ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರಿನ ಹಳೇ ಒಕ್ಕಲಿಗರ ಬೀದಿಯಲ್ಲಿ ವಾಸವಾಗಿದ್ದ ರೌಡಿಶೀಟರ್ ಯಶ್ವಂತ್ ಅಲಿಯಾಸ್ ಕಜ್ಜಿ ಅಲಿಯಾಸ್ ಅಭಿ ಹಲ್ಲೆಯಿಂದ ತೀವ್ರ ರಕ್ತಸ್ತ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಈತನ ಸಹಚರರಾದ ಗೊರವನಹಳ್ಳಿಯ ದರ್ಶನ್ ಮತ್ತು ಸಚ್ಚಿನ್ ಗಾಯಗೊಂಡು ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಹತ್ಯೆಗೊಳಗಾಗಿರುವ ರೌಡಿಶೀಟರ್ ಯಶ್ವಂತ್ ಮೂಲತಃ ಕೊಪ್ಪ ಹೋಬಳಿ ಮರಳಿಗ ಗ್ರಾಮದವನು. ಮದ್ದೂರಿನಲ್ಲಿ ವಾಸ ಮಾಡಿಕೊಂಡು ಎಳನೀರು ಸಾಗಿಸುವ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ 8 ಗಂಟೆ ಸಮಯದಲ್ಲಿ ಪಟೇಲ್ ಸಾಮಿಲ್ ಬಳಿ ಯಶ್ವಂತ್ ಬೆಂಬಲಿಗರು ಹಾಗೂ ವಿರೋಧಿಗಳ ಗುಂಪಿನ ನಡುವೆ ಸಿಗರೇಟ್ ವಿಚಾರಕ್ಕಾಗಿ ಕಳೆದ ಎರಡು ದಿನಗಳ ಹಿಂದೆ ಗಲಾಟೆಯಾಗಿತ್ತು.ಈ ದ್ವೇಷದ ಹಿನ್ನೆಲೆಯಲ್ಲಿ ಗೊರವನಹಳ್ಳಿಯ ರೋಹಿತ್, ಮಹೇಶ್, ಲಂಕೇಶ್ ಅವರು ನಿನ್ನೆ ರಾತ್ರಿ ರಾಜೀ ಪಂಚಾಯ್ತಿ ನೆಪದಲ್ಲಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಹೇಶ್, ಲಂಕೇಶ್, ರೋಹಿತ್ ಬೆಂಬಲಿಗರ ಸುಮಾರು 30 ಮಂದಿಯ ಗುಂಪು ಯಶ್ವಂತ್ ಮೇಲೆ ಮರದ ರಿಪೀಸ್ ಪಟ್ಟಿಗಳಿಂದ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಇದರಿಂದ ಅಸ್ವಸ್ಥಗೊಂಡು ಕೆಳಕ್ಕೆ ಕುಸಿದ ಯಶ್ವಂತ್ ರಕ್ಷಣೆಗಾಗಿ ಧಾವಿಸಿದ ದರ್ಶನ್ ಮತ್ತು ಸಚ್ಚಿನ್ ಮೇಲೆಯೂ ರೋಹಿತ್ ಬೆಂಬಲಿಗರ ಮೇಲೆ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮದ್ದೂರು ಪೊಲೀಸರು, ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದ ಯಶ್ವಂತ್ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ.
ಹತ್ಯೆಯಾಗಿರುವ ಯಶ್ವಂತ್ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಾದ ನಂತರ ಮದ್ದೂರು ಠಾಣೆ ಪೊಲೀಸರು ನಾಲ್ಕು ಕೊಲೆ ಪ್ರಯತ್ನದ ಪ್ರಕರಣ ದಾಖಲು ಮಾಡಿಕೊಂಡ ನಂತರ ರೌಡಿಶೀಟರ್ ತೆರೆದಿದ್ದರು.
ಕೆ.ಆರ್.ಪೇಟೆ: ಆಸ್ತಿ ವಿಚಾರವಾಗಿ ದಾಯಾದಿಗಳ ನಡುವೆ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಾಟನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಸೋಮೇಗೌಡ, ವಸಂತ್, ನಿಶಾಂತ್ ಎಂಬುವವರು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪಿತ್ರಾರ್ಜಿತ ಜಮೀನಿಗೆ ರಸ್ತೆ ಬಿಡುವ ವಿಚಾರವಾಗಿ ದಾಯಾದಿಗಳ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಒಂದು ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಉಗ್ರೇಗೌಡ, ವೇಣು, ನೂತನ್, ಪ್ರಕಾಶ್, ಸೋಮೇಶ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.