ಹಾಲ್‌ ಮಾರ್ಕಿಂಗ್‌ಗೆ ನೀಡಿದ್ದ 1.2 ಕೆ.ಜಿ. ಚಿನ್ನಾಭರಣ ವಂಚನೆ: ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ನಿಂದ ದೂರು

KannadaprabhaNewsNetwork | Published : Jan 22, 2025 1:45 AM

ಸಾರಾಂಶ

ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಮಾಲೀಕತ್ವದ ‘ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌’ ಚಿನ್ನದ ಅಂಗಡಿಯಿಂದ ಹಾಲ್‌ ಮಾರ್ಕ್‌ ಹಾಕಲು ಪಡೆದಿದ್ದ 1.2 ಕೆಜಿ ಚಿನ್ನಾಭರಣಗಳನ್ನು ವಾಪಸ್‌ ನೀಡದೆ ವಂಚಿಸಿದ ಆರೋಪದಡಿ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಮಾಲೀಕತ್ವದ ‘ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌’ ಚಿನ್ನದ ಅಂಗಡಿಯಿಂದ ಹಾಲ್‌ ಮಾರ್ಕ್‌ ಹಾಕಲು ಪಡೆದಿದ್ದ 1.2 ಕೆಜಿ ಚಿನ್ನಾಭರಣಗಳನ್ನು ವಾಪಸ್‌ ನೀಡದೆ ವಂಚಿಸಿದ ಆರೋಪದಡಿ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವನಗುಡಿ ಡಿವಿಜಿ ರಸ್ತೆಯ ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ ಚಿನ್ನದಂಗಡಿ ಮ್ಯಾನೇಜರ್‌ ಭೀಮರಾಜು ನೀಡಿದ ದೂರಿನ ಮೇರೆಗೆ ನಗರ್ತಪೇಟೆ ಕೆಂಪಣ್ಣ ಲೇನ್‌ನ ‘ಕೊನಾರ್ಕ್‌ ಹಾಲ್‌ ಮಾರ್ಕಿಂಗ್‌ ಆ್ಯಂಡ್‌ ಅಸೆಸಿಂಗ್‌ ಸೆಂಟರ್‌’ ಮಾಲೀಕ ಭರತ್‌ ಚಾಟೆಡ್‌ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ ಚಿನ್ನದಂಗಡಿ ಮ್ಯಾನೇಜರ್‌ ಭೀಮರಾಜು ಅವರು ಜ.14ರಂದು 1 ಕೆ.ಜಿ. 250 ಗ್ರಾಂ ತೂಕದ ಚಿನ್ನಾಭರಣಗಳಿಗೆ ಹಾಲ್‌ ಮಾರ್ಕ್‌ ಹಾಕಿಸಲು ತಮ್ಮ ಸಂಸ್ಥೆಯ ನೌಕರ ಭರತ್‌ ಕುಮಾರ್‌ ರಾವಲ್‌ಗೆ ನೀಡಿದ್ದಾರೆ. ಅದರಂತೆ ಭರತ್‌ ಕುಮಾರ್‌ ಆ ಚಿನ್ನಾಭರಣಗಳನ್ನು ನಗರ್ತಪೇಟೆ ಕೆಂಪಣ್ಣ ಲೇನ್‌ನ ‘ಕೊನಾರ್ಕ್‌ ಹಾಲ್‌ ಮಾರ್ಕಿಂಗ್‌ ಆ್ಯಂಡ್‌ ಅಸೆಸಿಂಗ್‌ ಸೆಂಟರ್‌’ ಮಾಲೀಕ ಭರತ್‌ ಚಾಟೆಡ್‌ಗೆ ನೀಡಿ ರಶೀದಿ ಪಡೆದಿದ್ದಾರೆ.

ಬಳಿಕ ಭರತ್‌ ಕುಮಾರ್‌ ಜ.15ರಂದು ಭರತ್‌ ಚಾಟೆಡ್‌ ಬಳಿ ಹೋಗಿ ಹಾಲ್‌ ಮಾರ್ಕಿಂಗ್‌ಗೆ ನೀಡಲಾಗಿದ್ದ ಚಿನ್ನಾಭರಣ ವಾಪಾಸ್‌ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಭರತ್‌ ಚಾಟೆಡ್‌, ತನ್ನ ಕೆಲಸಗಾರ ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಭರತ್‌ ಚಾಟೆಡ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಭೀಮರಾಜು ದೂರು ನೀಡಿದ್ದಾರೆ.

ಮತ್ತೊಂದೆಡೆ ಕೊನಾರ್ಕ್‌ ಹಾಲ್‌ ಮಾರ್ಕಿಂಗ್‌ ಆ್ಯಂಡ್‌ ಅಸೆಸಿಂಗ್‌ ಸೆಂಟರ್‌ ಮಾಲೀಕ ಭರತ್‌ ಚಾಟೆಡ್‌ ಚಿನ್ನಾಭರಣ ಕದ್ದು ಪರಾರಿಯಾಗಿರುವ ತನ್ನ ಕೆಲಸಗಾರನ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share this article