ಸಾರಾಂಶ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಹಿಂದಿನ ಸಮಿತಿಯ ಅವಧಿ ಮುಕ್ತಾಯಗೊಂಡು 2 ತಿಂಗಳಾಗುತ್ತಾ ಬಂದರೂ ಚುನಾವಣೆ ನಡೆಸದಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗರು, ಕೆಎಸ್‌ಸಿಎ ಮಾಜಿ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಹಿಂದಿನ ಸಮಿತಿಯ ಅವಧಿ ಮುಕ್ತಾಯಗೊಂಡು 2 ತಿಂಗಳಾಗುತ್ತಾ ಬಂದರೂ ಚುನಾವಣೆ ನಡೆಸದಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗರು, ಕೆಎಸ್‌ಸಿಎ ಮಾಜಿ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ನಿಷ್ಕ್ರಿಯವಾಗಿರುವ ರಾಜ್ಯ ಕ್ರಿಕೆಟ್‌ನ ಮೇಲೆತ್ತಲು ಶೀಘ್ರದಲ್ಲೇ ಕೆಎಸ್‌ಸಿಎಗೆ ಚುನಾವಣೆ ಘೋಷಿಸಬೇಕು. ಅಲ್ಲದೆ, ಚುನಾವಣೆ ಘೋಷಣೆ ವಿಳಂಬಕ್ಕೆ ಕಾರಣವೇನು ಎಂಬುದನ್ನು ಜನರ ಮುಂದಿಡಬೇಕು ಎಂದು ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಒತ್ತಾಯಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕೆಎಸ್‌ಸಿಎ ಮಾಜಿ ಉಪಾಧ್ಯಕ್ಷರೂ ಆಗಿರುವ ವೆಂಕಟೇಶ್, ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಹಾಗೂ ಇವರ ತಂಡಕ್ಕೆ ಬೆಂಬಲವಾಗಿ ನಿಂತಿರುವ ಮಾಜಿ ಕ್ರಿಕೆಟರ್ ಶಾಂತಾ ರಂಗಸ್ವಾಮಿ ಸೋಮವಾರ ಕೆಲ ಪ್ರಮುಖ ಮಾಧ್ಯಮಗಳ ಜೊತೆ ವಿಶೇಷ ಸಭೆ ನಡೆಸಿದರು.
‘ಹಾಲಿ ಸಮಿತಿಯ ಅವಧಿ ಮುಕ್ತಾಯಗೊಂಡ 45 ದಿನಗಳೊಳಗೆ ಚುನಾವಣೆ ನಡೆಸಬೇಕು ಎಂಬ ನಿಯಮ ಕೆಎಸ್‌ಸಿಎ ಬೈಲಾದಲ್ಲೇ ಇದೆ. ಸೆ.30ಕ್ಕೆ ಅವಧಿ ಕೊನೆಗೊಂಡಿದೆ. ಈ ಸಮಯಕ್ಕೆ ರಾಜ್ಯ ಕ್ರಿಕೆಟ್‌ಗೆ ಹೊಸ ಸಮಿತಿ ಇರಬೇಕಿತ್ತು. ಆದರೆ 2 ತಿಂಗಳಾದರೂ ಚುನಾವಣೆ ನಡೆದಿಲ್ಲ. ರಾಜ್ಯ ಕ್ರಿಕೆಟ್ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ ನೀಡಿ 5 ತಿಂಗಳಾಗುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಎಲ್ಲಾ ಹುದ್ದೆಯೂ ಖಾಲಿಯಾಗಿದೆ. ಯಾವುದೇ ಕಡತ, ಹಣಕಾಸಿನ ವ್ಯವಹಾರಕ್ಕೆ ಸಮಿತಿ ಬೇಕು. ಆದರೆ ಈಗ ಸಮಿತಿಯೇ ಇಲ್ಲ. ರಾಜ್ಯ ಕ್ರಿಕೆಟ್‌ನ ಪರಿಸ್ಥಿತಿ ಶೋಚನೀಯವಾಗಿದೆ’ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ಕೆಎಸ್‌ಸಿಎ ಸಮಿತಿಯಲ್ಲಿ 9 ವರ್ಷ ಪೂರೈಸಿದವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ವಿನಯ್ ಮೃತ್ಯುಂಜಯ, ‘ಲೋಧಾ ಸಮಿತಿಯ ಮೂಲ ಶಿಫಾರಸಿನ ಪ್ರಕಾರ ಒಂಬತ್ತು ವರ್ಷಗಳ ನಂತರ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧವಿತ್ತು. ಆದರೆ 2019ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶದ ಪ್ರಕಾರ, ರಾಜ್ಯ ಸಂಸ್ಥೆಯ ವ್ಯವಸ್ಥಾಪಕ ಸಮಿತಿಯಲ್ಲಿ ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸಿದವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಸಮಿತಿಯಲ್ಲಿ 9 ವರ್ಷ ಸದಸ್ಯರಾಗಿದ್ದರೂ, ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಗಳಿಗೆ ಸ್ಪರ್ಧಿಸುವ ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಎದುರಿಸಿ:
ಶಾಂತಾ ಅವರು ಮಾತನಾಡಿ, ‘ಚುನಾವಣೆ ವಿಳಂಬ ಮಾಡುವುದರ ಜೊತೆಗೆ ನಮ್ಮ ತಂಡವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ನಮಗೊಂದು ನಿಯಮ, ಅವರಿಗೊಂದು ನಿಯಮ ಜಾರಿ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಮೊದಲು ಚುನಾವಣೆ ಘೋಷಿಸಿ. ನಿಯಮಗಳನ್ನು ಮನಬಂದಂತೆ ಜಾರಿ ಮಾಡುವುದನ್ನು ಬಿಟ್ಟು ಚುನಾವಣೆಯಲ್ಲಿ ಎದುರಿಸಿ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಕಳೆದ ಜೂನ್‌ನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತದ ಬಳಿಕ ಕೆಎಸ್‌ಸಿಎ ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಜೈರಾಮ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಸಮಿತಿಯ ಅವಧಿ ಸೆ.30ಕ್ಕೆ ಕೊನೆಗೊಂಡಿದ್ದರಿಂದ ಅಧ್ಯಕ್ಷ ರಘುರಾಮ್ ಭಟ್ ಸೇರಿ ಇತರರು ಕೂಡಾ ತಮ್ಮ ಸ್ಥಾನ ತೊರೆದಿದ್ದಾರೆ. ನಿಮಯ ಪ್ರಕಾರ 45 ದಿನಗಳೊಳಗೆ ಅಂದರೆ ನ.15ಕ್ಕೂ ಮುನ್ನ ಚುನಾವಣೆ ನಡೆಯಬೇಕಿತ್ತು.
ನಮ್ಮನ್ನು ಅನರ್ಹಗೊಳಿಸಲು
ಯತ್ನ: ವೆಂಕಟೇಶ್ ಆರೋಪ
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಈಗಾಗಲೇ ಘೋಷಿಸಿರುವ ನಮ್ಮ ತಂಡ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ವೆಂಕಟೇಶ್ ಹಾಗೂ ವಿನಯ್ ಅವರನ್ನೊಳಗೊಂಡ ತಂಡ ಗಂಭೀರ ಆರೋಪ ಮಾಡಿತು. ‘ಒಬ್ಬರಿಗೆ 9 ವರ್ಷ ಮಾತ್ರ ಅಧಿಕಾರ ಎಂಬ ನಿಯಮವನ್ನು ಜಾರಿ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ವ್ಯವಸ್ಥಾಪಕ ಸಮಿತಿಯಲ್ಲಿ 9 ವರ್ಷ ಪೂರೈಸಿದವರೂ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂಬ ನಿಯಮ ಬೈಲಾದಲ್ಲೇ ಇದೆ. ನ್ಯಾ.ಲೋಧಾ ಸಮಿತಿಯ ಶಿಫಾರಸ್ಸು ಮಾಡಿದ್ದರೂ 2019ರಲ್ಲಿ ಸುಪ್ರೀಂ ಕೋರ್ಟ್ ಈ ನಿಮಯದಲ್ಲಿ ಬದಲಾವಣೆ ತಂದಿದೆ. ಆದರೆ ನಮ್ಮ ತಂಡದ ಬಲ ಕುಗ್ಗಿಸಲು ಈ ನಿಯಮದ ದುರುಪಯೋಗ ಮಾಡುತ್ತಿದ್ದಾರೆ. ತಂಡದ ಕೆಲವರನ್ನು ಚುನಾವಣೆಗೆ ಅನರ್ಹಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ವೆಂಕಟೇಶ್ ಆರೋಪಿಸಿದರು.
ಜನ ನಗುತ್ತಿದ್ದಾರೆ
ಒಂದು ಕಾಲದಲ್ಲಿ ನಮ್ಮ ರಾಜ್ಯ ಸಂಸ್ಥೆ ಇಡೀ ದೇಶಕ್ಕೇ ಮಾದರಿಯಾಗಿತ್ತು. ಕೆಎಸ್‌ಸಿಎ ಕಾರ್ಯ ಚಟುವಟಿಕೆಗಳ ಬಗ್ಗೆ ಇತರ ರಾಜ್ಯಗಳ ಸಂಸ್ಥೆಗಳೂ ಉತ್ತಮ ಅಭಿಪ್ರಾಯ ಹೊಂದಿದ್ದವು. ಆದರೆ ಈಗ ಎಲ್ಲರೂ ಕೆಎಸ್‌ಸಿಎಯನ್ನು ನೋಡಿ ನಗುತ್ತಿದ್ದಾರೆ.
ವೆಂಕಟೇಶ್ ಪ್ರಸಾದ್, ಮಾಜಿ ಕ್ರಿಕೆಟಿಗ
;Resize=(690,390))
)
;Resize=(128,128))
;Resize=(128,128))
;Resize=(128,128))