ಸಾರಾಂಶ
ಹಾಳಾಗಿದ್ದ ವಾಷಿಂಗ್ ಮಷಿನ್ ಬಳಸದಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಕ್ಯೂಬಾ ಮೂಲದ ಕೆಲಸಗಾರನೊಬ್ಬ ಕರ್ನಾಟಕ ಮೂಲದ ಚಂದ್ರಮೌಳಿ ಬಾಬ್ ನಾಗಮಲ್ಲಯ್ಯ (50) ಎಂಬ ಹೋಟೆಲ್ ಮ್ಯಾನೇಜರ್‌ವೊಬ್ಬರನ್ನು ಭೀಕರವಾಗಿ ತಲೆ ಕಡಿದು ಹತ್ಯೆ ಮಾಡಿದ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್‌ನಲ್ಲಿ ನಡೆದಿದೆ
ಹೂಸ್ಟನ್: ಹಾಳಾಗಿದ್ದ ವಾಷಿಂಗ್ ಮಷಿನ್ ಬಳಸದಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಕ್ಯೂಬಾ ಮೂಲದ ಕೆಲಸಗಾರನೊಬ್ಬ ಕರ್ನಾಟಕ ಮೂಲದ ಚಂದ್ರಮೌಳಿ ಬಾಬ್ ನಾಗಮಲ್ಲಯ್ಯ (50) ಎಂಬ ಹೋಟೆಲ್ ಮ್ಯಾನೇಜರ್‌ವೊಬ್ಬರನ್ನು ಭೀಕರವಾಗಿ ತಲೆ ಕಡಿದು ಹತ್ಯೆ ಮಾಡಿದ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್‌ನಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿ ಯೋರ್ಡಾನೀಸ್ ಕೋಬಸ್ ಮಾರ್ಟಿನೇಜ್ (37)ನನ್ನು ಬಂಧಿಸಲಾಗಿದೆ.
ಘಟನೆ ಕುರಿತು ಅಮೆರಿಕದಲ್ಲಿ ಭಾರತೀಯ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ ಮತ್ತು ಕಂಬನಿ ಮಿಡಿದಿದೆ. ಅಲ್ಲದೆ ಮಲ್ಲಯ್ಯ ಶವವನ್ನು ಭಾರತಕ್ಕೆ ಕಳುಹಿಸಲು ಅಗತ್ಯವಾದ ದೇಣಿಗೆ ಸಂಗ್ರಹವನ್ನು ಆರಂಭಿಸಿದೆ.
ಏನಾಯ್ತು?:
ಡಲ್ಲಾಸ್‌ನ ಹೊರವಲಯದ ಡೌನ್‌ಸೂಟ್ಸ್ ಹೋಟೆಲ್‌ನಲ್ಲಿ ಮಲ್ಲಯ್ಯ ಮ್ಯಾನೇಜರ್ ಆಗಿದ್ದರೆ, ಮಾರ್ಟಿನೇಜ್ ಕೂಡ ಅಲ್ಲೇ ಕೆಲಸ ಮಾಡಿಕೊಂಡಿದ್ದ. ಬುಧವಾರ ಮಾರ್ಟಿನೇಜ್ ಇನ್ನೊಬ್ಬ ಮಹಿಳೆಯೊಂದಿಗೆ ಕೊಠಡಿ ಸ್ವಚ್ಛಗೊಳಿಸುವ ವೇಳೆಗೆ ಅಲ್ಲಿಗೆ ತೆರಳಿದ್ದ ಮಲ್ಲಯ್ಯ, ಹಾಳಾಗಿರುವ ವಾಷಿಂಗ್ ಮಷಿನ್ ಬಳಸದಂತೆ ಮಹಿಳೆಗೆ ಹೇಳಿದ್ದರು. ಜೊತೆಗೆ ಇದೇ ವಿಷಯವನ್ನು ಅಲ್ಲೇ ಪಕ್ಕ ಇದ್ದ ಮಾರ್ಟಿನೇಜ್‌ಗೂ ತಿಳಿಸು ಎಂದಿದ್ದರು.
ಈ ವೇಳೆ ತನಗೆ ನೇರವಾಗಿ ವಿಷಯ ಹೇಳದೆ ಬೇರೆಯವರ ಮೂಲಕ ಹೇಳಿಸಿದ್ದಕ್ಕೆ ಆಕ್ರೋಶಗೊಂಡ ಮಾರ್ಟಿನೇಜ್ ಅಲ್ಲಿಂದ ಸೀದಾ ತೆರಳಿ ಮಚ್ಚೊಂದನ್ನು ತೆಗೆದುಕೊಂಡು ಬಂದು ಮಲ್ಲಯ್ಯ ಮೇಲೆ ಹಲ್ಲೆ ನಡೆಸಿದ್ದಾನೆ. ಮಲ್ಲಯ್ಯ ಅಲ್ಲಿಂದ ತಪ್ಪಿಸಿಕೊಂಡು ಕಚೇರಿಯತ್ತ ಓಡಿಹೋದಾಗ ಅಲ್ಲಿಗೂ ಅಟ್ಟಾಡಿಸಿಕೊಂಡು ಹೋದ ಮಾರ್ಟಿನೇಜ್ ಹಲ್ಲೆ ಮುಂದುವರೆಸಿದ್ದಾನೆ. ಈ ವೇಳೆ ಅಲ್ಲೇ ಇದ್ದ ಮಲ್ಲಯ್ಯನ ಪತ್ನಿ ಮತ್ತು ಪುತ್ರ ತಡೆಯಲು ಯತ್ನಿಸಿದರಾದರೂ ಅವರನ್ನು ಬದಿಗೆ ತಳ್ಳಿದ ಆರೋಪಿ ಹಲವು ಬಾರಿ ಮಲ್ಲಯ್ಯರ ಕುತ್ತಿಗೆ ಮೇಲೆ ಬಲವಾದ ಏಟು ಹಾಕಿದ್ದಾನೆ. ಈ ವೇಳೆ ಮಲ್ಲಯ್ಯ ಅವರ ಶರ್ಟ್‌ನಲ್ಲಿದ್ದ ಮೊಬೈಲ್ ಮತ್ತು ಕೆಲವೊಂದು ಕಾರ್ಡ್‌ಗಳನ್ನು ಎತ್ತಿಕೊಂಡು ಪುನಃ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಕುತ್ತಿಗೆ ಪೂರ್ಣವಾಗಿ ಕತ್ತರಿಸದೇ ಇದ್ದಾಗ ಮತ್ತೊಮ್ಮೆ ಪೆಟ್ಟು ನೀಡ ರುಂಡ- ಮುಂಡ ಬೇರ್ಪಡಿಸಿ ಹತ್ಯೆ ಮಾಡಿದ್ದಾನೆ.
ವಿಕೃತಿ:
ರುಂಡವನ್ನು ಎರಡು ಬಾರಿ ಕಾಲಿನಿಂದ ಚೆಂಡಾಡಿದ ಮಾರ್ಟಿನೇಜ್ ಬಳಿಕ ಅದನ್ನು ಎತ್ತಿಕೊಂಡು ಅಲ್ಲೇ ಸಮೀಪದಲ್ಲೇ ಇದ್ದ ಕಸದ ಲಾರಿಯಲ್ಲಿ ಹಾಕಿ ಬಂದಿದ್ದಾನೆ. ಇಡೀ ಘಟನಾವಳಿ ಹೋಟೆಲ್ ಮತ್ತು ಅದರ ಹೊರಗೆ ಇದ್ದ ಸಿಸಿಟೀವಿಗಳಲ್ಲಿ ಸೆರೆಯಾಗಿದೆ.
ಆರೋಪಿ ಸೆರೆ:
ಹತ್ಯೆ ಬೆನ್ನಲ್ಲೇ ಘಟನಾ ಸ್ಥಳದಲ್ಲೇ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಮಾರ್ಟಿನೇಜ್ ಮಗವಿನೊಂದಿಗೆ ಅಸಭ್ಯವಾಗಿ ವರ್ತಿಸಿದ, ವಾಹನ ಕಳ್ಳತನ ಮತ್ತು ಹಲ್ಲೆ ಪ್ರಕರಣವೊಂದಲ್ಲಿ ಪೊಲೀಸರ ಅತಿಥಿಯಾಗಿದ್ದ. ಬಳಿಕ ಆತನನ್ನು ಕ್ಯೂಬಾಗೆ ಗಡೀಪಾರು ಮಾಡಲು ನಿರ್ಧರಿಸಲಾಗಿತ್ತಾದರೂ, ಗಡೀಪಾರು ವಿಮಾನಗಳಲ್ಲಿ ಸ್ಥಳದ ಅಲಭ್ಯತೆ ಕಾರಣ ಅಮೆರಿಕದಲ್ಲೇ ಉಳಿದುಕೊಂಡಿದ್ದ. ಈ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಅಥವಾ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಕಂಬನಿ:
ಬಾಬ್ ಎಂದೇ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ವಲಯದಲ್ಲಿ ಪರಿಚಿತರಾಗಿದ್ದ ಚಂದ್ರಮೌಳಿ ಮಲ್ಲಯ್ಯ, ‘ಪತ್ನಿಯ ಪಾಲಿಗೆ ಪ್ರೀತಿಯ ಗಂಡ, ಮಗನ ಪಾಲಿಗೆ ಆರೈಕೆಯ ತಂದೆ ಮತ್ತು ಪರಿಚಿತರಿಗೆಲ್ಲಾ ದಯಾಳುವಾಗಿಯೇ’ ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.
ಆಗಿದ್ದೇನು?
- ಟೆಕ್ಸಾಸ್ ರಾಜ್ಯದ ಡಲ್ಲಾಸ್‌ನ ಹೋಟೆಲ್‌ನಲ್ಲಿ ಕರ್ನಾಟಕದ ನಾಗಮಲ್ಲಯ್ಯ ಮ್ಯಾನೇಜರ್
- ವಾಷಿಂಗ್ ಮಷಿನ್ ಹಾಳಾಗಿದ್ದು, ಬಳಸಬೇಡಿ ಎಂದು ಮಹಿಳಾ ನೌಕರೆಗೆ ತಿಳಿಸಿದ ಮಲ್ಲಯ್ಯ
- ಇದನ್ನು ಅಲ್ಲೇ ಇದ್ದ ಕ್ಯೂಬಾದ ನೌಕರ ಮಾರ್ಟಿನೇಜ್‌ಗೂ ತಿಳಿಸಲು ಮಹಿಳೆಗೆ ಸೂಚನೆ
- ತನಗೆ ನೇರವಾಗಿ ಹೇಳದೆ ಮಹಿಳೆ ಮೂಲಕ ಹೇಳಿಸಿದ್ದಕ್ಕೆ ಮಾರ್ಟಿನೇಜ್ ತೀವ್ರ ಆಕ್ರೋಶ
- ಮಚ್ಚು ತಂದು ಮಲ್ಲಯ್ಯ ಮೇಲೆ ದಾಳಿ. ಪತ್ನಿ, ಮಗನ ಎದುರೇ ಶಿರಚ್ಛೇದ. ಕಸಕ್ಕೆ ಶಿರ ಎಸೆದು ವಿಕೃತಿ