ಅಮೆರಿಕ ಸಂಸತ್ತಿನ ಮೇಲ್ಮನೆಯಲ್ಲಿ ಸತತ 25 ತಾಸು ಭಾಷಣ ಮಾಡಿದ ಸಂಸದ ಕೋರಿ ಬೂಕರ್‌ !

| N/A | Published : Apr 05 2025, 12:45 AM IST / Updated: Apr 05 2025, 04:10 AM IST

ಸಾರಾಂಶ

ಕೋರಿ ಬೂಕರ್‌ (55) ಎಂಬ ಅಮೆರಿಕ ಸಂಸದ ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ನಲ್ಲಿ ಸತತ 25 ಗಂಟೆ 4 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 1957ರಲ್ಲಿ 24 ಗಂಟೆ 18 ನಿಮಿಷ ಭಾಷಣ ಮಾಡಿದ್ದ ರಿಪಬ್ಲಿಕನ್‌ ಸಂಸದ ಸ್ಟ್ರೋಮ್ ಥರ್ಮಂಡ್‌ರ ದಾಖಲೆ ಮುರಿದಿದ್ದಾರೆ.

 ವಾಷಿಂಗ್ಟನ್‌: ಕೋರಿ ಬೂಕರ್‌ (55) ಎಂಬ ಅಮೆರಿಕ ಸಂಸದ ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ನಲ್ಲಿ ಸತತ 25 ಗಂಟೆ 4 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 1957ರಲ್ಲಿ 24 ಗಂಟೆ 18 ನಿಮಿಷ ಭಾಷಣ ಮಾಡಿದ್ದ ರಿಪಬ್ಲಿಕನ್‌ ಸಂಸದ ಸ್ಟ್ರೋಮ್ ಥರ್ಮಂಡ್‌ರ ದಾಖಲೆ ಮುರಿದಿದ್ದಾರೆ.

ನ್ಯೂಜೆರ್ಸಿಯ ಡೆಮಾಕ್ರಟಿಕ್‌ ಪಕ್ಷದ ಸಂಸದರಾಗಿರುವ ಕೋರಿ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಭಾಷಣ ಮಾಡಿದ್ದಾರೆ. ಸೋಮವಾರ ಸಂಜೆ ಭಾಷಣ ಆರಂಭಿಸಿದ್ದ ಕೋರಿ ಮಂಗಳವಾರ ಸಂಜೆ ಭಾಷಣ ಮುಗಿಸಿದ್ದಾರೆ. ಭಾಷಣದ ವೇಳೆ ಒಮ್ಮೆಯೂ ಕೂರದೆ, ಶೌಚಾಲಯಕ್ಕೂ ತೆರಳದೆ, ಆಹಾರ ಸೇವನೆಗೆ ವಿರಾಮವನ್ನೂ ಪಡೆಯದೇ ಅಚ್ಚರಿ ಮೂಡಿಸಿದ್ದಾರೆ.

ಬೂಕರ್‌ ತಮ್ಮ ಭಾಷಣದಲ್ಲಿ ಟ್ರಂಪ್‌ ಅವರನ್ನು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕರೆದು, ನೆರವು ಕಡಿತ, ಉದ್ಯೋಗಿಗಳ ವಜಾ, ಆರೋಗ್ಯ ಕಾರ್ಯಕ್ರಮಗಳ ಕೂಲಂಕಷ ಪರೀಕ್ಷೆ ಹಾಗೂ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಭಾಷಣದ ವೇಳೆ ತಮ್ಮ ಬಾಲ್ಯದ ಬಗ್ಗೆ ಮಾಹಿತಿ ನೀಡಿ, ಕವನಗಳನ್ನು ವಾಚಿಸಿ, ಕ್ರೀಡೆ ಬಗ್ಗೆ ಚರ್ಚಿಸಿ, ಸಹಸದಸ್ಯರಿಂದ ಪ್ರಶ್ನೆಗಳನ್ನು ಸ್ವೀಕರಿಸಿ ಕೋರಿ ಗಮನ ಸೆಳೆದರು.

55ನೇ ವಯಸ್ಸಿನಲ್ಲೂ ಸತತ 25 ಗಂಟೆಗಳ ಕಾಲ ನಿಂತೇ ಭಾಷಣ ಮಾಡಿದ ಕೋರಿ ದೈಹಿಕ ಸಾಮರ್ಥ್ಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಸತ್‌ ಭಾಷಣವನ್ನು ದೇಶಾದ್ಯಂತ ಸಾವಿರಾರು ಜನರು ಯುಟ್ಯೂಬ್‌ ನೇರಪ್ರಸಾರದಲ್ಲಿ ವೀಕ್ಷಣೆ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.