಿಯ ನೀರು ಕೂಡಾ ಬಿಸಿಯಾಗಿ ಪರಮಾಣು ವಿದ್ಯುತ್‌ ಸ್ಥಾವರಗಳಲ್ಲಿ ಬಳಕೆ ಮಾಡದ ಸ್ಥಿತಿಗೆ ತಲುಪಿವೆ. 1 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬಿಸಿಗಾಳಿಗೆ ರಸ್ತೆಗಳ ಮೇಲ್ಮೆ ಕರಗಲು ಶುರುವಿಟ್ಟುಕೊಂಡಿವೆ, ರೈಲ್ವೆ ಹಳಿಗಳು ಬಿರುಕು ಬಿಡುತ್ತಿವೆ. ವರ್ಷವಿಡೀ ಇರುವ ಚಳಿ, ಹಿಮಪಾತದ ಹವಾಮಾನಕ್ಕೆ ಅನುಗುಣವಾಗಿ ನಿರ್ಮಿಸಿಕೊಂಡ ಮನೆಗಳಲ್ಲಿ ಉಸಿರಾಡಲೂ ಆಗದೆ ಜನತೆ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಾವಿರಾರು ರೈಲು, ವಿಮಾನ ಸಂಚಾರ ರದ್ದು ಮಾಡಲಾಗಿದೆ. 

 ಭಾರೀ ಪ್ರಮಾಣದಲ್ಲಿ ಆಗಮಿಸುತ್ತಿರುವ ರೋಗಿಗಳ ನಿರ್ವಹಣೆ ಮಾಡಲಾಗದೇ ಆಸ್ಪತ್ರೆಗಳು ಭಾರೀ ಸಮಸ್ಯೆಗೆ ಸಿಕ್ಕಿಬಿದ್ದಿವೆ. ವಿದ್ಯುತ್‌ ಬೇಡಿಕೆ 45 ವರ್ಷಗಳ ಗರಿಷ್ಠಕ್ಕೆ ತಲುಪಿದೆ. ಕ್ರೀಡಾಕೂಟಗಳು, ಬಾಹ್ಯ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗುತ್ತಿದೆ. ಕಾಡುಗಳಲ್ಲಿ, ಮೃಗಾಲಯಗಳಲ್ಲಿ ಪ್ರಾಣಿಪಕ್ಷಿಗಳು ಕೂಡಾ ಸಾವಿನ ಮಡಿಲು ಸೇರುತ್ತಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಬಿಸಿಗಾಳಿಯ ಹೊಡೆತ ತಾಳಲಾಗದೇ ಇತ್ತೀಚೆಗೆ ಚಲಿಸುವ ರೈಲನ್ನೇ ಮಾರ್ಗ ಮಧ್ಯದಲ್ಲಿ ನಿಲ್ಲಿಸಿ ಜನರು ರೈಲಿನಿಂದ ಕೆಳಗೆ ಇಳಿದ ಘಟನೆಯೂ ನಡೆದಿತ್ತು. ಹೀಗೆ ಯುರೋಪ್‌ನ ಕನಿಷ್ಠ 10 ಕೋಟಿ ಜನರು ನಾನಾ ರೀತಿಯ ಸಮಸ್ಯೆಗೆ ತುತ್ತಾಗಿದ್ದಾರೆ.

ಹಾಗೆಂದು ಇದು ಕೇವಲ ಈ ವರ್ಷದ ಘಟನೆಯಲ್ಲ. 2022ರಲ್ಲೂ ಯುರೋಪ್‌ನಲ್ಲಿ 60000 ಜನರು ಅಧಿಕ ಉಷ್ಣಾಂಶ ಸಂಬಂಧಿ ಘಟನೆಗೆ ಬಲಿಯಾಗಿದ್ದರು. 2023ರಲ್ಲಿ 10000ಕ್ಕೂಅಧಿಕ ಮತ್ತು 2024ರಲ್ಲಿ 47000ಕ್ಕೂ ಹೆಚ್ಚು ಸಾವಿಗೆ ಬಿಸಿಗಾಳಿ ಕಾರಣವಾಗಿತ್ತು. ಆದರೆ ಈ ವರ್ಷದ ಉಷ್ಣಾಂಶ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣ ತಲುಪಿದೆ. ಯುರೋಪ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇತರೆ ಯಾವುದೇ ಕಾರಣಕ್ಕೆ ಸಂಭವಿಸುವ ಸಾವಿಗಿಂತ ಹೆಚ್ಚಿನ ಸಾವು ಉಷ್ಣಾಂಶ ಸಂಬಂಧಿ ಕಾರಣಕ್ಕೆ ಸಂಭವಿಸುತ್ತಿವೆ ಎನ್ನುವುದೇ ಪರಿಸ್ಥಿತಿಯ ಗಹನತೆಯನ್ನು ಸಾರಿದೆ.

ಕಾರಣ ಏನು?:

ಸದ್ಯ ಯುರೋಪ್‌ನಲ್ಲಿ ಕಂಡುಬಂದಿರುವ ಉಷ್ಣ ಅಲೆಗೆ ಒಮೇಗಾ ಬ್ಲಾಕ್ ಕಾರಣ ಎನ್ನಲಾಗಿದೆ. ಅಂದರೆ ವಾತಾವರಣದಲ್ಲಿ ಅಧಿಕ ಒತ್ತಡದ ವ್ಯವಸ್ಥೆ ನಿರ್ಮಾಣವಾಗುವುದು. ಇದರ ರಚನೆ ಗ್ರೀಕ್‌ನ ಒಮೇಗಾ ಅಕ್ಷರದ ರೀತಿಯಲ್ಲಿರುವ ಕಾರಣ ಇದನ್ನು ಒಮೇಗಾ ಬ್ಲಾಕ್ ಎಂದು ಕರೆಯಲಾಗುತ್ತದೆ. ಈ ಒಮೇಗಾ ಬ್ಲಾಕ್‌ ಇಡೀ ಪ್ರದೇಶದ ಮುಚ್ಚಳದಂತೆ ಕೆಲಸ ಮಾಡುತ್ತದೆ. ಇದು ಒಂದೆಡೆ ಉತ್ತರ ಆಫ್ರಿಕಾ ವಲಯದಿಂದ ಭಾರೀ ಪ್ರಮಾಣದ ಬಿಸಿ ಗಾಳಿ ಸೆಳೆದರೆ ಮತ್ತೊಂದೆಡೆ ಆ ಪ್ರದೇಶದಲ್ಲಿನ ಉಷ್ಣಾಂಶ ಹೊರಹೋಗದಂತೆ ತಡೆದು ಭೂಮಿಯ ಕಡೆಗೆ ತಳ್ಳುತ್ತದೆ. ಜೊತೆಗೆ ಮೋಡಗಳು ರಚನೆಯಾಗದಂತೆ ಮಾಡುತ್ತದೆ. ಹೀಗಾಗಿ ಶುಭ್ರ ಆಗಸ ರಚನೆಯಾಗಿ ಸೂರ್ಯನ ಮತ್ತಷ್ಟು ಶಾಖ ಭೂಮಿಯ ವಾತಾವರಣ ಪ್ರವೇಶಿಸಿ ಆ ಪ್ರದೇಶ ಮತ್ತಷ್ಟು ಕಾವೇರುವಂತೆ ಮಾಡುತ್ತದೆ. ಹೀಗಾಗಿಯೇ ಇದೀಗ ಯುರೋಪ್‌ನಲ್ಲಿ ದಾಖಲೆಯ ಉಷ್ಣಾಂಶ ದಾಖಲಾಗಿರುವುದು.

ಇತಿಹಾಸವು ಕಾರಣ:

ಒಮೇಗಾ ಬ್ಲಾಕ್‌ ಜೊತೆಗೆ ವಾತಾವರಣದಲ್ಲಿ ಹಸಿರು ಮನೆ ಇಂಧನಗಳ ಪ್ರಮಾಣ ಹೆಚ್ಚಳ, ಇಂಗಾಲದ ಅಂಶ ಮಿತಿ ಮೀರುತ್ತಿರುವುದು, ಜಾಗತಿಕ ತಾಪಮಾನ ಏರಿಕೆ ಕೂಡಾ ಕಾರಣ. ಇವುಗಳ ನಿರ್ವಹಣೆಗೆ ತಕ್ಷಣವೇ ಅಗತ್ಯ ಕ್ರಮಕೈಗೊಳ್ಳದೇ ಹೋದಲ್ಲಿ ಭವಿಷ್ಯ ಇನ್ನಷ್ಟು ಭೀಕರವಾಗಿರಲಿದೆ ಎಂದು ವಿಜ್ಞಾನಿಗಳ ಎಚ್ಚರಿಕೆ.

ಯುರೋಪ್‌ಗೇಕೆ ಹೆಚ್ಚು ಕಷ್ಟ?:

ಯುರೋಪ್‌ನಲ್ಲಿ ಭೂ ಪ್ರದೇಶ ಹೆಚ್ಚು. ಹಿಮಪ್ರದೇಶ ಮತ್ತು ಮಂಜುಗಡ್ಡೆಗೆ ಹೋಲಿಸಿದರೆ ಹೋಲಿಸಿದರೆ ಭೂ ಪ್ರದೇಶ ಹೆಚ್ಚಿನ ಉಷ್ಣಾಂಶ ಹೀರಿಕೊಳ್ಳುವ ಕಾರಣ ಇಲ್ಲಿ ಉಷ್ಣ ಅಲೆಯ ಪರಿಣಾಮ ಹೆಚ್ಚಿದೆ. ಜೊತೆಗೆ ದಶಕಗಳ ಹಿಂದಿನ ಕೈಗಾರಿಕಾ ಕ್ರಾಂತಿಯ ಪೂರ್ವ ಸ್ಥಿತಿಗೆ ಹೋಲಿಸಿದರೆ ಜಾಗತಿಕ ತಾಪಮಾನದಲ್ಲಿ 1.4 ಡಿ.ಸೆ. ಉಷ್ಣಾಂಶ ಏರಿಕೆಯಾಗಿದ್ದರೆ, ಈ ಪ್ರಮಾಣ ಯುರೋಪ್‌ನಲ್ಲಿ 2.4 ಡಿ.ಸೆ.ನಷ್ಟಿದೆ. ಮತ್ತೊಂದೆಡೆ ಅರ್ಟಿಕ್‌ ಸಾಮಿಪ್ಯ ಕೂಡಾ ಯುರೋಪ್‌ಗೆ ಮುಳುವಾಗಿದೆ. ಆರ್ಟಿಕ್‌ ಪ್ರದೇಶವು ಕೈಗಾರಿಕಾ ಕ್ರಾಂತಿಯ ಪೂರ್ವ ಸ್ಥಿತಿಗಿಂತ 3.2 ಡಿ.ಸೆನಷ್ಟು ಉಷ್ಣಾಂಶ ಹೊಂದಿರುವುದು ಯುರೋಪ್‌ಗೆ ಮುಳುವಾಗಿದೆ. ಯುರೋಪ್‌ನಲ್ಲಿ ಸಾಮಾನ್ಯವಾಗಿ ಜುಲೈನಲ್ಲಿ ಬಿರುಬೇಸಿಗೆ ಕಂಡುಬರುತ್ತದೆ. ಆದರೆ ಈ ಬಾರಿ ಜೂನ್‌ನಲ್ಲೇ ಕಾಣಿಸಿದೆ. ಇಂಥ ಬಿಸಿಗಾಳಿ ಅಲೆ 1950ರ ಬಳಿಕ ಇದೇ ಮೊದಲು.

ತೀವ್ರತೆ ಹೆಚ್ಚಲು ಕಾರಣ: ಕೇವಲ ಉಷ್ಣಾಂಶವೊಂದೇ ಪರಿಸ್ಥಿತಿ ಹದಗೆಡುವಂತೆ ಮಾಡಿಲ್ಲ. ಬದಲಾಗಿ ಆರ್ಧ್ರತೆ ಕಡಿಮೆ ಕೂಡಾ ಪರಿಸ್ಥಿತಿಯನ್ನು ವಿಷಮಗೊಳಿಸಿದೆ. ಆರ್ಧ್ರತೆ ಪ್ರಮಾಣ ಭಾರೀ ಕುಸಿದಿರುವುದು ಜನರ ಜೀವನ ಅಸಹನೀಯಗೊಳಿಸಿದೆ.