ದೇಶಾದ್ಯಂತ ಸ್ಲೀಪರ್‌ ಸೆಲ್‌ಗೆ ಬಳ್ಳಾರಿ ಉಗ್ರರಿಂದ ಸಂಚು!

ಸಾರಾಂಶ

2025ರ ವೇಳೆಗೆ ಭಾರತದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಸ್ಲೀಪರ್‌ಸೆಲ್‌ ಸ್ಥಾಪನೆ. ಈ ಸೆಲ್‌ ಸದಸ್ಯರ ಬಳಸಿಕೊಂಡು  ದಾಳಿ ನಡೆಸುವಂಥ ಸಂಚನ್ನು ಕಳೆದ ವರ್ಷ ಕರ್ನಾಟಕದ ಬಳ್ಳಾರಿಯಲ್ಲಿ ಬಯಲಿಗೆಳೆಯಲಾದ ಐಸಿಸ್‌ ಉಗ್ರರ ಗುಂಪು ರೂಪಿಸಿತ್ತು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ: 2025ರ ವೇಳೆಗೆ ಭಾರತದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಸ್ಲೀಪರ್‌ಸೆಲ್‌ ಸ್ಥಾಪನೆ. ಈ ಸೆಲ್‌ ಸದಸ್ಯರ ಬಳಸಿಕೊಂಡು ಸೇನೆ, ಪೊಲೀಸರು ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ನಾಯಕರ ಮೇಲೆ ದಾಳಿ ನಡೆಸುವಂಥ ಸಂಚನ್ನು ಕಳೆದ ವರ್ಷ ಕರ್ನಾಟಕದ ಬಳ್ಳಾರಿಯಲ್ಲಿ ಬಯಲಿಗೆಳೆಯಲಾದ ಐಸಿಸ್‌ ಉಗ್ರರ ಗುಂಪು ರೂಪಿಸಿತ್ತು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭೇದಿಸಲಾದ ಬಳ್ಳಾರಿ ಐಸಿಸ್‌ ಮಾಡ್ಯೂಲ್‌ ಮತ್ತು ಆ ಸಂಬಂಧ ಬಂಧಿತ ಕರ್ನಾಟಕದ ನಾಲ್ವರು ಸೇರಿದಂತೆ 7 ಜನರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಆರೋಪಪಟ್ಟಿ ದಾಖಲಿಸಿದ್ದು ಅದರಲ್ಲಿ ಈ ಗಂಭೀರ ವಿಷಯ ಬೆಳಕಿಗೆ ಬಂದಿದೆ.

ಕರ್ನಾಟಕದ ಮೊಹಮ್ಮದ್‌ ಸುಲೈಮಾನ್‌ ಮಿನಾಜ್‌, ಮೊಹಮ್ಮದ್‌ ಮುನಿರುದ್ದೀನ್‌, ಸಯ್ಯದ್‌ ಸಮೀರ್‌, ಮೊಹಮ್ಮದ್‌ ಮುಜಮ್ಮಿಲ್‌, ಮಹಾರಾಷ್ಟ್ರದ ಇಕ್ಬಾಲ್‌ ಷೇಕ್‌, ಜಾರ್ಖಂಡ್‌ನ ಮೊಹಮ್ಮದ್‌ ಶಹಬಾಜ್‌ ಮತ್ತು ದೆಹಲಿಯ ಶಯಾನ್‌ ರೆಹಮಾನ್‌ ವಿರುದ್ಧ ಎನ್‌ಐಎ ಆರೋಪಪಟ್ಟಿ ದಾಖಲಿಸಿದೆ.

ಭಾರೀ ದುಷ್ಕೃತ್ಯ:

ಬಂಧಿತ ವ್ಯಕ್ತಿಗಳು ಭಾರತದ ವಿರುದ್ಧ ಧರ್ಮಯುದ್ಧ ಸಾರಿ ದೇಶದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪಿಸುವ ಗುರಿ ಹೊಂದಿದ್ದರು. ಇದಕ್ಕಾಗಿ 2025ರ ವೇಳೆಗೆ ದೇಶದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಸ್ಲೀಪರ್‌ಸೆಲ್‌ (ಸಮಾಜದ ಮಖ್ಯವಾಹಿನಿಯಲ್ಲಿ ಇದ್ದುಕೊಂಡೇ ರಹಸ್ಯವಾಗಿ ಉಗ್ರ ಚಟುವಟಿಕೆ ನಡೆಸುವವರು) ಸ್ಥಾಪಿಸುವ ಗುರಿ ಹಾಕಿಕೊಂಡಿದ್ದರು. ಈ ಸ್ಲೀಪರ್‌ಸೆಲ್‌ಗಳ ಮೂಲಕ ಯೋಧರು, ಪೊಲೀಸರು ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ನಾಯಕರ ಮೇಲೆ ದಾಳಿಯ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಈ ಎಲ್ಲಾ ಕೃತ್ಯಗಳಿಗಾಗಿ ‘ಮುಜಾಹಿದೀನ್‌’ ಎಂದು ಕರೆಯಲ್ಪಡುವ ಕಾರ್ಯಕರ್ತರ ಪಡೆ ಕಟ್ಟುತ್ತಿದ್ದರು. ಅವರನ್ನು ತಮ್ಮ ಐಸಿಸ್‌ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳುವ ಕೃತ್ಯದಲ್ಲಿ ಇವರೆಲ್ಲಾ ಸಕ್ರಿಯರಾಗಿ ಭಾಗಿಯಾಗಿದ್ದರು ಎಂದು ಎನ್‌ಐಎ ತನ್ನ ಆರೋಪಪಟ್ಟಿಯಲ್ಲಿ ದಾಖಲಿಸಿದೆ.

ಕಳೆದ ವರ್ಷ ಬಂಧಿತರ ಮನೆ ಮೇಲೆ ನಡೆಸಿದ ದಾಳಿಯ ವೇಳೆ ಸ್ಫೋಟಕ ಪದಾರ್ಥ, ಹರಿತ ಶಸ್ತ್ರಾಸ್ತ್ರ, ಐಸಿಸ್‌ ಸಿದ್ದಾಂತದ ಕರಪತ್ರ, ಜಿಹಾದ್‌, ಆತ್ಮಾಹುತಿ ದಾಳಿ ಕುರಿತ ಪುಸ್ತಕಗಳನ್ನು ಎನ್‌ಐಎ ವಶಪಡಿಸಿಕೊಂಡಿತ್ತು.

Share this article