5 ದಶಕಗಳ ಹಿಂದೆ ಚೀನಾದಲ್ಲಿ ಮಿತಿಮೀರಿ ವೃದ್ಧಿಸುತ್ತಿದ್ದ ಜನಸಂಖ್ಯೆಗೆ ಕಡಿವಾಣ ಹಾಕುವ ಸಲುವಾಗಿ ‘ಒಂದು ಮಗು ನೀತಿ’ಯನ್ನು ರೂಪಿಸಿದ್ದ ಅಧಿಕಾರಿ ಪೆಂಗ್ ಪೆಯುನ್ (95) ನಿಧನರಾಗಿದ್ದಾರೆ.
ಬೀಜಿಂಗ್: 5 ದಶಕಗಳ ಹಿಂದೆ ಚೀನಾದಲ್ಲಿ ಮಿತಿಮೀರಿ ವೃದ್ಧಿಸುತ್ತಿದ್ದ ಜನಸಂಖ್ಯೆಗೆ ಕಡಿವಾಣ ಹಾಕುವ ಸಲುವಾಗಿ ‘ಒಂದು ಮಗು ನೀತಿ’ಯನ್ನು ರೂಪಿಸಿದ್ದ ಅಧಿಕಾರಿ ಪೆಂಗ್ ಪೆಯುನ್ (95) ನಿಧನರಾಗಿದ್ದಾರೆ. ಇವರ ಅಗಲಿಕೆಗೆ ಚೀನಾ ಸರ್ಕಾರ ಸಂತಾಪ ವ್ಯಕ್ತಪಡಿಸಿದೆ. ಆದರೆ ಜನರಿಂದ ಮಾತ್ರ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
1970-80ರ ಸಮಯದಲ್ಲಿ ಚೀನಿ ಮಹಿಳೆಯರ ಫಲವತ್ತತೆಯ ದರ ಸರಿಸುಮಾರು 4-5
1970-80ರ ಸಮಯದಲ್ಲಿ ಚೀನಿ ಮಹಿಳೆಯರ ಫಲವತ್ತತೆಯ ದರ ಸರಿಸುಮಾರು 4-5 (ಒಬ್ಬ ಮಹಿಳೆಗೆ 4ರಿಂದ 5 ಮಕ್ಕಳು) ಇತ್ತು. ಇದರಿಂದಾಗಿ ಜನಸಂಖ್ಯೆ ಸ್ಫೋಟವಾಗಿ, ನಾಗರಿಕರ ಅಗತ್ಯ ಪೂರೈಸಲು ಸರ್ಕಾರ ಅಶಕ್ತವಾಯಿತು. ಆರ್ಥಿಕ ಬೆಳವಣಿಗೆ ಕುಂಠಿತವಾಗಲು ಕಾರಣವಾಯಿತು.
ಇಂತಹ ಪರಿಸ್ಥಿತಿಯಲ್ಲಿ ಪೆಂಗ್, 1979ರಲ್ಲಿ ಒಂದು ಮಗು ನೀತಿ ಪರಿಚಯಿಸಿದರು. ಇದರನ್ವಯ ಪ್ರತಿ ದಂಪತಿ ಕೇವಲ 1 ಮಗುವನ್ನು ಹೊಂದಬಹುದಾಗಿತ್ತು. ಈ ನಿಯಮ 1980ರಿಂದ ಜಾರಿಗೆ ಬಂತು. ಇದರೊಂದಿಗೆ ಚೀನಾ, ಜನಸಂಖ್ಯಾ ನಿಯಂತ್ರಣಕ್ಕೆ ಇಂತಹ ಕ್ರಮ ಕೈಗೊಂಡ ವಿಶ್ವದಲ್ಲೇ ಮೊದಲ ರಾಷ್ಟ್ರ ಎನಿಸಿಕೊಂಡಿತು.
ತಣಿಯದ ಆಕ್ರೋಶ:
ಅಂದು ಚೀನಾದ ಜನಸಂಖ್ಯೆಯನ್ನು ಹಳಿಗೆ ತರಲು ಸಹಕರಿಸಿದ್ದ ನೀತಿಯ ಅಡ್ಡಪರಿಣಾಮಗಳು ನಂತರದ ವರ್ಷಗಳಲ್ಲಿ ಅನುಭವಕ್ಕೆ ಬರತೊಡಗಿದವು. ವರ್ಷ ಕಳೆದಂತೆ ದೇಶದಲ್ಲಿ ಯುವಕರ ಸಂಖ್ಯೆ ತಗ್ಗಿ, ಮುದುಕರೇ ತುಂಬಿಕೊಂಡರು. ಇದಕ್ಕೆಲ್ಲ ದಶಕಗಳ ಹಿಂದಿನ ಒಂದು ಮಗು ನೀತಿಯೇ ಕಾರಣವಾಗಿದ್ದರಿಂದ, ಜನರಲ್ಲಿ ಆ ಬಗ್ಗೆ ಅಸಮಾಧಾನವಿದೆ. ಇದು, ಪೆಂಗ್ ಅವರ ನಿಧನದೊಂದಿಗೆ ಮತ್ತೆ ಭುಗಿಲೆದ್ದಿದೆ. ಚೀನಾದ ಸಾಮಾಜಿಲ ಜಾಲತಾಣಗಳಲ್ಲಿ ಅವರನ್ನು ‘ದುಷ್ಟೆ, ನೀಚ ಮಹಿಳೆ’ ಎಂದೆಲ್ಲಾ ಬೈಯ್ಯುತ್ತಿರುವ ಜನ, ‘ಪೆಂಗ್‌ರ ನೀತಿಯಿಂದ ನಮ್ಮ ಪೋಷಕರು ಬಹಳ ನರಳಿದರು, ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿಕೊಂಡರು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

