ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 111 ವರ್ಷಗಳ ಸಾರ್ಥಕ ಸೇವೆ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ 110.40 ಕೋಟಿ ರು. ಲಾಭ ಗಳಿಸಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕಳೆದ ವರ್ಷದ ಲಾಭ (79.09 ಕೋಟಿ ರು.)ಕ್ಕಿಂತ ಶೇ.39.59ರಷ್ಟು ಏರಿಕೆಯನ್ನು ಬ್ಯಾಂಕ್ ಈ ವರ್ಷ ದಾಖಲಿಸಿದೆ. ಇದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ. ಅಲ್ಲದೆ, ಬ್ಯಾಂಕಿನ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇ.3.52ರಿಂದ ಶೇ.2.71ಕ್ಕೆ ಇಳಿಕೆಯಾಗಿರುವುದು ಕೂಡ ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿದರು.ವರದಿ ವರ್ಷದಲ್ಲಿ 17366.68 ಕೋಟಿ ರು. ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರ (15544.34)ಕ್ಕಿಂತ ಈ ಬಾರಿ ಶೇ.11.72ರಷ್ಟು ಏರಿಕೆ ಕಂಡಿದೆ. 2025-26ನೇ ಸಾಲಿಗೆ 19,250 ಕೋಟಿ ರು. ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು.
7882.76 ಕೋಟಿ ರು. ಠೇವಣಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ 113 ಶಾಖೆಗಳ ಮುಖಾಂತರ ಒಟ್ಟು 7882.76 ಕೋಟಿ ರು. ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಕ್ಕಿಂತ ಈ ಬಾರಿ ಶೇ.9.11ರಷ್ಟು ಏರಿಕೆಯಾಗಿದೆ ಎಂದು ಡಾ.ರಾಜೇಂದ್ರ ಕುಮಾರ್ ತಿಳಿಸಿದರು.ಸರ್ಕಾರದ ಅಧಿಸೂಚನೆಯಂತೆ ಕೃಷಿಯೇತರ ಸಹಕಾರ ಸಂಘಗಳ ಕ್ಷೇಮನಿಧಿಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹೂಡಿಕೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ಮಾತ್ರವಲ್ಲ, ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಠೇವಣಿಗಳನ್ನು ಕೂಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹೂಡಿಕೆ ಮಾಡುವಂತೆ ವಿಜ್ಞಾಪಿಸಲಾಗಿದೆ ಎಂದರು.
7775.44 ಕೋಟಿ ಮುಂಗಡ:ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬ್ಯಾಂಕ್ 7775.44 ಕೋಟಿ ರು. ಮುಂಗಡ ನೀಡಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ 2130.95 ಕೋಟಿ ರು., ಮಧ್ಯಮಾವಧಿ ಸಾಲ 169.79 ಕೋಟಿ ರು. ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು 2300.74 ಕೋಟಿ ರು. ಸಾಲ ನೀಡಲಾಗಿದ್ದು, ಕೃಷಿಯೇತರ ಕ್ಷೇತ್ರಕ್ಕೆ 5474.70 ಕೋಟಿ ರು. ಸಾಲ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ 9483.92 ಕೋಟಿ ರು. ಆಗಿರುತ್ತದೆ.
ಶೇ.100 ಮರುಪಾವತಿ ಸಾಧನೆ:ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲ ಕೃಷಿ ಸಾಲಗಳು ಶೇ.100 ಮರುಪಾವತಿಯನ್ನು ಕಂಡು ದಾಖಲೆ ನಿರ್ಮಿಸಿ ಸಾಧನೆಗೈದಿದೆ. ಇಂತಹ ಸಾಧನೆಯನ್ನು ಕಳೆದ 30 ವರ್ಷಗಳಿಂದ ಬ್ಯಾಂಕ್ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆ ಎಂದು ಅವರು ತಿಳಿಸಿದರು.
ಬ್ಯಾಂಕಿನ ಆರ್ಥಿಕ ತಖ್ತೆ:ಬ್ಯಾಂಕ್‌ಗೆ ಒಟ್ಟು 1086 ಸಂಘಗಳು ಸದಸ್ಯರಾಗಿವೆ. ಇವುಗಳ ಪಾಲು ಬಂಡವಾಳ 476 ಕೋಟಿ ರು. ಆಗಿರುತ್ತದೆ. ದುಡಿಯುವ ಬಂಡವಾಳ 12873.14 ಕೋಟಿ ರು. ಆಗಿದ್ದು, ಇದು ಕಳೆದ ವರ್ಷಕ್ಕಿಂತ (11418.68 ಕೋಟಿ ರು.) ಶೇ.12.74ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ 270.15 ಕೋಟಿ ರು. ವಿವಿಧ ನಿಧಿಗಳನ್ನು ಹೊಂದಿದ್ದು, ಶೇ.8.02ರಷ್ಟು ಏರಿಕೆ ಕಂಡಿದೆ.
ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್:ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ ಬ್ಯಾಂಕ್ ರುಪೇ ಕಿಸಾನ್ ಕಾರ್ಡ್‌ನ್ನು ನೀಡಿದೆ. ಈಗಾಗಲೇ 1,41,266 ರುಪೇ ಕಿಸಾನ್ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗಿದೆ. 86,887 ರುಪೇ ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ನ ಇತರ ಗ್ರಾಹಕರಿಗೆ ನೀಡಲಾಗಿದೆ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ್ ಶೆಟ್ಟಿ, ಶಶಿಕುಮಾರ್ ರೈ ಬಿ., ಡಾ. ದೇವಿ ಪ್ರಸಾದ್ ಶೆಟ್ಟಿ, ಕೆ. ಜೈರಾಜ್ ಬಿ. ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಎಸ್.ಬಿ. ಜಯರಾಮ ರೈ, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಇದ್ದರು.ಎಸ್‌ಸಿಡಿಸಿಸಿ ಬ್ಯಾಂಕ್ ಮುಂದಿನ ಯೋಜನೆಗಳು
- ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ (ಐಎಂಪಿಎಸ್) ಕಾರ್ಯಗತಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಯೋಜನೆಯಿಂದ ಗ್ರಾಹಕರು ಮೊಬೈಲ್ ಮುಖಾಂತರ ತಮ್ಮ ಖಾತೆಯಿಂದ ಇತರ ಬ್ಯಾಂಕಿನ ಖಾತೆಗೆ ಹಣ ವರ್ಗಾಯಿಸಬಹುದು.- ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್: ಇದು ಜನಸಾಮಾನ್ಯರು ಉಪಯೋಗಿಸುವ ಯುಪಿಐ ಪಾವತಿ ವಿಧಾನ. ಇದರಲ್ಲಿ ಸ್ಮಾರ್ಟ್‌ಫೋನ್‌ನ್ನು ವರ್ಚುವಲ್ ಡೆಬಿಟ್ ಕಾರ್ಡ್‌ನಂತೆ ಬಳಸಬಹುದು. ಇದರಿಂದ ತ್ವರಿತವಾಗಿ ಹಣ ಪಾವತಿಸಬಹುದು ಹಾಗೂ ಸ್ವೀಕರಿಸಬಹುದು. ಮಾತ್ರವಲ್ಲದೆ, ಯುಪಿಐ ಸೇವೆಗಳಾದ ಗೂಗಲ್ ಪೇ, ಫೋನ್ ಪೇ ಹಾಗೂ ಇತರ ಪಾವತಿ ವಿಧಾನವನ್ನು ಬಳಸಬಹುದು. ಅಲ್ಲದೆ, ವಿದ್ಯುತ್ ಬಿಲ್, ನೀರಿನ ಬಿಲ್ ಹಾಗೂ ಟೆಲಿಫೋನ್ ಬಿಲ್‌ಗಳನ್ನು ಪಾವತಿಸಲು ಅವಕಾಶವಿದೆ. ಯುಪಿಐ ಚಾಲಿತ ಆ್ಯಪ್‌ಗಳೊಂದಿಗೆ ಕ್ಯೂಆರ್ ಕೋಡ್ ಮಾಡುವ ಮೂಲಕ ವ್ಯಾಪಾರ ಕೇಂದ್ರಗಳಲ್ಲೂ ಈ ಮಾದರಿಯನ್ನು ಉಪಯೋಗಿಸಬಹುದು.
- ಬ್ಯಾಂಕ್ ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಹಮ್ಮಿಕೊಂಡಿದೆ.ಬ್ಯಾಂಕ್‌ನ ಸಾಧನೆ
- ಎಸ್‌ಸಿಡಿಸಿಸಿ ಬ್ಯಾಂಕಿಗೆ 22 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 19 ಬಾರಿ ನಬಾರ್ಡ್ ಪ್ರಶಸ್ತಿ ದೊರೆತಿದೆ.- ಎರಡು ಬಾರಿ “ಎಫ್‌ಸಿಬಿಎ” ರಾಷ್ಟ್ರೀಯ ಪ್ರಶಸ್ತಿಯಿಂದ ಬ್ಯಾಂಕ್ ಪುರಸ್ಕೃತಗೊಂಡಿದೆ.
- ಬ್ಯಾಂಕಿನ ಸರ್ವಾಂಗೀಣ ಸಾಧನೆಗಾಗಿ ಎರಡು ಬಾರಿ ಪ್ರತಿಷ್ಠಿತ “ಬ್ಯಾಂಕೊ ಬ್ಲೂ ರಿಬ್ಬನ್ ಪ್ರಶಸ್ತಿ” ಲಭಿಸಿದೆ.- ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ “ಅಟಲ್ ಪಿಂಚಣಿ ಯೋಜನೆ”ಯನ್ನು ಬ್ಯಾಂಕ್ ಸಮರ್ಪಕವಾಗಿ ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಚಂದಾದಾರರನ್ನು ನೋಂದಾಯಿಸಿ, ಭಾರತ ಸರ್ಕಾರದ ಹಣಕಾಸು ಸಚಿವಾಲಯದಿಂದ 4 ಬಾರಿ ಪ್ರಶಸ್ತಿಗೆ ಪಾತ್ರವಾಗಿದೆ.
- ಬ್ಯಾಂಕ್ ಸಿಬ್ಬಂದಿಗೆ ಪಿಂಚಣಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ರಾಜ್ಯದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್. 2010ರಿಂದ ಈ ಯೋಜನೆ ಜಾರಿಯಲ್ಲಿದೆ.- ಸ್ವಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ ಬ್ಯಾಂಕ್‌ಗೆ ರಾಜ್ಯದಲ್ಲೇ ಪ್ರಥಮ ಸ್ಥಾನ. ಬ್ಯಾಂಕ್ ಒಟ್ಟು 34,621 ಗುಂಪುಗಳನ್ನು ಹೊಂದಿದೆ.
- ಜಿಲ್ಲೆಯಲ್ಲಿ ಒಟ್ಟು 1,62,839 ರೈತರಿಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ವಿತರಿಸಲಾಗಿದೆ. 91,548 ಕಿಸಾನ್ ಕ್ರೆಡಿಟ್ ಕಾರ್ಡುದಾರರಿಗೆ ವೈಯುಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ.- ಬ್ಯಾಂಕಿನ ಎಲ್ಲ ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡು ಏಕಗವಾಕ್ಷಿ, ಆರ್‌ಟಿಜಿಎಸ್/ ನೆಫ್ಟ್ ಹಾಗೂ ಕೋರ್ ಬ್ಯಾಂಕಿಂಗ್‌ನಂತಹ ಉತ್ಕೃಷ್ಟ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ.
- ಬ್ಯಾಂಕ್ ವ್ಯವಹಾರವನ್ನು ಸರಳೀಕರಿಸುವ ನಿಟ್ಟಿನಲ್ಲಿ ಟ್ಯಾಬ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರಿಗೆ ಬ್ಯಾಂಕ್ ಪರಿಚಯಿಸಿದೆ.- ಬ್ಯಾಂಕಿನ ಮುಖ್ಯ ಶಾಖೆಗಳಲ್ಲಿ ಎಟಿಎಂ ಅಳವಡಿಸಲಾಗಿದ್ದು, ಈಗಾಗಲೇ ಉಭಯ ಜಿಲ್ಲೆಗಳ 15 ಶಾಖೆಗಳಲ್ಲಿ ಎಟಿಎಂ ಅಳವಡಿಸಲಾಗಿದೆ.