ಸಾರಾಂಶ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಈಗ ವಿಶ್ವದ 50 ದೇಶಗಳು ಸುಂಕ ಇಳಿಕೆ ಬಗ್ಗೆ ಮಾತುಕತೆ ನಡೆಸುತ್ತಿವೆ ಹಾಗೂ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ ಎಂಬ ಕುತೂಹಲದ ವಿಷಯ ಹೊರಬಿದ್ದಿದೆ.
ವಾಷಿಂಗ್ಟನ್: ಅನೇಕ ದೇಶಗಳ ವಸ್ತುಗಳ ಆಮದಿಗೆ ಭಾರಿ ಸುಂಕ ಘೋಷಿಸಿ ವಿಶ್ವಾದ್ಯಂತ ಆರ್ಥಿಕ ವಿಪ್ಲವಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಈಗ ವಿಶ್ವದ 50 ದೇಶಗಳು ಸುಂಕ ಇಳಿಕೆ ಬಗ್ಗೆ ಮಾತುಕತೆ ನಡೆಸುತ್ತಿವೆ ಹಾಗೂ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ ಎಂಬ ಕುತೂಹಲದ ವಿಷಯ ಹೊರಬಿದ್ದಿದೆ.
ಖುದ್ದು ಟ್ರಂಪ್ ಆಪ್ತರಾದ ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಈ ವಿಷಯ ತಿಳಿಸಿದ್ದಾರೆ. ಟ್ರಂಪ್ ಕೂಡ ಇದನ್ನು ದೃಢಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಹ್ಯಾಸೆಟ್, ‘ಮಾತುಕತೆಯನ್ನು ಪ್ರಾರಂಭಿಸಲು 50ಕ್ಕೂ ಹೆಚ್ಚು ದೇಶಗಳು ಅಧ್ಯಕ್ಷರ ಸಂಪರ್ಕದಲ್ಲಿವೆ ಎಂದು ನಿನ್ನೆ ರಾತ್ರಿ ನನಗೆ ವರದಿ ಸಿಕ್ಕಿದೆ. ತಾವು ಹೆಚ್ಚು ಸುಂಕ ಹಾಕುತ್ತಿದ್ದೇವೆ ಎಂದು ಆ ದೇಶಗಳಿಗೆ ಅರ್ಥವಾಗಿದೆ. ಹೀಗಾಗಿ ಅವು ಮಾತುಕತೆಗೆ ಮುಂದಾಗಿವೆ’ ಎಂದಿದ್ದಾರೆ.
ಇದನ್ನು ದೃಢಪಡಿಸಿರುವ ಟ್ರಂಪ್, ‘ನಾನು ವಿಶ್ವದ, ಯುರೋಪ್ ಹಾಗೂ ಏಷ್ಯಾದ ಅನೇಕ ನಾಯಕರ ಜತೆ ಮಾತನಾಡಿದ್ದೇನೆ. ಅವರು ಅಮೆರಿಕ ಜತೆ ಒಪ್ಪಂದ ಮಾಡಿಕೊಳ್ಳಲು ಹಾತೊರೆಯುತ್ತಿದ್ದಾರೆ. ಒಪ್ಪಂದದಿಂದ ನಿಮಗೇನೂ ನಷ್ಟವಾಗುವುದಿಲ್ಲ ಎಂದು ನಾನು ಅವರಿಗೆ ಸ್ಪಷ್ಟಪಡಿಸಿದ್ದೇನೆ’ ಎಂದು ಹೇಳಿದ್ದಾರೆ.