ಎಐ ಪಿತಾಮಹರಾದ ಜಾನ್‌ ಹೋಪ್‌ಫೀಲ್ಡ್‌ ಮತ್ತು ಜೆಫ್ರಿ ಹಿಂಟನ್‌ಗೆ ಭೌತಶಾಸ್ತ್ರ ನೊಬೆಲ್‌

| Published : Oct 09 2024, 01:37 AM IST / Updated: Oct 09 2024, 07:56 AM IST

ಸಾರಾಂಶ

ಕೃತಕ ಬುದ್ಧಿಮತ್ತೆ ಪಿತಾಮಹರು ಎಂದು ಪ್ರಸಿದ್ಧಿ ಪಡೆದಿರುವ ಅಮೆರಿಕದ ಜಾನ್‌ ಹೋಪ್‌ಫೀಲ್ಡ್‌ ಮತ್ತು ಬ್ರಿಟಿಷ್‌- ಕೆನಡಾ ಪ್ರಜೆ ಜೆಫ್ರಿ ಹಿಂಟನ್‌ ಪ್ರಸಕ್ತ ಸಾಲಿನ ಪ್ರತಿಷ್ಠಿತ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸ್ಟಾಕ್‌ಹೋಮ್‌: ಕೃತಕ ಬುದ್ಧಿಮತ್ತೆ ಪಿತಾಮಹರು ಎಂದು ಪ್ರಸಿದ್ಧಿ ಪಡೆದಿರುವ ಅಮೆರಿಕದ ಜಾನ್‌ ಹೋಪ್‌ಫೀಲ್ಡ್‌ ಮತ್ತು ಬ್ರಿಟಿಷ್‌- ಕೆನಡಾ ಪ್ರಜೆ ಜೆಫ್ರಿ ಹಿಂಟನ್‌ ಪ್ರಸಕ್ತ ಸಾಲಿನ ಪ್ರತಿಷ್ಠಿತ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಘೋಷಣೆಯ ಎರಡನೇ ದಿನವಾದ ಮಂಗಳವಾರ ತೀರ್ಪುಗಾರರ ತಂಡ ಈ ಇಬ್ಬರು ವಿಜ್ಞಾನಿಗಳ ಹೆಸರನ್ನು ಘೋಷಿಸಿದೆ.

ಹೋಪ್‌ಫೀಲ್ಡ್‌ ಪ್ರಿನ್ಸ್‌ಟನ್‌ ವಿವಿಯಲ್ಲಿ ಮತ್ತು ಜೆಫ್ರಿ ಟೊರಂಟೋ ವಿವಿಯಲ್ಲಿ ಮಾಡಿದ ಕೃತಕ ಬುದ್ಧಿಮತ್ತೆ ಕುರಿತ ಸಂಶೋಧನೆಗಳು ಅವರಿಗೆ ವಿಶ್ವದ ಈ ಅತ್ಯುನ್ನತ ಗೌರವ ತಂದುಕೊಟ್ಟಿವೆ. ಪ್ರಶಸ್ತಿ 84 ಲಕ್ಷ ರು. ನಗದು ಮತ್ತು ಪಾರಿತೋಷಕ ಹೊಂದಿದೆ.

ಸಂಶೋಧನೆ ಏನು?:

ಈ ಇಬ್ಬರೂ ನಡೆಸಿದ ಸಂಶೋಧನೆಗಳು ಮಷಿನ್‌ ಲರ್ನಿಂಗ್‌ನ ತಳಪಾಯವಾಗಿ ಅದರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಭೌತಶಾಸ್ತ್ರದ ಅಂಶಗಳನ್ನು ಬಳಸಿ ಈ ಇಬ್ಬರೂ ಅಭಿವೃದ್ಧಿಪಡಿಸಿದ ವ್ಯವಸ್ಥೆಗಳು ಇಂದಿನ ಅತ್ಯಂತ ಶಕ್ತಿಶಾಲಿ ಮಷಿನ್‌ ಲರ್ನಿಂಗ್‌ಗೆ (ಆರ್ಟಿಫಿಷಿಯಲ್‌ ಇಂಟೆಲೆಜೆನ್ಸ್‌- ಕೃತಕ ಬುದ್ಧಿಮತ್ತೆ) ಅಡಿಪಾಯವಾಗಿ ಹೊರಹೊಮ್ಮಿವೆ. ಈ ಸಾಧನೆಗಳು ಅವರಿಗೆ ಪ್ರಶಸ್ತಿ ಸಲ್ಲುವಂತೆ ಮಾಡಿದೆ ಎಂದು ಆಯ್ಕೆ ಸಮಿತಿ ಹೇಳಿದೆ.

ಇಂದು ಕೆಮಿಸ್ಟ್ರಿ ನೊಬೆಲ್‌ ಘೋಷಣೆ

ಬುಧವಾರ ರಸಾಯನ ಶಾಸ್ತ್ರ, ಗುರುವಾರ ಸಾಹಿತ್ಯ, ಶುಕ್ರವಾರ ಶಾಂತಿ ಮತ್ತು ಅ.14ರ ಸೋಮವಾರ ಅರ್ಥಶಾಸ್ತ್ರ ನೊಬೆಲ್‌ ಪುರಸ್ಕಾರಗಳು ಪ್ರಕಟಗೊಳ್ಳಲಿವೆ. ಡಿ.10ರಂದು ನಡೆವ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ವಿತರಿಸಲಾಗುವುದು. ಅಮೆರಿಕದ ವಿಕ್ಟರ್‌ ಆ್ಯಂಬ್ರೋಸ್‌ ಮತ್ತು ಗ್ಯಾರಿ ರುವ್ಕುನ್‌ ಅವರಿಗೆ ಸೋಮವಾರ ವೈದ್ಯಕೀಯ ನೊಬೆಲ್‌ ಪುರಸ್ಕಾರ ಪ್ರಕಟಿಸಲಾಗಿತ್ತು.