ಸಾರಾಂಶ
ಕಾನ್ಪುರ: ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿ ಗೆಲುವಿನೊಂದಿಗೆ 24 ಅಂಕ ಸಂಪಾದಿಸಿದ ಭಾರತ, 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, ಶೇಕಡಾ 74.24 ಗೆಲುವಿನ ಪ್ರತಿಶತದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆಡಿರುವ 12 ಪಂದ್ಯಗಳಲ್ಲಿ 8ರಲ್ಲಿ ಜಯಭೇರಿ ಬಾರಿಸಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಶೇ.62.50 ಗೆಲುವಿನ ಪ್ರತಿಶತದೊಂದಿಗೆ 2ನೇ, 9ರಲ್ಲಿ 5 ಜಯ ಕಂಡಿರುವ ಶ್ರೀಲಂಕಾ(ಶೇ.55.56) 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ವೆಸ್ಟ್‌ಇಂಡೀಸ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಕಿವೀಸ್ ವಿರುದ್ಧ ಕ್ಲೀನ್‌ಸ್ವೀಪ್ ಮಾಡಿದ್ರೆ ಭಾರತ ಫೈನಲ್ಗೆಭಾರತಕ್ಕೆ ಇನ್ನು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸರಣಿ ಬಾಕಿಯಿದೆ. ಕಿವೀಸ್ ವಿರುದ್ಧ 3 ಪಂದ್ಯಗಳ ಸರಣಿಯನ್ನು ಭಾರತ ತನ್ನ ತವರಿನಲ್ಲೇ ಆಡಲಿದೆ. ಈ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದರೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲೇ ಫೈನಲ್ ಪ್ರವೇಶಿಸಲಿದೆ.ಫೈನಲ್ ರೇಸ್‌ನಲ್ಲಿ ಟೀಂ ಇಂಡಿಯಾ ಸೇರಿ 5 ತಂಡಗಳು
2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಲು ಒಟ್ಟು 5 ತಂಡಗಳ ನಡುವೆ ಪೈಪೋಟಿ ಇದೆ. ಭಾರತ ಫೇವರಿಟ್ ಎನಿಸಿದ್ದು, ಆಸ್ಟ್ರೇಲಿಯಾ ಸಹ ಸುಲಭವಾಗಿ ಫೈನಲ್‌ಗೇರುವ ಲೆಕ್ಕಾಚಾರದಲ್ಲಿದೆ. ಭಾರತಕ್ಕೆ ಇನ್ನು ನ್ಯೂಜಿಲೆಂಡ್ ವಿರುದ್ಧ 3, ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯ ಬಾಕಿ ಇದ್ದು, ಮೂರರಲ್ಲಿ ಗೆದ್ದರೂ ಫೈನಲ್‌ಗೇರಲಿದೆ. ಆಸ್ಟ್ರೇಲಿಯಾಕ್ಕೆ ಭಾರತ ವಿರುದ್ಧ 5, ಶ್ರೀಲಂಕಾ ವಿರುದ್ಧ 2 ಪಂದ್ಯ ಇದೆ. ದ.ಆಫ್ರಿಕಾ ತಂಡಕ್ಕೆ ಬಾಂಗ್ಲಾ ವಿರುದ್ಧ 2, ಲಂಕಾ ವಿರುದ್ಧ 2, ಪಾಕ್ ವಿರುದ್ಧ 2 ಪಂದ್ಯ ಆಡಲು ಬಾಕಿಯಿದೆ. ಶ್ರೀಲಂಕಾ ತಂಡಕ್ಕೆ ದ.ಆಫ್ರಿಕಾ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯ ಇದ್ದು, ನ್ಯೂಜಿಲೆಂಡ್‌ಗೆ ಭಾರತ ವಿರುದ್ಧ 3, ಇಂಗ್ಲೆಂಡ್ ವಿರುದ್ಧ 3 ಪಂದ್ಯ ಇದೆ.