ಒಣ ಕಸ ಮಾರಾಟದಿಂದ ₹ 1.80 ಕೋಟಿ ಆದಾಯ !

KannadaprabhaNewsNetwork |  
Published : Mar 03, 2026, 03:15 AM ISTUpdated : Mar 03, 2026, 04:22 AM IST
Money

ಸಾರಾಂಶ

ನಗರದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಪ್ಲಾಸ್ಟಿಕ್, ಪೇಪರ್, ಬಟ್ಟೆ ಒಳಗೊಂಡ ಒಣ ಕಸವನ್ನು ದಾಲ್ಮಿಯಾ ಸಿಮೆಂಟ್ಸ್‌ಗೆ ಮಾರಾಟ ಮಾಡುವ ಮೂಲಕ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು 1.80 ಕೋಟಿ ರು. ವರೆಗೆ ಆದಾಯ ಗಳಿಸಿದೆ ಎಂದು ನಿಯಮಿತ ಸಿಇಒ ಕರೀಗೌಡ ತಿಳಿಸಿದ್ದಾರೆ.

  ಬೆಂಗಳೂರು :  ನಗರದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಪ್ಲಾಸ್ಟಿಕ್, ಪೇಪರ್, ಬಟ್ಟೆ ಒಳಗೊಂಡ ಒಣ ಕಸವನ್ನು (ರೆಫ್ಯೂಸ್ಡ್‌ ಡಿರೈವ್ಡ್ ಫ್ಯೂಲ್) ದಾಲ್ಮಿಯಾ ಸಿಮೆಂಟ್ಸ್‌ಗೆ ಮಾರಾಟ ಮಾಡುವ ಮೂಲಕ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು 1.80 ಕೋಟಿ ರು. ವರೆಗೆ ಆದಾಯ ಗಳಿಸಿದೆ ಎಂದು ನಿಯಮಿತ ಸಿಇಒ ಕರೀಗೌಡ ತಿಳಿಸಿದ್ದಾರೆ.

ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಈ ಮೊದಲು ಪ್ಲಾಸ್ಟಿಕ್ ಕಸವನ್ನು ಲ್ಯಾಂಡ್ ಫಿಲ್‌ಗಳಲ್ಲಿ ಸುರಿಯಲಾಗುತ್ತಿತ್ತು ಹಾಗೂ ಸ್ವಲ್ಪ ಪ್ರಮಾಣದಲ್ಲಿ ಸ್ಥಳೀಯವಾಗಿ ವಿದ್ಯುತ್ ಉತ್ಪದನಾ ಘಟಕಗಳಲ್ಲಿ ಬಳಸಲಾಗುತ್ತಿತ್ತು. ಆದರೆ, ಕಳೆದ ವರ್ಷ ದಾಲ್ಮಿಯಾ ಕಂಪನಿ ಜೊತೆಗೆ ಒಪ್ಪಂದದಿಂದಾಗಿ ಬೆಂಗಳೂರಿನ ಕಸ ಆದಾಯ ತರುತ್ತಿದೆ ಎಂದರು.

ನಗರದಲ್ಲಿ ಪ್ರತಿನಿತ್ಯ ಸುಮಾರು 520 ಮೆಟ್ರಿಕ್ ಟನ್ ಆರ್‌ಡಿಎಫ್‌ ಸಂಗ್ರವಾಗುತ್ತಿದೆ. ಸೆ.9 ರಿಂದ ಫೆ.26ರ ವರೆಗೆ ದಾಲ್ಮಿಯಾ ಸಿಮೆಂಟ್ಸ್‌ಗೆ 18,625 ಮೆಟ್ರಿಕ್ ಟನ್ ಒಣಕಸ ರವಾನಿಸಲಾಗಿದೆ. ಅದಕ್ಕೆ ಪ್ರತಿಯಾಗಿ ದಾಲ್ಮಿಯಾ ಸಿಮೆಂಟ್ಸ್ 3,600 ‘ಎಕ್ಸ್‌ಟೆಂಡೆಡ್ ಪ್ರೊಡ್ಯುಸರ್ ರೆಸ್ಪಾನ್ಸಿಬಿಲಿಟಿ’ (ಇಪಿಆರ್) ಕ್ರೆಡಿಟ್ಸ್‌ಗಳನ್ನು ಬಿಎಸ್‌ಡಬ್ಲ್ಯುಎಂಎಲ್‌ಗೆ ನೀಡಿದೆ. ಇವುಗಳನ್ನು ಮಾರಾಟ ಮಾಡುವ ಮೂಲಕ 54 ಲಕ್ಷ ರು.ಯಿಂದ 1.80 ಕೋಟಿ ರು.ವರೆಗೆ ಆದಾಯ ಬರುತ್ತದೆ. ಇದರಿಂದ ಒಣತ್ಯಾಜ್ಯದ ಉತ್ತಮ ನಿರ್ವಹಣೆ ಸಾಧ್ಯವಾಗಲಿದೆ ಎಂದು ಕರೀಗೌಡ ತಿಳಿಸಿದರು.

ನಗರದಲ್ಲಿ ಪ್ರತಿದಿನ ಸರಾಸರಿ 6,000 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಸುಮಾರು 520 ಮೆಟ್ರಿಕ್ ಟನ್ ಆರ್‌ಡಿಎಫ್‌ ಇದೆ. ಈ ಪ್ರಮಾಣವನ್ನು 1,000 ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಕಸವನ್ನು ದಾಲ್ಮಿಯಾ ಸಿಮೆಂಟ್‌ಗೆ ಮಾರಾಟ ಮಾಡಬಹುದಾಗಿದೆ. ಹೀಗಾಗಿ, ನಾಗರಿಕರು ಸೂಕ್ತ ರೀತಿಯಲ್ಲಿ ಕಸವನ್ನು ವಿಂಗಡಿಸಿ ನೀಡಿದರೆ ಒಣ ಕಸವು ಇಂಧನಕ್ಕೆ ಹಾಗೂ ಹಸಿ ಕಸ ಗೊಬ್ಬರ ಉತ್ಪಾದನೆಗೆ ಬಳಕೆಯಾಗುತ್ತದೆ. ಈ ಮೂಲಕ ನಗರದ ಕಸದ ಸಮಸ್ಯೆ ಪರಿಹಾರವಾಗಿ ನಿರ್ವಹಣೆಯು ಉತ್ತಮಗೊಳ್ಳುತ್ತದೆ ಎಂದು ಕರೀಗೌಡ ಹೇಳಿದರು.

ಆರ್‌ಡಿಎಫ್‌ ಹೆಚ್ಚಳ: 

 2025ರ ಅಕ್ಟೋಬರ್‌ಗೆ ಮೊದಲು ಒಟ್ಟಾರೆ ಕಸದಲ್ಲಿ ಆರ್‌ಡಿಎಫ್‌ ಕಸದ ಪಾಲು 10 ಮೆಟ್ರಿಕ್ ಟನ್ ಮಾತ್ರ ಇತ್ತು. ಜಾಗೃತಿ ಕಾರ್ಯಕ್ರಮಗಳು ಹಾಗೂ ಕಟ್ಟುನಿಟ್ಟಿನ ಕ್ರಮಗಳ ಫಲವಾಗಿ ಇದು 520 ಮೆ. ಟನ್‌ಗೆ ಏರಿಕೆಯಾಗಿದೆ ಎಂದು ಕರೀಗೌಡ ತಿಳಿಸಿದರು.

ಸ್ವಚ್ಛ ಸರ್ವೇಕ್ಷಣೆಗೆ ರಾಯಭಾರಿಗಳಾಗಿ ಮಂಜಮ್ಮ ಜೋಗತಿ, ನಟ ಅನಿರುದ್ಧ:

ಸ್ವಚ್ಛ ಸರ್ವೇಕ್ಷಣ ಅಭಿಯಾನದ ಭಾಗವಾಗಿ ನಾಗರಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ, ನಟ ಅನಿರುದ್ಧ ಜಟ್ಕರ್ ಹಾಗೂ ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ಅವರನ್ನು ರಾಯಭಾರಿಗಳಾಗಿ ನೇಮಿಸಲಾಗುತ್ತಿದೆ. ಮಾ.9ರಂದು ಟೌನ್‌ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

₹60 ಲಕ್ಷ ದಂಡದ ಹಣದಿಂದ ಟ್ರ್ಯಾಕ್ಟರ್ ಖರೀದಿ:

ರಸ್ತೆ ಬದಿ ಕಸ ಬಿಸಾಡುವ ಹಾಗೂ ಕಸ ವಿಂಗಡಿಸದೆ ನೀಡುವವರಿಂದ ಪ್ರತಿ ತಿಂಗಳು ನಗರದಲ್ಲಿ ಸರಾಸರಿ 60 ಲಕ್ಷ ರು. ದಂಡ ಸಂಗ್ರಹಿಸಲಾಗುತ್ತಿದೆ. ಈ ದಂಡದ ಹಣದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಟ್ರ್ಯಾಕ್ಟರ್ ಖರೀದಿಸಲಾಗುತ್ತಿದೆ. ಈ ಟ್ರ್ಯಾಕ್ಟರ್‌ಗಳ ಮೂಲಕ ತ್ಯಾಜ್ಯ ತೆರವುಗೊಳಿಸಲಾಗುತ್ತಿದೆ. ಕಳೆದ 3 ತಿಂಗಳಲ್ಲಿ 6,000 ಮೆಟ್ರಿಕ್ ಟನ್‌ಕ್ಕಿಂತ ಹೆಚ್ಚು ಬಲ್ಕ್ ವೇಸ್ಟ್ ಸಂಗ್ರಹಿಸಲಾಗಿದೆ ಎಂದು ಕರೀಗೌಡ ತಿಳಿಸಿದರು.

ನಗರದ ಒಣಕಸ ಆದಾಯ ತರುತ್ತಿದೆ. ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿಯುತವಾಗಿ ಕಸವನ್ನು ವಿಂಗಡಿಸಿ ನೀಡಿದರೆ ನಗರದ ಕಸದ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಪರಿಹಾರವಾಗುತ್ತದೆ.

- ಕರೀಗೌಡ, ಸಿಇಒ, ಬಿಎಸ್‌ಡಬ್ಲ್ಯುಎಂಎಲ್‌

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

28 ಪ್ರಮುಖ ಮುಖಂಡರೊಂದಿಗೆ ಸುದೀರ್ಘ ಮಾತುಕತೆ : ಎಚ್‌.ಡಿ.ಕುಮಾರಸ್ವಾಮಿ ಮಹತ್ವದ ಸೂಚನೆ
ಶೂಟಿಂಗ್‌ಗೆಂದು ಪೊಲೀಸ್ ಸಮವಸ್ತ್ರ ಖರೀದಿಸಿದ್ದ ಪೆರೋಲ್‌ ಕೈದಿಯಿಂದ ದರೋಡೆ