ಬೆಂಗಳೂರು : ಭೋಗ್ಯಕ್ಕೆ ಮನೆ ಕೊಡಿಸುವುದಾಗಿ ಜನರಿಗೆ ನಂಬಿಸಿ ಲಕ್ಷಾಂತರ ರು. ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಖಾಸಗಿ ಕಂಪನಿ ಮಾಲಿಕನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹೆಣ್ಣೂರು ನಿವಾಸಿ ಖಲೀಲ್ ಷರೀಫ್ ಬಂಧಿತನಾಗಿದ್ದು, ಈ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಸೈಯದ್ ಅಹಮದ್ ಹುಸೇನ್ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ಭೋಗ್ಯದ ನೆಪದಲ್ಲಿ ಜನರಿಗೆ ವಂಚಿಸಿದ ಬಗ್ಗೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ವಂಚನೆ ಕುರಿತು ಸಿಸಿಬಿ ತನಿಖೆಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶದಂತೆ ಕಾರ್ಯಾಚರಣೆಗಿಳಿದ ಸಿಸಿಬಿ ತಂಡ ಒಬ್ಬನನ್ನು ಬಂಧಿಸಿದೆ.
ವಂಚನೆ ಹೇಗೆ:
ಟ್ಯಾಂಜನೈಟ್ ರಿಯಾಲಿಟಿ ಇಂಡಿಯಾ ಹೆಸರಿನ ಕಂಪನಿ ಸ್ಥಾಪಿಸಿದ್ದ ಸೈಯದ್ ಹಾಗೂ ಖಲೀಲ್, ತಮ್ಮ ಕಂಪನಿ ಮೂಲಕ ಕಡಿಮೆ ಮೊತ್ತದಲ್ಲಿ ಭೋಗ್ಯಕ್ಕೆ ಮನೆ ಕೊಡಿಸುವುದಾಗಿ ಓಎಲ್‌ಎಕ್ಸ್ ಸೇರಿದಂತೆ ಸಾಮಾಜಿ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಹೀಗೆ ಬಲೆಗೆ ಬೀಳುವವರಿಗೆ ನಾಜೂಕಿನ ಮಾತಿನಿಂದ ಆರೋಪಿಗಳು ಮರಳು ಮಾಡುತ್ತಿದ್ದರು. ಸೈಯದ್ ಹಾಗೂ ಖಲೀಲ್ ಮೊದಲಿಗೆ ಮನೆ ಹಾಗೂ ಫ್ಲ್ಯಾಟ್‌ಗಳನ್ನು ಭೋಗ್ಯದ ಹೆಸರಿನಲ್ಲಿ ಜನರಿಂದ ಹಣ ಪಡೆದು ಒಪ್ಪಂದ ಮಾಡಿಸುತ್ತಿದ್ದರು. ಇತ್ತ ಆ ಮನಗಳ ಮಾಲಿಕರ ಬಳಿ ಬಾಡಿಗೆಗೆ ಎಂದು ಹೇಳುತ್ತಿದ್ದರು. ಆರಂಭದಲ್ಲಿ ಎರಡ್ಮೂರು ತಿಂಗಳು ಬಾಡಿಗೆ ಪಾವತಿಸಿ ಆನಂತರ ಆರೋಪಿಗಳು ಸಂಪರ್ಕ ಕಡಿತಗೊಳಿಸುತ್ತಿದ್ದರು. ಕೊನೆಗೆ ಬಾಡಿಗೆದಾರರ ಬಳಿ ಮನೆ ಮಾಲಿಕ ಬಂದಾಗಲೇ ಮೋಸ ಬಯಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಈ ವಂಚನೆ ಸಂಬಂಧ ಸಂಪಿಗೆಹಳ್ಳಿ, ರಾಮಮೂರ್ತಿನಗರ, ಕೊತ್ತನೂರು, ರಾಜಾನುಕುಂಟೆ ಹಾಗೂ ದೇವನಹಳ್ಳಿ ಸೇರಿ ಇತರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಕೃತ್ಯ ಬಯಲಾದ ಬಳಿಕ ತಲೆಮರೆಸಿಕೊಂಡಿದ್ದ ಖಲೀನ್‌ನನ್ನು ಬಂಧಿಸಿದ ಸಿಸಿಬಿ, ಮತ್ತೊಬ್ಬ ವಂಚನಿಗೆ ಬೇಟೆ ಮುಂದುವರೆಸಿದೆ ಎನ್ನಲಾಗಿದೆ.
ಲಂಕ್ಷಾತರ ರು. ಹಣ ಪಡೆದು ಪಂಗನಾಮ:
ಕೊತ್ತನೂರಿನಲ್ಲಿ ವಿನಯ್ ಎಂಬುವವರಿಗೆ ಇಂದಿರಾ ಎನ್ ಕ್ಲೇವ್ ಅಪಾರ್ಟ್‌ಮೆಂಟ್ ಫ್ಲ್ಯಾಟ್ ಭೋಗ್ಯದ ಹೆಸರಿನಲ್ಲಿ ₹12 ಲಕ್ಷ, ರಾಮಮೂರ್ತಿನಗರದ ಕಾವ್ಯ ಎಂಬುವರಿಗೆ ನೋ ಬ್ರೋಕರ್ ಡಾಟ್ ಕಾಮ್‌ನಲ್ಲಿ ಪರಿಚಿತರಾಗಿ 2 ಮನೆಗಳು ಬಾಡಿಗೆ ನೀಡಿ ₹29 ಲಕ್ಷ, ದೇವನಹಳ್ಳಿಯ ಸಲ್ಮಾಗೆ ಹೀರಾನಂದಾನಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಭೋಗ್ಯದ ₹20 ಲಕ್ಷ, ರಾಜಾನುಕುಂಟೆಯ ಪ್ರಿಯಚಂದನ್ ಗೋಪಿ ಎಂಬುವವರಿಗೆ ರಾಮ್ಕಿ ಒನ್ ಅಪಾರ್ಟ್ಮೆಂಟ್‌ನಲ್ಲಿ ಫ್ಲಾಟ್ ಲೀಸ್ ಹಾಕಿಸಿ ₹12 ಲಕ್ಷ ಹೀಗೆ ಹಲವರಿಗೆ ಆರೋಪಿಗಳು ವಂಚಿಸಿದ್ದಾರೆಂದು ಗೊತ್ತಾಗಿದೆ.