ಸಾರಾಂಶ
ವಾಷಿಂಗ್ಟನ್: ಅಮೆರಿಕ ಅಂಗಡಿಯಲ್ಲಿ ಕಳ್ಳತನ ಮಾಡಿ 2 ಭಾರತೀಯ ಮಹಿಳೆಯರು ಸೆರೆಯಾದ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ. ಒಂದು ಘಟನೆಯಲ್ಲಿ, ಜ.15ರಂದು ಭಾರತದ ಮಹಿಳೆಯೊಬ್ಬಳು ಅಮೆರಿಕದ ಅಂಗಡಿಯಿಂದ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮಹಿಳೆ ಅಂಗಡಿಯಿಂದ ಕಾರ್ಟ್‌ನಲ್ಲಿ ಸಾಕಷ್ಟು ವಸ್ತುಗಳನ್ನು ತುಂಬಿಕೊಂಡು, ಹಣವನ್ನು ಪಾವತಿಸದೆ ಹೊರನಡೆಯುವುದು ಸಿಸಿಟೀವಿಯಲ್ಲಿ ಸೆರೆಯಾಗಿದೆ. ಅಧಿಕಾರಿಗಳು ಆಕೆಯನ್ನು ಹಿಡಿದು, ವಿಚಾರಣೆಗೆ ಮುಂದಾದಾಗ ಮಹಿಳೆ ವಿಚಿತ್ರ ರೀತಿಯಲ್ಲಿ ದೀರ್ಘವಾಗಿ ಉಸಿರಾಡುತ್ತಾಳೆ. ಇದರಿಂದ ಗಾಬರಿಗೊಂಡ ಅಧಿಕಾರಿಗಳು ಆಕೆಗೆ ಉಸಿರಾಟದ ತೊಂದರೆ ಇದೆಯೇ ಎಂದು ಪ್ರಶ್ನಿಸುತ್ತಾರೆ. ಇಲ್ಲ ಎಂದ ಮಹಿಳೆ, ತಾನು ಭಾರತದವಳು, ಗುಜರಾತಿ ಮಾತನಾಡುತ್ತೇನೆ, ವಾಷಿಂಗ್ಟನ್‌ನಿಂದ ವಾಹನ ಚಾಲನಾ ಪರವಾನಗಿ ಪಡೆದಿದ್ದೇನೆ ಎಂದು ಮಾಹಿತಿ ನೀಡುತ್ತಾಳೆ.
ಬಳಿಕ ಅಧಿಕಾರಿಗಳು ಕೋರ್ಟ್‌ನಲ್ಲಿ ಹಾಜರಾಗುವಂತೆ ಆಕೆಗೆ ಸೂಚಿಸುವುದು ವಿಡಿಯೋದಲ್ಲಿ ಕಂಡುಬರುತ್ತದೆ.ಜುಲೈನಲ್ಲಿ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ. ಭಾರತೀಯ ಮಹಿಳೆಯೊಬ್ಬಳು ಅಂಗಡಿಯಿಂದ ಬರೋಬ್ಬರಿ 1.1 ಲಕ್ಷ ರು. ಮೌಲ್ಯದ ಸರಕುಗಳನ್ನು ಖರೀದಿಸಿ, ಹಣ ಪಾವತಿಸದೆ ಪರಾರಿಯಾಗುತ್ತಾಳೆ. ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಕ್ಷಮೆ ಯಾಚಿಸುತ್ತಾಳೆ. ಆಗ ಪೊಲೀಸರು, ‘ಭಾರತದಲ್ಲಿ ಈ ರೀತಿ ಕಳ್ಳತನ ಮಾಡಲು ಬಿಡುತ್ತಾರೆಯೇ?’ ಎಂದು ಪ್ರಶ್ನಿಸಿ, ಕೈಗೆ ಬೇಡಿ ಹಾಕಿ ಠಾಣೆಗೆ ಕರೆದೊಯ್ಯುತ್ತಾರೆ.