ಬೆಂಗಳೂರು : ಖ್ಯಾತಿ ಜ್ಯೋತಿಷಿ ಆನಂದ ಗುರೂಜಿ ಹಾಗೂ ಅವರ ಕುಟುಂಬದವರ ಕುರಿತು ಅಶ್ಲೀಲ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಸಿ ಹಣ ಸುಲಿಗೆಗೆ ಯತ್ನಿಸಿದ್ದ ಆರೋಪದ ಮೇಲೆ ಖಾಸಗಿ ಸುದ್ದಿವಾಹಿನಿ ಮಾಜಿ ನಿರೂಪಕಿ ದಿವ್ಯಾ ವಂಸತ್ ಮತ್ತು ಆಕೆಯ ಸ್ನೇಹಿತ ಕೃಷ್ಣ ಮೂರ್ತಿ ಎಂಬಾತನ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ದಿವ್ಯಾ ವಂಸತಳ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದರು. ಆದರೆ ಆಕೆ ಜಾಮೀನು ಪಡೆದು ಬಂಧನದಿಂದ ಪರಾರಿಯಾಗಿದ್ದಾಳೆ. ಕಳೆದ ತಿಂಗಳು ಜ್ಯೋತಿಷಿ ಆನಂದ ಗುರೂಜಿ ಅವರ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ.
ಜ್ಯೋತಿಷಿ ದೂರಿನ ವಿವರ:
ಕಳೆದ ವರ್ಷ ಆ.26 ರಂದು ಆಶ್ರಮದ ಬಳಿ ನನ್ನ ಕಾರನ್ನು ಏಕಾಏಕಿ ಅಡ್ಡಗಟ್ಟಿ ಅಪರಿಚಿತರು ಅವಾಚ್ಯ ಪದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿದರು. ನನ್ನ ಹಾಗೂ ನನ್ನ ಕುಟಂಬದವರ ಮೇಲೆ ಅಪಪ್ರಚಾರ ಮಾಡುವ ಹಾಗೂ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟರು. ನಾನು ಹಣ ಕೊಡಲು ನಿರಾಕರಿಸಿದಾಗ ಕೊಲೆ ಬೆದರಿಕೆ ಹಾಕಿದ್ದರು ಎಂದು ಗುರೂಜಿ ಆರೋಪಿಸಿದ್ದಾರೆ.
ಕೆಲ ದಿನಗಳ ನಂತರ ನಮ್ಮ ಆಶ್ರಮಕ್ಕೆ ಬಂದು ವಿಡಿಯೋಗಳನ್ನು ತೋರಿಸಿ ಯುಟ್ಯೂಬ್ ಚಾನೆಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡಿ ಮಾನಹಾನಿ ಮಾಡುತ್ತೇನೆ ಎಂದು ಕೃಷ್ಣಮೂರ್ತಿ ಬೆದರಿಸಿದ್ದ. ನಂತರ 2024ರ ಆಗಸ್ಟ್ 28 ರಂದು ‘ಸಾಮ್ರಾಟ್ ಟಿ.ವಿ’ ಎಂಬ ಹೆಸರಿನ ಯೂಟ್ಯೂಬ್ ವಾಹಿನಿಯಲ್ಲಿ ಆ ವಿಡಿಯೋಗಳನ್ನು ಹಾಕಿ ಮಾನಸಿಕ ಹಿಂಸೆ ನೀಡಲಾಗಿತ್ತು. ಈ ವಿಡಿಯೋಗಳು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಯಿತು.
ಇದರ ಹೊರತಾಗಿಯೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮತ್ತೆ ಸಾಮ್ರಾಟ್ ಟಿವಿ ಹಾಗೂ ಮುಖವಾಡ ಲೈವ್ ಕನ್ನಡ ಎಂಬ ಚಾನೆಲ್‌ನಲ್ಲಿ ಕೃಷ್ಣ ಮೂರ್ತಿ ಹಾಗೂ ದಿವ್ಯಾ ವಸಂತ ವಿಡಿಯೋ ಪ್ರಸಾರ ಮಾಡಿದ್ದರು. ಈ ಅಶ್ಲೀಲ ವಿಡಿಯೋಗಳನ್ನು ಮುಂದಿಟ್ಟು ಮೂರನೇ ವ್ಯಕ್ತಿಯಿಂದ ಆ ಇಬ್ಬರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿದ್ದಾರೆ. ಗುರೂಜಿ ದೂರು ಆಧರಿಸಿ ಚಿಕ್ಕಜಾಲ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದರು. ಬಳಿಕ ಕೃಷ್ಣಮೂರ್ತಿ ಬಂಧನವಾಯಿತು. ಅಷ್ಟರಲ್ಲಿ ನ್ಯಾಯಾಲಯದಿಂದ ದಿವ್ಯಾ ವಸಂತ ಜಾಮೀನು ಪಡೆದಳು ಎಂದು ಪೊಲೀಸರು ತಿಳಿಸಿದ್ದಾರೆ.