ಸಾರಾಂಶ
ಶಿರಸಿ: ರಾಜ್ಯದ ಪ್ರತಿಷ್ಠಿತಿ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಮಾ.೩೧ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ತನ್ನ ವ್ಯವಹಾರವನ್ನು ₹೨೩೬೧ ಕೋಟಿಗೆ ವೃದ್ಧಿಸಿ ನೂತನ ದಾಖಲೆಯನ್ನು ನಿರ್ಮಿಸಿದೆ.₹೧೪.೯೨ ಕೋಟಿ ನಿರ್ವಹಣಾ ಲಾಭ, ₹೧೧.೦೭ ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ತಿಳಿಸಿದ್ದಾರೆ.
ಅವರು ಗುರುವಾರ ಈ ಕುರಿತು ಪ್ರಕಟಣೆ ನೀಡಿ, ದಾಖಲೆಯ ೪೯,೦೦೦ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ತನ್ನ ವ್ಯವಹಾರವನ್ನು ₹೨೩೦೦ ಕೋಟಿ ದಾಟುವುದರೊಂದಿಗೆ ಶಿರಸಿ ಅರ್ಬನ್ ಬ್ಯಾಂಕು ಹೊಸ ದಾಖಲೆಯನ್ನು ನಿರ್ಮಿಸಿದೆ. ಬ್ಯಾಂಕಿನ ಠೇವಣಿಗಳು ಕಳೆದ ವರ್ಷದ ₹೧೨೪೪ ಕೋಟಿಗಳಿಂದ ಪ್ರಸಕ್ತ ವರ್ಷಾಂತ್ಯಕ್ಕೆ ₹೧೩೭೮ ಕೋಟಿಗೆ, ಸಾಲ ಮತ್ತು ಮುಂಗಡಗಳು ಕಳೆದ ವರ್ಷದ ₹೮೧೦ ಕೋಟಿಯಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ₹೯೮೩ ಕೋಟಿಗೆ ಏರಿಕೆಯಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳ ಕಳೆದ ವರ್ಷದ ₹೧೪೫೩ ಕೋಟಿಯಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ₹೧೬೦೫ ಕೋಟಿಗೆ ಏರಿಕೆಯಾಗಿದೆ. ₹೧೫೨ ಕೋಟಿ ಹೆಚ್ಚಳವಾಗುವುದರ ಮೂಲಕ ಶೇ.೧೦.೪೬ ವೃದ್ಧಿ ದಾಖಲಿಸಿದೆ. ₹೪೮೬ ಕೋಟಿಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಗುಂತಾಯಿಸುವ ಮೂಲಕ ಬ್ಯಾಂಕಿನ ಆರ್ಥಿಕ ಸ್ಥಿರತೆ ದೃಢೀಕರಿಸಿದೆ. ಬೃಹತ್ ಪಟ್ಟಣ ಸಹಕಾರಿ ಬ್ಯಾಂಕು ತನ್ನ ಶೇರು ಬಂಡವಾಳವನ್ನು ಕಳೆದ ವರ್ಷದ ₹೩೪.೧೨ ಕೋಟಿಯಿಂದ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ೪೧.೩೨ ಕೋಟಿಗೆ ಹೆಚ್ಚಿಸುವುದರ ಮೂಲಕ ಶೇ.೨೧.೧೦ ರಷ್ಟು ವೃದ್ಧಿ ದಾಖಲಿಸಿದೆ. ಸ್ವಂತ ನಿಧಿಗಳನ್ನು ₹೧೩೨.೪೦ ಕೋಟಿಗೆ ವೃದ್ಧಿಸುವುದರೊಂದಿಗೆ ಸ್ವಂತ ಬಂಡವಾಳವನ್ನು ₹೧೭೩.೭೨ ಕೋಟಿಗೆ ವೃದ್ಧಿಸಿಕೊಂಡಿದೆ. ಬ್ಯಾಂಕು ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣವನ್ನು ಸತತ 14 ವರ್ಷಗಳಿಂದ ಪ್ರತಿಶತ ಸೊನ್ನೆಗೆ ಕಾಯ್ದುಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.ಹಿರಿಯ ನಾಗರಿಕರಿಗೆ ಶೇ.೮.೫೦ ಬಡ್ಡಿ ದರದಲ್ಲಿ ಸಮೃದ್ಧಿ ಠೇವು ಯೋಜನೆ ಪರಿಚಯಿಸಲಾಗಿದೆ. ಬ್ಯಾಂಕು ಗೃಹಸಾಲ ಶೇ.೯.೨೫, ಕಾರು ಸಾಲ ಶೇ.೯.೫೦, ವ್ಯವಹಾರ, ಉದ್ದಿಮೆಗಳಿಗೆ ದುಡಿಯುವ ಬಂಡವಾಳಕ್ಕಾಗಿ ಶೇ.೧೦.೨೫ ಸ್ಪರ್ಧಾತ್ಮಕ ದರಗಳಲ್ಲಿ ನೀಡುತ್ತಿದೆ. ಬ್ಯಾಂಕು ಗ್ರಾಹಕರಿಗೆ ತಂತ್ರಜ್ಞಾನಪೂರಿತ ಅತ್ಯಾಧುನಿಕ ಬ್ಯಾಂಕಿಂಗ್ ಸೌಲಭ್ಯ ನೀಡುತ್ತಿದೆ. ಎಲ್ಲ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್, ಎನ್.ಇ.ಎಫ್.ಟಿ, ಎಟಿಎಂ, ರೂಪೇ ಕಾರ್ಡ್, ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್, ಯುಪಿಐ, ಸಿಟಿಎಸ್ ಕ್ಲಿಯರಿಂಗ್, ಎಸ್.ಎಂಎಸ್ ಅಲರ್ಟ್, ಪಿಒಎಸ್ ಮಶೀನ್ ಮುಂತಾದ ನವೀನ ಗ್ರಾಹಕಸ್ನೇಹಿ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ ಎಂದು ಹೇಳಿದ್ದಾರೆ.
ಕಳೆದ ಸಾಲಿನಲ್ಲಿ ಬ್ಯಾಂಕು ಮಂಗಳೂರು, ಗದಗ, ಧಾರವಾಡ, ಸಿದ್ದಾಪುರದಲ್ಲಿ ೪ ನೂತನ ಶಾಖೆಗಳನ್ನು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯನ್ನು ಬ್ಯಾಂಕು ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಜಯದೇವ ಯು. ನಿಲೇಕಣಿ, ಉಪಾಧ್ಯಕ್ಷ ಸಂತೋಷ ಎಸ್. ಪಂಡಿತ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್ ಅವರೊಂದಿಗೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.