ಮುಂದಿನ ವಾರಗಳಲ್ಲಿ ನಾನು ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿ ಅವರ ಜತೆಗೆ ಮಾತನಾಡಲು ಉತ್ಸುಕನಾಗಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿಕೊಂಡಿದ್ದಾರೆ.

 ನ್ಯೂಯಾರ್ಕ್‌/ವಾಷಿಂಗ್ಟನ್‌ : ’ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆ ಮುಂದುವರಿದಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಈ ಮಾತುಕತೆಯು ಯಶಸ್ವಿಯಾಗಿ ಮುಕ್ತಾಯಗೊಳ್ಳಲಿದೆ ಎಂಬ ವಿಶ್ವಾಸವಿದೆ. ಮುಂದಿನ ವಾರಗಳಲ್ಲಿ ನಾನು ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿ ಅವರ ಜತೆಗೆ ಮಾತನಾಡಲು ಉತ್ಸುಕನಾಗಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿಕೊಂಡಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ಆರನೇ ಸುತ್ತಿನ ವ್ಯಾಪಾರ ಮಾತುಕತೆ ಆರಂಭವಾದ ನಡುವೆಯೇ ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ ಸೋಷಲ್‌ನಲ್ಲಿ ಟ್ರಂಪ್‌ ಅವರು ಇಂಥದ್ದೊಂದು ಧನಾತ್ಮಕ ಪೋಸ್ಟ್‌ ಅನ್ನು ಗುರುವಾರ ಹಾಕಿದ್ದಾರೆ. ಇತ್ತೀಚಿನ ದಿನದಲ್ಲಿ ಸಂಘರ್ಷ ಬಿಟ್ಟು ಟ್ರಂಪ್‌ ಸ್ನೇಹದ ಮಾತಾಡಿದ್ದು 2ನೇ ಸಲ.

‘ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ವ್ಯಾಪಾರ ಅಡೆತಡೆಗಳ ಕುರಿತು ಮಾತುಕತೆ ಮುಂದುವರಿಸಿವೆ ಎಂದು ಹೇಳಲು ಬಯಸುತ್ತೇನೆ. ವ್ಯಾಪಾರ ಒಪ್ಪಂದ ಕುರಿತ ಮಾತುಕತೆಯು ಯಾವುದೇ ಸಮಸ್ಯೆಯಿಲ್ಲದೆ ಎರಡೂ ದೇಶಗಳ ಪಾಲಿಗೆ ಯಶಸ್ವಿಯಾಗಿ ಮುಕ್ತಾಯಗೊಳ್ಳಲಿದೆ’ ಎಂಬ ವಿಶ್ವಾಸ ನನಗಿದೆ ಟ್ರಂಪ್‌ ಹೇಳಿದ್ದಾರೆ.

ರಷ್ಯಾ ತೈಲ ಖರೀದಿ ವಿಚಾರವಾಗಿ ಭಾರತದ ಮೇಲೆ ಟ್ರಂಪ್‌ ಹೇರಿದ್ದ ಶೇ.50ರಷ್ಟು ತೆರಿಗೆಯಿಂದಾಗಿ ಎರಡೂ ದೇಶಗಳ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿತ್ತು. ಅಮೆರಿಕದ ಈ ಕ್ರಮವನ್ನು ಭಾರತ ಆರಂಭದಿಂದಲೇ ವಿರೋಧಿಸುತ್ತಲೇ ಬಂದಿದೆ.

ಭಾರತದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಲೇ ಬಂದಿರುವ ಟ್ರಂಪ್‌ ಅವರು ಕಳೆದ ವಾರ ಮಾತ್ರ ಅಚ್ಚರಿಯೆಂಬಂತೆ ಮೃದು ನಿಲುವು ತೋರಿದ್ದರು. ಭಾರತ- ಅಮೆರಿಕ ನಡುವೆ ವಿಶೇಷವಾದ ಸಂಬಂಧವಿದೆ. ಭಾರತದ ಪ್ರಧಾನಿ ಮೋದಿ ಅವರು ಅತ್ಯುತ್ತಮ ನಾಯಕ. ಅವರು ನನ್ನ ಆತ್ಮೀಯ ಗೆಳೆಯ ಎಂದು ಹೇಳಿದ್ದರು. ಈ ಪೋಸ್ಟ್‌ಗೆ ಮೋದಿ ಕೂಡ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.

ನಾನೂ ಟ್ರಂಪ್‌ ಜತೆ ಮಾತನಾಡಲು ನಾನೂ ಉತ್ಸುಕ : ಮೋದಿ 

ನವದೆಹಲಿ: ಭಾರತದ ಜತೆಗೆ ಆದಷ್ಟು ಶೀಘ್ರವಾಗಿ ವ್ಯಾಪಾರ ಒಪ್ಪಂದ ಏರ್ಪಡಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪೋಸ್ಟ್‌ಗೆ ಪ್ರಧಾನಿ ಮೋದಿ ಕೂಡ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಎರಡೂ ದೇಶಗಳು ಈ ವ್ಯಾಪಾರ ಒಪ್ಪಂದವನ್ನು ಆದಷ್ಟು ಶೀಘ್ರ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ನಾನು ಕೂಡ ಟ್ರಂಪ್‌ ಅವರ ಜತೆ ಮಾತನಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಕುರಿತ ಮಾತುಕತೆ ಮುಂದುವರಿದಿದೆ ಎಂದು ಹೇಳಲು ಖುಷಿಪಡುತ್ತೇನೆ. ಮುಂದಿನ ವಾರಗಳಲ್ಲಿ ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿ ಜತೆಗೆ ಮಾತನಾಡಲು ಉತ್ಸುಕನಾಗಿದ್ದೇನೆ ಎಂದು ಟ್ರಂಪ್‌ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಮೋದಿ, ನಮ್ಮ ಜನರಿಗಾಗಿ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಖಚಿತಪಡಿಸಲು ನಾವು ಜತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.