ಸಾರಾಂಶ
ಚೀನಾ ಮೇಲೆ ಶೇ.145ರಷ್ಟು ತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್, ಚಿಪ್ ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳನ್ನು ತನ್ನ ಸುಂಕದಿಂದ ಹೊರಗಿಟ್ಟಿದ್ದಾರೆ.
ವಾಷಿಂಗ್ಟನ್: ಚೀನಾ ಮೇಲೆ ಶೇ.145ರಷ್ಟು ತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್, ಚಿಪ್ ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳನ್ನು ತನ್ನ ಸುಂಕದಿಂದ ಹೊರಗಿಟ್ಟಿದ್ದಾರೆ. ಈ ಮೂಲಕ ಚೀನಾದಲ್ಲಿ ಅತಿ ಹೆಚ್ಚು ಐಫೋನ್ ಉತ್ಪಾದನೆ ಮಾಡುತ್ತಿದ್ದ ಐಫೋನ್ ಉತ್ಪಾದಿಸುವ ಆ್ಯಪಲ್ ಸೇರಿ ಹಲವು ಕಂಪನಿಗಳು ದರ ಏರಿಕೆ ಬಿಸಿಯಿಂದ ಬಚಾವಾಗಿವೆ.
ಚೀನಾ ಮೇಲೆ ಶೇ.145ರಷ್ಟು ತೆರಿಗೆ ಘೋಷಣೆಯು ಅಮೆರಿಕ ಮೂಲದ ಕಂಪನಿಯಾದ ಆ್ಯಪಲ್‌ಗೆ ಕಂಟಕವಾಗಿತ್ತು. ಐಫೋನ್ ದರ ಶೇ.50ರಷ್ಟು ಹೆಚ್ಚುವ ಸಾಧ್ಯತೆ ಇತ್ತು. ಹೀಗಾಗಿ ಐಫೋನ್ ಪ್ರಿಯರು ಇದರಿಂದ ಆತಂಕಿತರಾಗಿದ್ದರು. ಅವರ ಆತಂಕ ದೂರ ಮಾಡಲು ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಅನ್ನು ಸುಂಕದ ಪಟ್ಟಿಯಿಂದ ಹೊರಗಿಡಲಾಗಿದೆ. ಚೀನಾ ಮೇಲಿನ ಶೇ.145 ಸುಂಕ ಮಾತ್ರವಲ್ಲ, ಇತರ ದೇಶಗಳ ಮೇಲಿನ ಶೇ.10ರಷ್ಟು ಮೂಲ ಸುಂಕ ದರವೂ ಇವುಗಳಿಗೆ ಅನ್ವಯಿಸಲ್ಲ ಅಮೆರಿಕ ಸುಂಕ ಇಲಾಖೆ ತಿಳಿಸಿದೆ.