ಆಘಾತಕಾರಿ ಸಂಗತಿ ವಿಜ್ಞಾನಿಗಳಿಂದ ಬಹಿರಂಗ : ಭೂಮಿಯ ಚಲನೆಯನ್ನೇ ನಿಧಾನಗೊಳಿಸಿದ ಹವಾಮಾನ ಬದಲಾವಣೆ!

| Published : Jul 18 2024, 01:40 AM IST / Updated: Jul 18 2024, 04:15 AM IST

ಆಘಾತಕಾರಿ ಸಂಗತಿ ವಿಜ್ಞಾನಿಗಳಿಂದ ಬಹಿರಂಗ : ಭೂಮಿಯ ಚಲನೆಯನ್ನೇ ನಿಧಾನಗೊಳಿಸಿದ ಹವಾಮಾನ ಬದಲಾವಣೆ!
Share this Article
  • FB
  • TW
  • Linkdin
  • Email

ಸಾರಾಂಶ

ಹವಾಮಾನ ಬದಲಾವಣೆಯಿಂದ ಆಗುತ್ತಿರುವ ನೈಸರ್ಗಿಕ ವಿಪತ್ತುಗಳ ಬಗ್ಗೆ ಜಗತ್ತು ಆತಂಕಗೊಂಡಿರುವಾಗಲೇ ಈ ವಿದ್ಯಮಾನವು ಭೂಮಿಯ ಚಲನೆಯನ್ನು ಕೂಡ ಅಲ್ಪ ಪ್ರಮಾಣದಲ್ಲಿ ಬದಲಾಯಿಸಿದೆ ಎಂಬ ಆಘಾತಕಾರಿ ಸಂಗತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ನವದೆಹಲಿ: ಹವಾಮಾನ ಬದಲಾವಣೆಯಿಂದ ಆಗುತ್ತಿರುವ ನೈಸರ್ಗಿಕ ವಿಪತ್ತುಗಳ ಬಗ್ಗೆ ಜಗತ್ತು ಆತಂಕಗೊಂಡಿರುವಾಗಲೇ ಈ ವಿದ್ಯಮಾನವು ಭೂಮಿಯ ಚಲನೆಯನ್ನು ಕೂಡ ಅಲ್ಪ ಪ್ರಮಾಣದಲ್ಲಿ ಬದಲಾಯಿಸಿದೆ ಎಂಬ ಆಘಾತಕಾರಿ ಸಂಗತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ದಕ್ಷಿಣ ಮತ್ತು ಉತ್ತರ ಧ್ರುವದಲ್ಲಿರುವ ಹಿಮಗಡ್ಡೆಗಳು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಕರಗುತ್ತಿವೆ. ಅದರ ಪರಿಣಾಮ ಅಲ್ಲಿನ ನೀರು ಭೂಮಧ್ಯರೇಖೆಯತ್ತ ಹರಿಯುತ್ತಿದೆ. ಇದು ಭೂಮಿಯ ಆಂತರಿಕ ಸಮತೋಲನವನ್ನು ತಪ್ಪಿಸಿದೆ. ಹೀಗಾಗಿ ಭೂಮಿಯ ಸುತ್ತುವಿಕೆ ಕೊಂಚ ನಿಧಾನವಾಗಿದ್ದು, ಭೂಮಿಯು ತಿರುಗುವ ಕಕ್ಷೆ ಕೂಡ ಬದಲಾವಣೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸ್ವಿಜರ್‌ಲೆಂಡ್‌ನ ಇಟಿಎಚ್‌ ಜೂರಿಚ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿರುವ ಅಧ್ಯಯನದಲ್ಲಿ ಈ ಸಂಗತಿಗಳು ಬೆಳಕಿಗೆ ಬಂದಿವೆ. ವಿಜ್ಞಾನಿಗಳು ತಮ್ಮ ಶೋಧನೆಯನ್ನು ನೇಚರ್‌ ಜಿಯೋಸೈನ್ಸ್‌ ಮ್ಯಾಗಜೀನ್‌ನಲ್ಲಿ ಪ್ರಕಟಿಸಿದ್ದಾರೆ.

ಇನ್ನಷ್ಟು ದುಷ್ಪರಿಣಾಮ ಸಾಧ್ಯತೆ:ಹವಾಮಾನ ಬದಲಾವಣೆಯು ಭೂಮಿಯ ತಿರುಗುವಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಅದರಿಂದಾಗಿ ಭೂಮಿಯ ಚಲನೆ ಕೊಂಚ ನಿಧಾನವಾಗಿದ್ದು, ಹಗಲಿನ ಸಮಯ ತುಸು ದೀರ್ಘವಾಗಿದೆ. ಭೂಮಿಯು ಸುತ್ತುವ ಕಕ್ಷೆ ಕೂಡ ವ್ಯತ್ಯಾಸವಾಗಿದೆ. ಇದಕ್ಕೆ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಗಳು ಕರಗಿ ನೀರು ಭೂಮಧ್ಯ ರೇಖೆಯತ್ತ ಹರಿಯುತ್ತಿರುವುದೇ ಕಾರಣ. ಹಸಿರುಮನೆ ಅನಿಲಗಳ ಬಿಡುಗಡೆಯನ್ನು ನಿಯಂತ್ರಿಸದಿದ್ದರೆ ಈ ಬದಲಾವಣೆ ಇನ್ನಷ್ಟು ತೀವ್ರಗೊಳ್ಳಲಿದೆ. ಸಾಂಪ್ರದಾಯಿಕವಾಗಿ ಭೂಮಿಯ ತಿರುಗುವಿಕೆ ಹಾಗೂ ಕಕ್ಷೆಗೆ ಚಂದ್ರನ ಪ್ರಭಾವ ಮುಖ್ಯ ಕಾರಣವಾಗಿದ್ದು, ಹವಾಮಾನ ಬದಲಾವಣೆಯು ಚಂದ್ರನ ಪ್ರಭಾವವನ್ನೂ ಮೀರಿಸಿ ಭೂಮಿಯ ಚಲನೆಯ ಮೇಲೆ ದುಷ್ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಈಗ ಉಂಟಾಗಿರುವ ಬದಲಾವಣೆಗಳು ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಅಷ್ಟೇನೂ ಪರಿಣಾಮ ಬೀರುತ್ತಿಲ್ಲವಾದರೂ ಅಂತರಿಕ್ಷದಲ್ಲಿ ಭೂಮಿಯ ಚಲನೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಯಿದೆ. ಭೂಮಿಯ ಚಲನೆಯಲ್ಲಿ ಅತ್ಯಂತ ಸಣ್ಣ ಬದಲಾವಣೆಯಾದರೂ ಭೂಮಿಯ ಮೇಲೆ ವಾಸಿಸುವವರಿಗೆ ಅದರಿಂದ ಅಗಾಧ ದುಷ್ಪರಿಣಾಮಗಳು ಎದುರಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.