ಭಾರತೀಯ ಅಂಚೆ ಮೂಲಕ ತರಿಸಿಕೊಂಡಿದ್ದ ₹21.17 ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತು ಜಪ್ತಿ!

KannadaprabhaNewsNetwork |  
Published : Oct 19, 2024, 01:36 AM ISTUpdated : Oct 19, 2024, 04:52 AM IST
ಡ್ರಗ್ಸ್ | Kannada Prabha

ಸಾರಾಂಶ

ದುಷ್ಕರ್ಮಿಗಳು ವಿದೇಶಗಳಿಂದ ಭಾರತೀಯ ಅಂಚೆ ಮೂಲಕ ನಗರಕ್ಕೆ ತರಿಸಿಕೊಂಡಿದ್ದ ₹21.17 ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ದುಷ್ಕರ್ಮಿಗಳು ವಿದೇಶಗಳಿಂದ ಭಾರತೀಯ ಅಂಚೆ ಮೂಲಕ ನಗರಕ್ಕೆ ತರಿಸಿಕೊಂಡಿದ್ದ ₹21.17 ಕೋಟಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

28 ಕೆ.ಜಿ. ಹೈಡ್ರೋ ಗಾಂಜಾ, 2,569 ಎಲ್‌ಎಸ್‌ಡಿ, 1 ಕೆ.ಜಿ. 618 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌, 11,908 ಎಕ್ಸ್‌ಟೆಸಿ ಮಾತ್ರೆಗಳು, 770 ಗ್ರಾಂ ಹೆರಾಯಿನ್‌, 102 ಗ್ರಾಂ ಕೊಕೇನ್‌, 6 ಕೆ.ಜಿ.280 ಗ್ರಾಂ ಆಮ್‌ಫಿಟಮೈನ್‌, 336 ಗ್ರಾಂ ಚರಸ್‌, 1 ಕೆ.ಜಿ. 217 ಗ್ರಾಂ ಗಾಂಜಾ ಎಣ್ಣೆ, 445 ಗ್ರಾಂ ಮೆಥಾಕ್ಸಿನ್‌, 11 ಇ-ಸಿಗರೇಟ್‌, 102 ಎಂಎಲ್‌ ನಿಕೋಟಿನ್‌, 400 ಗ್ರಾಂ ಟೊಬ್ಯಾಕೋ ಸೇರಿದಂತೆ ಇತರೆ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

606 ಪಾರ್ಸೆಲ್‌ಗಳಲ್ಲಿ ಮಾದಕವಸ್ತುಗಳು:

ಚಾಮರಾಜಪೇಟೆ ಫಾರಿನ್‌ ಫೋಸ್ಟ್‌ ಆಫೀಸ್‌ಗೆ ಯು.ಎಸ್‌., ಯು.ಕೆ., ಬೆಲ್ಜಿಯಂ, ಥೈಲ್ಯಾಂಡ್‌, ನೆದರ್‌ ಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಿಂದ 3,500 ಅನುಮಾನಾಸ್ಪದ ಪಾರ್ಸೆಲ್‌ಗಳು ಬಂದಿದ್ದವು. ಈ ಸಂಬಂಧ ಫೋಸ್ಟ್‌ ಆಫೀಸ್‌ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಶ್ವಾನದಳದೊಂದಿಗೆ ಈ ಪಾರ್ಸೆಲ್‌ಗಳನ್ನು ಪರಿಶೀಲಿಸಿದ್ದಾರೆ. ಈ ಪೈಕಿ 606 ಅನುಮಾನಾಸ್ಪದ ಪಾರ್ಸೆಲ್‌ಗಳಲ್ಲಿ ಮಾದಕ ವಸ್ತುಗಳು ಇರುವುದು ಕಂಡು ಬಂದಿತ್ತು. ಈ ಸಂಬಂಧ ನ್ಯಾಯಾಲಯದಿಂದ ಅನುಮತಿ ಪಡೆದು ₹21.17 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿಗಳ ಪತ್ತೆಗೆ ತನಿಖೆ

ಆರೋಪಿಗಳು ಭಾರತೀಯ ಅಂಚೆ ಮೂಲಕ ಯು.ಎಸ್, ಯು.ಕೆ. ಬೆಲ್ಜಿಯಂ ಸೇರಿದಂತೆ ವಿವಿಧ ದೇಶಗಳಿಂದ ನಿಷೇಧಿತ ಮಾದಕವಸ್ತುಗಳನ್ನು ನಗರಕ್ಕೆ ತರಿಸಿಕೊಂಡು ಬಳಿಕ ಹೆಚ್ಚಿನ ಬೆಲೆಗೆ ಪರಿಚಿತ ವ್ಯಕ್ತಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿದೇಶಗಳಿಂದ ಈ ಪಾರ್ಸೆಲ್‌ ತರಿಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೋಡಗಿದ್ದ ವಿದೇಶಿ ಮಹಿಳೆಯರಿಬ್ಬರ ಬಂಧನ