ಹಾಡಹಗಲೇ ಮಹಡಿ ಹತ್ತಿ ಮನೆಗಿಳಿದು ದರೋಡೆ ಮಾಡಿದ ಮೂವರ ಬಂಧನ

KannadaprabhaNewsNetwork | Updated : May 17 2025, 05:24 AM IST
Follow Us

ಸಾರಾಂಶ

ಮನೆಯೊಳಗೆ ಮಹಡಿ ಬಾಗಿಲ ಮೂಲಕ ಒಳ ಪ್ರವೇಶಿಸಿ ಜನರಿದ್ದಾಗಲೇ ನಗ-ನಾಣ್ಯ ದೋಚುತ್ತಿದ್ದ ಮೂವರು ಚಾಲಾಕಿ ಖದೀಮರು ಬಸವೇಶ್ವರನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

 ಬೆಂಗಳೂರು :  ಮನೆಯೊಳಗೆ ಮಹಡಿ ಬಾಗಿಲ ಮೂಲಕ ಒಳ ಪ್ರವೇಶಿಸಿ ಜನರಿದ್ದಾಗಲೇ ನಗ-ನಾಣ್ಯ ದೋಚುತ್ತಿದ್ದ ಮೂವರು ಚಾಲಾಕಿ ಖದೀಮರು ಬಸವೇಶ್ವರನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನ ಜೆ.ಸಿ. ನಗರದ ಮದನ್‌, ಆತನ ಸಹಚರರಾದ ಮನೋಜ್ ಹಾಗೂ ಹಿತೇಶ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ 382 ಗ್ರಾಂ ಚಿನ್ನಾಭರಣ ಹಾಗೂ 286 ಗ್ರಾಂ ಬೆಳ್ಳಿ ಸೇರಿ 36 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬಸವೇಶ್ವರ ನಗರದ ಸಾಯಿಬಾಬಾ ದೇವಾಲಯದ ಸಮೀಪ ಎರಡು ಮನೆಗಳಿಗೆ ಹಗಲು ಹೊತ್ತಲ್ಲೇ ಮನೆಯವರಿದ್ದಾಗಲೇ ಆಭರಣ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಸಿಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಕಳ್ಳರನ್ನು ಸೆರೆ ಹಿಡಿದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್‌ಗೆ ಅಟ್ಟಿದ್ದಾರೆ.

ಮಹಡಿ ಬಾಗಿಲು ತೆರೆದ ಮನೆ ಟಾರ್ಗೆಟ್‌

ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮದನ್ ತಂದೆ ಕೆಲಸ ಮಾಡುತ್ತಿದ್ದರು. ಆಗ ಮೊದ ಮೊದಲು ಆ ಕಟ್ಟಡಗಳಲ್ಲಿ ಕಬ್ಬಿಣ ಹಾಗೂ ತಾಮ್ರ ಕದ್ದು ಆತ ಹಣ ಸಂಪಾದಿಸುತ್ತಿದ್ದ. ಆದರೆ ದೊಡ್ಡ ಮೊಟ್ಟದ ಹಣ ಗಳಿಸಲು ಯೋಜಿಸಿದ್ದ ಆತ, ಮನೆಗಳ ಬಾಗಿಲು ಮುರಿಯದೆ ಕಳ್ಳತನಕ್ಕೆ ಸಿದ್ಧತೆ ನಡೆಸಿದ್ದ. ಬಾಲ್ಯದಿಂದಲೂ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಅಡ್ಡಾಡುತ್ತಿದ್ದರಿಂದ ಆತನಿಗೆ ಮಹಡಿಯಿಂದ ಮಹಡಿಗೆ ಜಿಗಿಯುವುದು ಕರಗತವಾಗಿತ್ತು. ಅಂತೆಯೇ ನಿರ್ಮಾಣ ಹಂತದ ಕಟ್ಟಡಗಳಿಗೆ ತೆರಳುತ್ತಿದ್ದ ಮದನ್, ಆ ಕಟ್ಟಡದ ಮಹಡಿಯಿಂದ ನಿಂತು ಸುತ್ತಲು ನೋಡುತ್ತಿದ್ದ. ಆಗ ಮಹಡಿ ಬಾಗಿಲು ತೆರೆದ ಮನೆಗಳನ್ನು ಗುರುತಿಸಿ ತನ್ನ ಕೈ ಚಳಕ ತೋರಿಸುತ್ತಿದ್ದ. ಹೀಗೆ ಕದ್ದ ಆಭರಣಗಳನ್ನು ತನ್ನ ಸ್ನೇಹಿತರಾದ ಮನೋಜ್ ಹಾಗೂ ಹಿತೇಶ್ ಮೂಲಕ ಮದನ್ ವಿಲೇವಾರಿ ಮಾಡಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಅದೇ ರೀತಿ ಮೇ 3 ರಂದು ಬಸವೇಶ್ವರನಗರದ ಸಾಯಿಬಾಬಾ ದೇಗುಲದ ಸಮೀಪ ಎರಡು ಮನೆಗಳಿಗೆ ಮಹಡಿ ಬಾಗಿಲು ಒಳ ಪ್ರವೇಶಿಸಿ ಚಿನ್ನ, ಬೆಳ್ಳಿ ಹಾಗೂ ಹಣ ಸೇರಿದಂತೆ ಕೈಗೆ ಸಿಕ್ಕಿದ್ದನ್ನು ಆತ ದೋಚಿದ್ದ. ಒಂದೇ ದಿನದಲ್ಲಿ ಕೆಲವೇ ತಾಸುಗಳ ಅಂತರದಲ್ಲಿ ನಡೆದಿದ್ದ ಈ ಎರಡು ಕೃತ್ಯಗಳ ಮಧ್ಯೆ ಸಾಮ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಜಾಗೃತರಾದ ಪೊಲೀಸರು, ಆ ಮನೆಗಳ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಖದೀಮರ ಜಾಡು ಸಿಕ್ಕಿದೆ. ಈ ಕೃತ್ಯ ಎಸಗಿದ ಮೂರೇ ದಿನದಲ್ಲಿ ಕಳ್ಳರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಟೋ ಚಾಲಕ, ಟ್ಯಾಟೋ ಸ್ಟಾರ್:

ಈ ಆರೋಪಿಗಳ ಪೈಕಿ ಕೆಲಸವಿಲ್ಲದ ಮದನ್‌ಗೆ ಕಳ್ಳತನವೇ ವೃತ್ತಿಯಾಗಿತ್ತು. ಇನ್ನುಳಿದವರಲ್ಲಿ ಮನೋಜ್ ಆಟೋ ಚಾಲಕನಾಗಿದ್ದರೆ, ಹಿತೇಸ್ ಟ್ಯಾಟೋ ಕಲಾವಿದನಾಗಿ ಕೆಲಸ ಮಾಡುತ್ತಿದ್ದರು. ಹಣದಾಸೆಗೆ ಸ್ನೇಹಿತನಿಗೆ ಸಾಥ್ ಕೊಟ್ಟು ಇಬ್ಬರು ಜೈಲು ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Read more Articles on