-ಉಗ್ರವಾದಕ್ಕೆ ಇಸ್ರೇಲ್‌ನಂತೆಯೇ ಶೂನ್ಯ ಸಹಿಷ್ಣುತೆ-26/11 ಮುಂಬೈ ದಾಳಿ, ಹಮಾಸ್ ದಾಳಿಗೆ ಖಂಡನೆ-ಇಸ್ರೇಲಲ್ಲಿ ಮೋದಿ ವಸುಧೈವ ಕುಟುಂಬಕಂ ಮಂತ್ರ-ಉಗ್ರನಿಗ್ರಹಕ್ಕೆ ಜಾಗತಿಕ ಕ್ರಮ ಅಗತ್ಯ: ಅಭಿಮತ-ಗಾಜಾ ಶಾಂತಿ ಉಪಕ್ರಮಕ್ಕೆ ಬೆಂಬಲ ಘೋಷಣೆ

ಜೆರುಸಲೆಂ: ಭಯೋತ್ಪಾದನೆ ಎಲ್ಲಿದ್ದರೂ ಅದು ಶಾಂತಿಗೆ ಧಕ್ಕೆ ತರುತ್ತದೆ. ಇಸ್ರೇಲ್‌ನಂತೆಯೇ ಭಾರತವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಇದರಲ್ಲಿ ಯಾವುದೇ ದ್ವಂದ್ವಗಳಿಲ್ಲ. ಉಗ್ರವಾದವನ್ನು ಎದುರಿಸಲು ನಿರಂತರ ಮತ್ತು ಸಂಘಟಿತವಾದ ಜಾಗತಿಕ ಕ್ರಮದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕರೆ ನೀಡಿದ್ದಾರೆ. ಅಲ್ಲದೆ, ಗಾಜಾ ಶಾಂತಿ ಒಪ್ಪಂದದಿಂದ ಗಾಜಾ ಮತ್ತು ಪ್ಯಾಲೆಸ್ತೀನ್‌ನಲ್ಲಿ ಪುನಃ ಶಾಂತಿ ಸ್ಥಾಪನೆ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2 ದಿನಗಳ ಇಸ್ರೇಲ್‌ ಪ್ರವಾಸದಲ್ಲಿರುವ ಮೋದಿ ಬುಧವಾರ ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿ, ‘26/11ರ ಮುಂಬೈ ದಾಳಿ ಮತ್ತು ಇಸ್ರೇಲಿ ನಾಗರಿಕರು ಸೇರಿದಂತೆ ಅಮಾಯಕ ಜೀವಗಳನ್ನು ಬಲಿಪಡೆದ ಘಟನೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇಸ್ರೇಲ್‌ನಂತೆಯೇ ಭಾರತವೂ ಭಯೋತ್ಪಾದನೆ ಕುರಿತು ಸ್ಥಿರ ಮತ್ತು ರಾಜಿಯಾಗದ ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದೆ. ಈ ಬಗ್ಗೆ ನಮ್ಮಲ್ಲಿ ಯಾವುದೇ ದ್ವಂದ್ವಗಳಿಲ್ಲ. ಉಗ್ರವಾದವನ್ನು ಎದುರಿಸಲು ನಿರಂತರ ಮತ್ತು ಸಂಘಟಿತ ಜಾಗತಿಕ ಕ್ರಮದ ಅಗತ್ಯವಿದೆ’ ಎಂದರು.‘ಯಾವುದೇ ಕಾರಣಕ್ಕೂ ನಾಗರಿಕರ ಹತ್ಯೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಉಗ್ರವಾದವು ಸಮಾಜಗಳನ್ನು ಅಸ್ಥಿರಗೊಳಿಸುವ, ಅಭಿವೃದ್ಧಿಯನ್ನು ತಡೆಯುವ ಮತ್ತು ನಂಬಿಕೆಯನ್ನು ಕಳೆದುಕೊಳ್ಳುವ ಗುರಿ ಹೊಂದಿದೆ. 2023ರ ಅ.7ರಂದು ಹಮಾಸ್ ನಡೆಸಿದ ಅನಾಗರಿಕ ಉಗ್ರದಾಳಿಯನ್ನು ಖಂಡಿಸುತ್ತೇನೆ. ನಿಮ್ಮ ನೋವನ್ನು ನಾವೂ ಅನುಭವಿಸುತ್ತೇವೆ, ನಿಮ್ಮ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ’ ಎಂದು ನುಡಿದರು.ಗಾಜಾ ಶಾಂತಿಗೆ ಬೆಂಬಲ: ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿದ ಗಾಜಾ ಶಾಂತಿ ಉಪಕ್ರಮ ಒಂದು ದಾರಿಯನ್ನು ಕಲ್ಪಿಸುತ್ತದೆ. ಭಾರತವು ಈ ಉಪಕ್ರಮಕ್ಕೆ ತನ್ನ ದೃಢ ಬೆಂಬಲವನ್ನು ವ್ಯಕ್ತಪಡಿಸಿದೆ. ಪ್ಯಾಲೆಸ್ಟೈನ್ ಸಮಸ್ಯೆಯನ್ನು ಪರಿಹರಿಸುವುದು ಸೇರಿದಂತೆ, ಈ ಪ್ರದೇಶದ ಎಲ್ಲಾ ಜನರಿಗೆ ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯ ಭರವಸೆಯನ್ನು ಬೆಂಬಲಿಸುತ್ತೇವೆ. ನಮ್ಮ ಎಲ್ಲಾ ಪ್ರಯತ್ನಗಳು ಬುದ್ಧಿವಂತಿಕೆ, ಧೈರ್ಯ ಮತ್ತು ಮಾನವೀಯತೆಯಿಂದ ಮುನ್ನಡೆಯಲಿ. ಶಾಂತಿಯ ಹಾದಿ ಯಾವಾಗಲೂ ಸುಲಭವಲ್ಲ, ಆದರೆ ಈ ಪ್ರದೇಶದಲ್ಲಿ ಸಂವಾದ, ಶಾಂತಿ ಮತ್ತು ಸ್ಥಿರತೆಗಾಗಿ ಭಾರತವು ನಿಮ್ಮೊಂದಿಗೆ ಮತ್ತು ಪ್ರಪಂಚದೊಂದಿಗೆ ಸದಾ ಇರುತ್ತದೆ’ ಎಂದರು.ವಸುಧೈವ ಕುಟುಂಬಕಂ ಮಂತ್ರ: ಭಾರತದ ವಿಶ್ವಭ್ರಾತೃತ್ವ ಪರಿಕಲ್ಪನೆ ಕುರಿತು ತಿಳಿಸಿದ ಮೋದಿ, ‘ಇಸ್ರೇಲ್‌ನಲ್ಲಿ ‘ತಿಕ್ಕುನ್ ಓಲಂ’ ತತ್ವವು ಜಗತ್ತಿಗೆ ಚೈತನ್ಯ ನೀಡುವ ಬಗ್ಗೆ ಹೇಳುತ್ತದೆ. ಭಾರತವು ಇದನ್ನೇ ‘ವಸುಧೈವ ಕುಟುಂಬಕಂ’ ಅಂದರೆ, ಜಗತ್ತೇ ಒಂದು ಕುಟುಂಬ ಎಂದು ದೃಢಪಡಿಸುತ್ತದೆ’ ಎಂದು ಹೇಳಿದರು.