ಬೆಂಗಳೂರು : ಆನ್‌ಲೈನ್ ಪೋರ್ಟರ್ ಲಾಜಿಸ್ಟಿಕ್ ಕಂಪನಿ ಆ್ಯಪ್‌ನಲ್ಲಿ ನಕಲಿ ಆರ್ಡರ್ ಬುಕ್ ಮಾಡಿ ಬಳಿಕ ರದ್ದುಗೊಳಿಸುವ ಮುಖಾಂತರ ಪೋರ್ಟರ್ ಕಂಪನಿಗೆ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಹಿರಿಸಾವೆ ನಿವಾಸಿ ಚಾಲಕ ಟಿ.ಎಲ್. ಶ್ರೇಯಸ್ (29), ಕೆ.ಜಿ.ನಗರದ ಚಾಲಕ ಕೆ.ಎಸ್. ಕೌಶಿಕ್ (26), ಮಂಡ್ಯದ ಡೆಲಿವರಿ ಬಾಯ್ ಪಿ.ಆರ್. ರಂಗನಾಥ್ (26) ಮತ್ತು ಮದ್ದೂರಿನ ಆಟೋ ಚಾಲಕ ಆನಂದ್ ಕುಮಾರ್ (30) ಬಂಧಿತರು.
ಆರೋಪಿಗಳು ಆಡುಗೋಡಿ ಲಕ್ಕಸಂದ್ರದ ‘ಸ್ಮಾರ್ಟ್ ಶಿಫ್ಟ್ ಲಾಜಿಸ್ಟಿಕ್ಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ‘ಪೋರ್ಟರ್’ ಅಪ್ಲಿಕೇಷನ್ ಬಳಸಿಕೊಂಡು ನಕಲಿ ಕಸ್ಟಮರ್ ಐಡಿ ಮತ್ತು ಚಾಲಕರ ಐಡಿ ಸೃಷ್ಟಿಸಿಕೊಂಡು ಕಳೆದ 8 ತಿಂಗಳಲ್ಲಿ 90 ಲಕ್ಷ ರು. ವಂಚಿಸಿದ್ದರು. ಈ ಸಂಬಂಧ ಪೋರ್ಟರ್ ಕಂಪನಿ ಅಸಿಸ್ಟೆಂಟ್ ಮ್ಯಾನೇಜರ್ ಕಿಶೋರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಫೇಕ್ ಪೋರ್ಟರ್ ಡ್ರೈವರ್ ಐಡಿ ಸೃಷ್ಟಿ:
ಆರೋಪಿಗಳು ‘ಸ್ಮಾರ್ಟ್ ಶಿಫ್ಟ್ ಲಾಜಿಸ್ಟಿಕ್ಸ್ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್’ ಕಂಪನಿಯ ‘ಪೋರ್ಟರ್’ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಚಾಲಕರು ಕಡಿಮೆ ಇರುವ ಸ್ಥಳದಲ್ಲಿ ಫೇಕ್ ಡ್ರೈವರ್ ಐಡಿಗಳನ್ನು ಸೃಷ್ಟಿಸುತ್ತಿದ್ದರು. ಬಳಿಕ ಜಿಯೋ ಸ್ಫೂಫಿಂಗ್ ಬಳಸಿಕೊಂಡು ದೂರದ ಸ್ಥಳಗಳಲ್ಲಿ ಗ್ರಾಹಕರ ಸೋಗಿನಲ್ಲಿ ಆರ್ಡರ್ ಬುಕ್ ಮಾಡುತ್ತಿದ್ದರು. ಬಳಿಕ ತಾವೇ ಗ್ರಾಹಕರ ವ್ಯಾಲೆಟ್‌ನಿಂದ ಚಾಲಕನ ಬ್ಯಾಂಕ್ ಖಾತೆಗೆ ಹಣ ಪಾವತಿಸಿ, ತಮಗೆ ಆರ್ಡರ್ ಬೀಳುವಂತೆ ಮಾಡುತ್ತಿದ್ದರು.
ಒಂದೇ ಕಡೆ ನಿಂತು ಸ್ಟಾರ್ಟ್-ಎಂಡ್:
ಫೇಕ್ ಜಿಯೋ ಸ್ಫೂಫಿಂಗ್ ಆ್ಯಪ್ ಮುಖಾಂತರ ಟ್ರಿಪ್ ಸ್ಟಾರ್ಟ್ ಮಾಡಿ ಅಲ್ಲೇ ಎಂಡ್ ಮಾಡುತ್ತಿದ್ದರು. ಬಳಿಕ ಚಾಲಕನ ಪೋರ್ಟರ್ ವ್ಯಾಲೆಟ್‌ಗೆ ಹಣ ಬರುತ್ತಿದ್ದಂತೆ ಆ ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಬಳಿಕ ಫೇಕ್ ಗ್ರಾಹಕರ ಪೋರ್ಟರ್ ಆರ್ಡರ್ ಅನ್ನು ಪೂರ್ಣಗೊಳಿಸದೆ ಟ್ರಿಪ್ ಮುಕ್ತಾಯಗೊಳಿಸುತ್ತಿದ್ದರು. ಟ್ರಿಪ್ ಮುಕ್ತಾಯವಾಗದ ಹಿನ್ನೆಲೆ ಪೋರ್ಟರ್ ಕಂಪನಿ ಗ್ರಾಹಕನಿಗೆ ಹಣ ವಾಪಸ್ ನೀಡುತ್ತಿತ್ತು. ಈ ಹಣವನ್ನು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದರು.
ಆರೋಪಿಗಳು ಪೋರ್ಟರ್ ಕಂಪನಿಗೆ ವಂಚಿಸುವ ಉದ್ದೇಶದಿಂದ ಕೆಲ ಬೈಕ್‌ಗಳ ನೋಂದಣಿ ಸಂಖ್ಯೆಗಳನ್ನು ಪೋರ್ಟರ್ ಆ್ಯಪ್‌ಗೆ ನಮೂದಿಸುತ್ತಿದ್ದರು. ಇಲ್ಲವೇ ತಮ್ಮಿಷ್ಟದ ವಾಹನಗಳ ನೋಂದಣಿ ಸಂಖ್ಯೆ ಅಪ್ಲೋಡ್ ಮಾಡಿ ಪೋರ್ಟರ್ ಚಾಲಕನ ಐಡಿ ಸೃಷ್ಟಿಸುತ್ತಿದ್ದರು.
ಆಡಿಟ್ ವೇಳೆ ವಂಚನೆ ಬೆಳಕಿಗೆ:
ಇತ್ತೀಚೆಗೆ ‘ಸ್ಮಾರ್ಟ್ ಶಿಫ್ಟ್ ಲಾಜಿಸ್ಟಿಕ್ಸ್ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್’ ಕಂಪನಿಯ ವ್ಯವಹಾರದ ಲೆಕ್ಕಪರಿಶೋಧನೆ ವೇಳೆ ಕಂಪನಿಗೆ ₹90 ಲಕ್ಷ ನಷ್ಟ ಹಾಗೂ ವಂಚನೆ ಆಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಹೊರರಾಜ್ಯಗಳಲ್ಲಿಯೂ ವಂಚನೆ
ಆರೋಪಿಗಳು ಬೆಂಗಳೂರಿನಲ್ಲಿ ಇದ್ದುಕೊಂಡೇ ಜಿಯೋ ಸ್ಫೂಫಿಂಗ್ ಆ್ಯಪ್ ಬಳಸಿಕೊಂಡು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿಯೂ ಪೋರ್ಟರ್ ಕಂಪನಿಗಳಿಗೆ ವಂಚಿಸಿರುವುದು ತನಿಖೆಯಲ್ಲಿ ಬಯಲಾಗಿದೆ.
ವಂಚನೆ ಹಣದಿಂದ ವಿಲಾಸಿ ಜೀವನ
ಆರೋಪಿಗಳು ಈ ವಂಚನೆ ಹಣವನ್ನು ಸ್ವಂತ ಊರಿನಲ್ಲಿ ಮನೆ ನಿರ್ಮಾಣ, ವಿಲಾಸಿ ಜೀವನ, ಸಾಲ ತೀರಿಸಲು ಬಳಸಿಕೊಂಡಿದ್ದಾರೆ. ಸದ್ಯಕ್ಕೆ ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ಯಾವುದೇ ಹಣ ಪತ್ತೆಯಾಗಿಲ್ಲ. ನ್ಯಾಯಾಲಯದ ಅನುಮತಿ ಪಡೆದು ವಂಚನೆ ಹಣವನ್ನು ಜಪ್ತಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.