ಮೆಕ್ಕಾ ಬಳಿ ಬಸ್‌ ದುರಂತ: ಕನ್ನಡಿಗ ಸೇರಿ 41 ಜನ ಬಲಿ

| Published : Nov 18 2025, 12:30 AM IST

ಸಾರಾಂಶ

ಪವಿತ್ರ ಮೆಕ್ಕಾ-ಮದೀನಾಗೆ ವಾರ್ಷಿಕ ಹಜ್‌ ಯಾತ್ರೆಗೆಂದು ಹೋಗಿದ್ದ ಹುಬ್ಬಳ್ಳಿಯ ಯಾತ್ರಿಕ ಅಬ್ದುಲ್ ಗನಿ ಶಿರಹಟ್ಟಿ ಎಂಬುವರು ಸೇರಿ 45 ಭಾರತೀಯ ಯಾತ್ರಿಕರು ಬಸ್‌-ಟ್ಯಾಂಕರ್ ಡಿಕ್ಕಿಯಿಂದಾಗಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸಜೀವ ದಹನಗೊಂಡ ಘಟನೆ ಸೌದಿ ಅರೇಬಿಯಾದಲ್ಲಿ ಸೋಮವಾರ ನಸುಕಿನಲ್ಲಿ ಘಟಿಸಿದೆ.

- ಟ್ಯಾಂಕರ್‌ಗೆ ಬಸ್‌ ಡಿಕ್ಕಿಯಾಗಿ ಎಲ್ಲ 41 ಜನ ಸಜೀವ ದಹನ- ಮೆಕ್ಕಾ ಯಾತ್ರೆ ಮುಗಿಸಿ ಬರುವಾಗ ಘೋರ ದುರಂತ

---

ಹೈದ್ರಾಬಾದ್‌ನ ಒಂದೇ

ಕುಟುಂಬದ 18 ಮಂದಿ

ದುರಂತದಲ್ಲಿ ಸಾವು

ಮದೀನಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ಯಾತ್ರಿಕರಲ್ಲಿ 9 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 18 ಸದಸ್ಯರು ಸೇರಿದ್ದಾರೆ. ಹೈದರಾಬಾದ್ ಮೂಲದ ಈ ಕುಟುಂಬ ಇದಾಗಿದ್ದು ಇದರಲ್ಲಿ ಅಜ್ಜ, ಮಕ್ಕಳು, ಮೊಮ್ಮಕ್ಕಳು- ಹೀಗೆ 3 ತಲೆಮಾರಿನವರಿದ್ದಾರೆ. ಇವರನ್ನು ಕಳೆದುಕೊಂಡ ಬಂಧುಗಳು, ಸ್ನೇಹಿತರು ರೋದಿಸುತ್ತಿದ್ದಾರೆ.

---

ಒಬ್ಬ ಮಾತ್ರ ಪವಾಡಸದೃಶ ಬಚಾವ್

ಮದೀನಾ ಬಳಿ 45 ಭಾರತೀಯ ಹಜ್‌ ಯಾತ್ರಿಕರ ಸಾವಿಗೆ ಕಾರಣವಾದ ಭೀಕರ ಬಸ್ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾನೆ ಆತನ ಹೆಸರು ಹೈದರಾಬಾದ್‌ನ 24 ವರ್ಷದ ಮೊಹಮ್ಮದ್ ಅಬ್ದುಲ್ ಶೋಯೆಬ್. ಆತ ಚಾಲಕನ ಪಕ್ಕದಲ್ಲಿ ಕುಳಿತಿದ್ದ. ಅಪಘಾತದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

--

ಜೆಡ್ಡಾ/ಹೈದರಾಬಾದ್‌/ಹುಬ್ಬಳ್ಳಿ: ಪವಿತ್ರ ಮೆಕ್ಕಾ-ಮದೀನಾಗೆ ವಾರ್ಷಿಕ ಹಜ್‌ ಯಾತ್ರೆಗೆಂದು ಹೋಗಿದ್ದ ಹುಬ್ಬಳ್ಳಿಯ ಯಾತ್ರಿಕ ಅಬ್ದುಲ್ ಗನಿ ಶಿರಹಟ್ಟಿ ಎಂಬುವರು ಸೇರಿ 45 ಭಾರತೀಯ ಯಾತ್ರಿಕರು ಬಸ್‌-ಟ್ಯಾಂಕರ್ ಡಿಕ್ಕಿಯಿಂದಾಗಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸಜೀವ ದಹನಗೊಂಡ ಘಟನೆ ಸೌದಿ ಅರೇಬಿಯಾದಲ್ಲಿ ಸೋಮವಾರ ನಸುಕಿನಲ್ಲಿ ಘಟಿಸಿದೆ.

ಸೌದಿ ಅರೇಬಿಯಾದ ಮೆಕ್ಕಾ-ಮದೀನಾ ರಸ್ತೆಯಲ್ಲಿ ಯಾತ್ರಿಕರಿದ್ದ ಖಾಸಗಿ ಬಸ್‌ ಮತ್ತು ಟ್ಯಾಂಕರ್‌ ನಡುವೆ ಅಪಘಾತ ಸಂಭವಿಸಿದ ಈ ದುರಂತ ಸಂಭವಿಸಿದೆ.

ಘಟನೆ ಆಗಿದ್ದು ಹೇಗೆ?:

ಈ ಬಗ್ಗೆ ಮಾಹಿತಿ ನೀಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್, ‘ತೆಲಂಗಾಣದಿಂದ 54 ಜನ ನ.9ರಂದು ಜೆಡ್ಡಾಕ್ಕೆ ತೆರಳಿದ್ದರು. ಅವರಲ್ಲಿ 4 ಜನ ಪ್ರತ್ಯೇಕವಾಗಿ ಕಾರಿನಲ್ಲಿ ಮದೀನಾಕ್ಕೆ ತೆರಳಿದರೆ, ಉಳಿದವರು 50 ಬಸ್‌ನಲ್ಲಿ ತೆರಳಿದ್ದರು. ಈ 50ರಲ್ಲಿ 4 ಜನ ಮೆಕ್ಕಾದಲ್ಲಿಯೇ ಉಳಿದಿದ್ದರು. ಉಳಿದ 46 ಜನ ಮದೀನಾಗೆ ಬಸ್ಸಲ್ಲಿ ತೆರಳುತ್ತಿದ್ದರು. ಸೋಮವಾರ ಮುಂಜಾನೆ ಭಾರತೀಯ ಕಾಲಮಾನ 1.30ರ ಸುಮಾರಿಗೆ ಮದೀನಾದಿಂದ ಮರಳುವಾಗ 25 ಕಿ.ಮೀ. ದೂರದಲ್ಲಿ ಟ್ಯಾಂಕರ್‌ಗೆ ಬಸ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‌ ಹೊತ್ತಿ ಉರಿದಿದ್ದು, ಅದರಲ್ಲಿದ್ದ 45 ಜನ ಸಜೀವ ದಹನವಾಗಿದ್ದಾರೆ. ಒಬ್ಬ ಮಾತ್ರ ಬದುಕುಳಿದಿರುವುದಾಗಿ ತಿಳಿದುಬಂದಿದೆ. ತೆಲಂಗಾಣದಿಂದ ತೆರಳಿದವರೆಲ್ಲರೂ ನ.23ಕ್ಕೆ ಊರಿಗೆ ವಾಪಸಾಗಲಿದ್ದರು’ ಎಂದು ಹೇಳಿದ್ದಾರೆ.

ಓರ್ವ ಹುಬ್ಬಳ್ಳಿಯವ:

‘ಬಸ್ಸಿನಲ್ಲಿದ್ದ 46 ಜನರಲ್ಲಿ 43 ಮಂದಿ ಹೈದರಾಬಾದ್‌ನವರು, 2 ಮಂದಿ ಸೈಬರಾಬಾದ್‌ನವರು ಮತ್ತು ಒಬ್ಬರು ಕರ್ನಾಟಕದ ಹುಬ್ಬಳ್ಳಿಯವರು’ ಎಂದು ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ಜಂಟಿ ಪೊಲೀಸ್ ಆಯುಕ್ತ ತಫ್ಸೀರ್ ಇಕ್ಬಾಲ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಸಾವನ್ನಪ್ಪಿದ ಹುಬ್ಬಳ್ಳಿ ವ್ಯಕ್ತಿ ಅಬ್ದುಲ್ ಗನಿ ಶಿರಹಟ್ಟಿ ಎಂದು ಗೊತ್ತಾಗಿದೆ.

‘ಅಪಘಾತ ಸಂತ್ರಸ್ತ ಭಾರತೀಯ ಪ್ರಜೆಗಳು ಮತ್ತು ಅವರ ಕುಟುಂಬಗಳಿಗೆ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದ ದೂತಾವಾಸವು ಸಂಪೂರ್ಣ ಸಹಕಾರ ನೀಡುತ್ತಿದೆ. ನಮ್ಮ ಅಧಿಕಾರಿಗಳು ಸೌದಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮೋದಿ ಸೇರಿ ಗಣ್ಯರ ಸಂತಾಪ:

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ‘ಮದೀನಾ ದುರಂತದ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.