ಅಂಕುರಾರ್ಪಣೆಯೊಂದಿಗೆ ವೈರಮುಡಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ

| Published : Apr 03 2025, 12:34 AM IST

ಸಾರಾಂಶ

ಚೆಲುವನಾರಾಯಣಸ್ವಾಮಿಗೆ ಏ.3ರ ಸಂಜೆ ಕಲ್ಯಾಣಿಯ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ ವೈಭವದಿಂದ ನೆರವೇರಲಿದೆ. ಸಮನ್ಮಾಲೆ, ಲಾಜಹೋಮ ದ ಶಾಸ್ತ್ರೋಕ್ತ ವಿಧಿ ವಿಧಾನಗಳೊಂದಿಗೆ ಲೋಕಕಲ್ಯಾಣಾರ್ಥವಾಗಿ ಚೆಲುವನಾರಾಯಣಸ್ವಾಮಿ ಮತ್ತು ಕಲ್ಯಾಣನಾಯಕಿಗೆ ಕಲ್ಯಾಣೋತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಧಾರಾಮಂಟಪಕ್ಕೆ ವಿಶೇಷ ಪುಷ್ಪಾಲಂಕಾರ ಹಾಗೂ ದೀಪಾಲಂಕಾರ ಮಾಡಲಾಗುತ್ತಿದೆ.

ಮೇಲುಕೋಟೆ: ಚೆಲುವನಾರಾಯಣಸ್ವಾಮಿಯ ವಿಶ್ವಾವಸು ಸಂವತ್ಸರದ ವೈರಮುಡಿ ಬ್ರಹ್ಮೋತ್ಸವ ಅಂಕುರಾರ್ಪಣೆಯೊಂದಿಗೆ ಬುಧವಾರ ವಿಧ್ಯುಕ್ತವಾಗಿ ಆರಂಭವಾಯಿತು. ಅಂಕುರಾರ್ಪಣೆ ಅಂಗವಾಗಿ ದೇವಸೇನ ವಿಶ್ವಕ್ಸೇನರ ಉತ್ಸವ ಹಾಗೂ ಮೃತ್ತಿಕಾ ಸಂಗ್ರಹಣ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನಡೆಯಿತು. ದೇವಾಲಯದಲ್ಲಿ ರಾಮಾನುಜಾಚಾರ್ಯರ ಕಾಲದಿಂದ ದುಡಿಯುವ ವರ್ಗಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಅಂಕರಾರ್ಪಣೆಗೂ ಮುನ್ನ ಬಂಡೀಕಾರರ ಮಂಟಪಕ್ಕೆ ಮುತ್ತು ಮುಡಿಯೊಂದಿಗೆ ಸ್ವಾಮಿಯ ಉತ್ಸವ ನೆರವೇರಿತು. ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ರಥ ಚಾಲನೆ, ವಾಹನ ಕಟ್ಟುವುದು, ತೆಪ್ಪ ಮಂಟಪ ಸಿದ್ಧತೆ, ಹಸಿರು ತೋರಣ ಕಟ್ಟುವ ಸೇವೆ ಮಾಡುವ ಬಂಡೀಕಾರರು ಪೂರ್ವಕಾಲದಲ್ಲಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿದ ಮಂಟಪಕ್ಕೆ ಮುತ್ತುಮುಡಿಯೊಂದಿಗೆ ಸ್ವಾಮಿ ಉತ್ಸವ ನೆರವೇರಿದ ವೇಳೆ ವಂಶಪಾರಂಪರ್ಯದ ಬಂಡೀಕಾರರಾದ ನಂದಕುಕುಮಾರ್, ವಿಜಯಕುಮಾರ್, ಲೋಕೇಶ್, ಬಲರಾಮರಿಗೆ ಸ್ವಾಮಿ ಮಾಲೆ ಮರ್ಯಾದೆ ಮಾಡಲಾಯಿತು. ಬಂಡೀಕಾರರು ಪ್ರಥಮದಿನ ಸೇವಾಕೈಂಕರ್ಯವನ್ನು ಭಕ್ತಿಯಿಂದ ನೆರವೇರಿಸಿದರು.

ಇಂದು ಕಲ್ಯಾಣೋತ್ಸವ: