ಚಿನ್ನದ ವ್ಯಾಪಾರಿಗೆ ಹಲ್ಲೆ ನಡೆಸಿ ₹60 ಲಕ್ಷ ದರೋಡೆ: 5 ಸೆರೆ

KannadaprabhaNewsNetwork |  
Published : Dec 20, 2023, 01:15 AM IST
Asraf | Kannada Prabha

ಸಾರಾಂಶ

ಹಲವು ದಿನಗಳ ಹಿಂದೆ ರಾಬರ್ಸನ್‌ಪೇಟೆಯ ಗಿರವಿ ಅಂಗಡಿ ಮಾಲೀಕ ಸಂಕೇತ್ ಜೈನ್‌ ಅವರಿಗೆ ಸ್ನೇಹಿತರ ಮೂಲಕ ಕುರುಬರಹಳ್ಳಿಯಲ್ಲಿ ಜಿಮ್ ಮಾಲೀಕ ಮಹಮ್ಮದ್ ರಿಜ್ವಾನ್ ಪರಿಚಯವಾಗಿದೆ. ಆಗ ಜೈನ್‌ ಅವರ ಹಣಕಾಸು ವ್ಯವಹಾರದ ಬಗ್ಗೆ ತಿಳಿದ ರಿಜ್ವಾನ್‌, ಚಿನ್ನಾಭರಣ ವ್ಯಾಪಾರಿಯಿಂದ ಸುಲಿಗೆಗೆ ಸಂಚು ರೂಪಿಸಿದ್ದ!

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ನಗರಕ್ಕೆ ಕರೆಸಿಕೊಂಡು ಕೋಲಾರ ಜಿಲ್ಲೆಯ ಗಿರವಿ ಅಂಗಡಿ ಮಾಲೀಕನೊಬ್ಬನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ₹60 ಲಕ್ಷ ದೋಚಿದ್ದ ಐವರು ಕಿಡಿಗೇಡಿಗಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುರುಬರಹಳ್ಳಿಯ ಮಹಮ್ಮದ್ ರಿಜ್ವಾನ್, ಇಂದಿರಾನಗರದ ಸತೀಶ್, ದಿವಾಕರ್, ಮೊಹಮ್ಮದ್ ಇರ್ಪಾನ್ ಹಾಗೂ ರಾಜಾಜಿನಗರದ ಆಶ್ರಫ್ ಬಂಧಿತರಾಗಿದ್ದು, ಆರೋಪಿಗಳಿಂದ ₹55 ಲಕ್ಷ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಡಿಮೆ ಬೆಲೆಗೆ ಚಿನ್ನ ಖರೀದಿಗೆ ಬಂದು ದರೋಡೆಗೆ ಒಳಗಾದ ಬಗ್ಗೆ ಬಸವೇಶ್ವರ ನಗರ ಠಾಣೆಗೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ರಾಬರ್ಸನ್‌ಪೇಟೆಯ ಗಿರವಿ ಅಂಗಡಿ ಮಾಲೀಕ ಸಂಕೇತ್ ಜೈನ್‌ ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ನೇಹದ ಸೋಗಿನಲ್ಲಿ ವ್ಯಾಪಾರಿಗೆ ಸ್ಕೆಚ್‌:

ಹಲವು ದಿನಗಳ ಹಿಂದೆ ರಾಬರ್ಸನ್‌ಪೇಟೆಯ ಗಿರವಿ ಅಂಗಡಿ ಮಾಲೀಕ ಸಂಕೇತ್ ಜೈನ್‌ ಅವರಿಗೆ ಸ್ನೇಹಿತರ ಮೂಲಕ ಕುರುಬರಹಳ್ಳಿಯಲ್ಲಿ ಜಿಮ್ ಮಾಲೀಕ ಮಹಮ್ಮದ್ ರಿಜ್ವಾನ್ ಪರಿಚಯವಾಗಿದೆ. ಆಗ ಜೈನ್‌ ಅವರ ಹಣಕಾಸು ವ್ಯವಹಾರದ ಬಗ್ಗೆ ತಿಳಿದ ರಿಜ್ವಾನ್‌, ಚಿನ್ನಾಭರಣ ವ್ಯಾಪಾರಿಯಿಂದ ಸುಲಿಗೆಗೆ ಸಂಚು ರೂಪಿಸಿದ್ದ. ಅಂತೆಯೇ ದುಬೈ ಗೆಳೆಯರ ಮೂಲಕ ಕಡಿಮೆ ಬೆಲೆಗೆ ಚಿನ್ನದ ಗಟ್ಟಿಯನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದ. ನಿಮಗೆ ಬೇಕಾದರೆ ಅದೇ ಬೆಲೆಯಲ್ಲಿ ಕೊಡುವುದಾಗಿ ಜೈನ್‌ ಬಳಿ ರಿಜ್ವಾನ್ ಪ್ರಸ್ತಾಪವಿಟ್ಟಿದ್ದ.

ಈ ಆಮಿಷಕ್ಕೊಳಗಾದ ಜೈನ್‌, ಹಣ ಹೊಂದಿಸಲು ಸಮಯ ಕೇಳಿದ್ದರು. ಕೆಲ ದಿನಗಳ ಬಳಿಕ ಮತ್ತೆ ಜೈನ್‌ ಅವರನ್ನು ಸಂಪರ್ಕಿಸಿದ ರಿಜ್ವಾನ್‌, ದುಬೈಯಿಂದ ಒಂದು ಕೆಜಿ ಚಿನ್ನ ಬರಲಿದ್ದು, ನೀವು ಹಣ ನೀಡಿದರೆ ಕೊಡುವುದಾಗಿ ಆಫರ್ ಕೊಟ್ಟಿದ್ದ. ಕೊನೆಗೆ ಡಿ.11ರಂದು ಚಿನ್ನ ಖರೀದಿಗೆ ನಗರಕ್ಕೆ ಬರುವಾಗಿ ಜೈನ್‌ ಹೇಳಿದ್ದರು.

ಅಷ್ಚರಲ್ಲಿ ಜೈನ್‌ ಹಣ ದರೋಡೆ ಕೃತ್ಯಕ್ಕೆ ತನ್ನ ಸಹಚರರನ್ನು ಸೇರಿಸಿ ರಿಜ್ವಾನ್ ತಂಡ ಕಟ್ಟಿದ್ದ. ಪೂರ್ವಯೋಜಿತ ಸಂಚಿನಂತೆ ಡಿ.11ರ ಮಧ್ಯಾಹ್ನ 12 ಗಂಟೆಗೆ ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿಗೆ ಸಂಕೇತ್ ಹಣದೊಂದಿಗೆ ತೆರಳಿದ್ದರು. ಆಗ ಕಾರಿನಲ್ಲಿ ಕಾಯುತ್ತಿದ್ದ ರಿಜ್ವಾನ್ ಮತ್ತು ಸ್ನೇಹಿತರು, ತಮ್ಮ ಕಾರಿಗೆ ಸಂಕೇತ್‌ರನ್ನು ಹತ್ತಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಣವಿದ್ದ ಬ್ಯಾಗ್ ಕಸಿದುಕೊಂಡರು. ತರುವಾಯ ಬಸವೇಶ್ವರ ನಗರದ ಆದರ್ಶ್‌ ಲೇಔಟ್‌ ಸಮೀಪದ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಕಾರಿನಿಂದ ಸಂಕೇತ್‌ರನ್ನು ತಳ್ಳಿ ರಿಜ್ವಾನ್ ಗ್ಯಾಂಗ್ ಪರಾರಿಯಾಗಿತ್ತು. ಸ್ಥಳೀಯರ ಸಹಾಯದಿಂದ ಸಂಕೇತ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಸವೇಶ್ವರ ನಗರ ಠಾಣೆಗೆ ದೂರು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಾವನ ಹೆಸರು ಹೇಳಿ ದರೋಡೆ: ದುಬೈನಲ್ಲಿ ರಿಜ್ವಾನ್ ಮಾವನ ಚಿನ್ನಾಭರಣ ವ್ಯಾಪಾರಿ ಆಗಿದ್ದು, ಹಲವು ವರ್ಷಗಳಿಂದ ಸಂಕೇತ್‌ಗೆ ರಿಜ್ವಾನ್‌ ಮಾವ ಚಿರಪರಿಚಿತರು. ಈ ಸ್ನೇಹದಲ್ಲಿ ಇಬ್ಬರ ನಡುವೆ ಚಿನ್ನದ ವ್ಯಾಪಾರ ಸಹ ನಡೆದಿತ್ತು. ಹೀಗಾಗಿ ಸಂಕೇತ್ ಹಾಗೂ ರಿಜ್ವಾನ್ ಮಧ್ಯೆ ಸ್ನೇಹವಾಯಿತು. ಜೈನ್‌ ಹಣಕಾಸು ವ್ಯವಹಾರ ತಿಳಿದು ದರೋಡೆಗೆ ರಿಜ್ವಾನ್ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕುಡಿದು ಕಾರ್‌ ಓಡಿಸಿ ಅಪಘಾತ : ಮಯೂರ್ ವಿರುದ್ಧ ಕೇಸ್‌
ಬಿಲ್ಡರ್‌ ಮನೇಲಿ 18 ಕೋಟಿ ಮೌಲ್ಯದಚಿನ್ನ ಕದ್ದವರ ಪತ್ತೆಗೆ 3 ವಿಶೇಷ ತಂಡ