ಸಾರಾಂಶ
ದುಬೈ: ಕಳಪೆ ಪ್ರದರ್ಶನ ನೀಡುತ್ತಿರುವ ಭಾರತದ ತಾರಾ ಆಟಗಾರ ವಿರಾಟ್ ಕೊಹ್ಲಿ ದಶಕದ ಬಳಿಕ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-20ರಿಂದ ಹೊರಬಿದ್ದಿದ್ದಾರೆ. ಬುಧವಾರ ಪ್ರಕಟಗೊಂಡ ಪಟ್ಟಿಯಲ್ಲಿ ಕೊಹ್ಲಿ 8 ಸ್ಥಾನ ಕುಸಿತ ಕಂಡು 22ನೇ ಸ್ಥಾನ ತಲುಪಿದ್ದಾರೆ. 2014ರಲ್ಲಿ ಕೊನೆ ಬಾರಿ ಅಗ್ರ-20ರಿಂದ ಹೊರಗಿದ್ದ ವಿರಾಟ್, ಬಳಿಕ 2018ರಲ್ಲಿ ನಂ.1 ಸ್ಥಾನಕ್ಕೇರಿದ್ದರು. ಅಲ್ಲದೆ, ಎಲ್ಲಾ ಮೂರು ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು.ಇನ್ನು ರಿಷಭ್ ಪಂತ್ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದು, 5 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ. ಯಶಸ್ವಿ ಜೈಸ್ವಾಲ್ 1 ಸ್ಥಾನ ಕುಸಿದು 4ನೇ ಸ್ಥಾನದಲ್ಲಿದ್ದಾರೆ. ಶುಭ್‌ಮನ್ ಗಿಲ್ 16ನೇ ಸ್ಥಾನಕ್ಕೇರಿದರೆ, ರೋಹಿತ್ ಶರ್ಮಾ 26ನೇ ಸ್ಥಾನಕ್ಕೆ ಕುಸಿದಿದ್ದಾರೆ.ಇಂದಿನಿಂದ ಭಾರತ ಎ, ಆಸ್ಟ್ರೇಲಿಯಾ ಎ ಟೆಸ್ಟ್: ರಾಹುಲ್ ಮೇಲೆ ಕಣ್ಣು
ಮೆಲ್ಬರ್ನ್: ಭಾರತ ‘ಎ’ ಹಾಗೂ ಆಸ್ಟ್ರೇಲಿಯಾ ‘ಎ’ ನಡುವಿನ 2ನೇ 4 ದಿನಗಳ ಅನಧಿಕೃತ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭಗೊಳ್ಳಲಿದೆ. ತಾರಾ ಆಟಗಾರರಾದ ಕೆ.ಎಲ್.ರಾಹುಲ್, ಧೃವ್ ಜುರೆಲ್ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದು, ಇವರಿಬ್ಬರ ಆಟದ ಮೇಲೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ.ನ್ಯೂಜಿಲೆಂಡ್ ವಿರುದ್ಧ ಕೊನೆ 2 ಟೆಸ್ಟ್‌ನಿಂದ ರಾಹುಲ್ ಹೊರಬಿದ್ದಿದ್ದರು. ಆದರೆ ನ.22ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಸರಣಿಗೆ ರಾಹುಲ್ ಆಯ್ಕೆಯಾಗಿದ್ದಾರೆ. ಹೀಗಾಗಿ ಹೆಚ್ಚಿನ ಅಭ್ಯಾಸಕ್ಕಾಗಿ ‘ಎ’ ತಂಡದಲ್ಲಿ ರಾಹುಲ್ ಆಡಲಿದ್ದಾರೆ. ಆಸೀಸ್ ಸರಣಿಯ ಮೊದಲ ಟೆಸ್ಟ್‌ಗೆ ರೋಹಿತ್ ಶರ್ಮಾ ಗೈರಾಗಲಿರುವ ಸಾಧ್ಯತೆಯಿದ್ದು, ಅವರ ಬದಲು ರಾಹುಲ್‌ರನ್ನು ಆರಂಭಿಕನಾಗಿ ಕಣಕ್ಕಿಳಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದೇ ಕಾರಣಕ್ಕೆ ಅವರನ್ನು ‘ಎ’ ತಂಡದಲ್ಲಿ ಆರಂಭಿಕನಾಗಿ ಆಡಿಸುವ ಸಾಧ್ಯತೆ ಹೆಚ್ಚು. ಅಭಿಮನ್ಯು ಈಶ್ವರನ್, ಋತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್ ಕೂಡಾ ತಂಡದಲ್ಲಿದ್ದಾರೆ.